ಬೆಳೆ ವಿಮೆ ಎಂದರೆ ಮೂಗು ಮುರಿಯುವವರಿಗೆ ಚಿ.ನಾ.ಹಳ್ಳಿಯ ಜನತೆ ಉತ್ತರ ನೀಡಿದ್ದಾರೆ. ಸಂಚಲನ ಅವರು ಕೃಷಿ ಇಲಾಖೆಯ ಮೇಲೆ ಬೆಳಕು ಚೆಲ್ಲಿದ ವರದಿ ಜಿಲ್ಲೆಯ ಕೃಷಿಕರಿಗಾಗಿ…
ಚಿಕ್ಕನಾಯಕನಹಳ್ಳಿ : ಬೆಳೆ ವಿಮೆ ಇದ್ದರೆ, ಅತೀವೃಷ್ಟಿ ಅಥವಾ ಅನಾವೃಷ್ಟಿ ತರಹದ ಯಾವುದೇ ಬಗೆಯಿಂದ ಬೆಳೆ ಹಾನಿಯಾದರೂ ರೈತರು ದುಗುಡ ಪಡಬೇಕಿಲ್ಲ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದರು.
ಕಡಿಮೆ ಖರ್ಚು ಲಾಭ ಹೆಚ್ಚು ಧ್ಯೇಯವಾಕ್ಯದಡಿ ರೈತರಿಗಾಗಿ ಬೆಳೆ ವಿಮೆ ಜಾರಿಯಲ್ಲಿದೆ. ರೈತರು ನಿರಾತಂಕವಾಗಿ ಇದರ ಲಾಭ ಪಡೆದುಕೊಳ್ಳಬೇಕು. ಈ 2023-24’ನೇ ಸಾಲಿನಲ್ಲಿ ನಮ್ಮ ರೈತರು ಬೆಳೆ ವಿಮೆಗೆ ಪಾವತಿಸಿದ ಕಂತಿನ ಮೊತ್ತ 48 ಲಕ್ಷ ರೂಪಾಯಿಗಳಷ್ಟು. ಆದರೆ, ಮಳೆ ಅಭಾವ, ಬರ ಪರಿಸ್ಥಿತಿ ತರಹದ ನಾನಾ ಕಾರಣಗಳಿಂದ ರೈತರ ಬೆಳೆ ನಷ್ಟವಾಗಿತ್ತು. ಆಗ, ವಿಮಾ ಕಂಪನಿಗಳಿಂದ ರೈತರಿಗೆ ಸಿಕ್ಕ ವಿಮಾಹಣ 7 ಕೋಟಿ 23 ಲಕ್ಷ ರೂಪಾಯಿಗಳಷ್ಟು.
ಬೆಳೆ ನಷ್ಟ ಮತ್ತು ಬರ ಪರಿಸ್ಥಿತಿಯಿಂದಾಗಿ ಪರದಾಡುತ್ತಿದ್ದ ರೈತರಿಗೆ ಇದು ವರದಾನವಾಯಿತು. ಹಾಗಾಗಿ, ಈ ಬಾರಿಯೂ ರೈತರು ಮುನ್ನೆಚ್ಚರಿಕೆಯ ದೃಷ್ಟಿಯಿಂದ ತ್ವರಿತವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ಉಚಿತ. ರೈತರು ರೈತ ಸಂಪರ್ಕ ಕೇಂದ್ರದೊಂದಿಗೆ ಸತತ ಸಂಪರ್ಕವನ್ನು ಇಟ್ಟುಕೊಳ್ಳುವುದು ಅತ್ಯಗತ್ಯ. ಈ ವಿಚಾರದಲ್ಲಿ ಯಾರೂ ಯಾವುದೇ ಹಿಂಜರಿಕೆ ಇಟ್ಟುಕೊಳ್ಳಬಾರದು ಎಂದು ಅವರು ತಿಳಿಸಿದರು.
ಅಲ್ಪ ಮೊತ್ತದ ವಿಮಾ ವಂತಿಗೆಯನ್ನು ಪಾವತಿಸಿ ಬೆಳೆ ವಿಮೆ ಮಾಡಿಸಿಕೊಳ್ಳುವ ರೈತರ ಬೇಳೆಯೇನಾದರೂ ನಷ್ಟಕ್ಕೊಳಗಾದರೆ, ಆಗ ನಷ್ಟದ ಪ್ರಮಾಣಕ್ಕನುಗುಣವಾಗಿ ಸಿಗುವ ವಿಮಾ ಮೊತ್ತ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಲಿದೆ. ಬೆಳೆ ಹಾನಿ ಅಥವಾ ನಷ್ಟದ ಮಾಹಿತಿಯನ್ನು ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಗೆ ನೀಡಬೇಕು.
ಹೆಸರು(ಮಳೆಯಾಶ್ರಿತ) ಬೆಳೆಗೆ ವಿಮೆ ಮಾಡಿಸಿಕೊಳ್ಳಲು ಇದೇ ಜುಲೈ 1’ನೇ ತಾರೀಕು ಕಡೆ ದಿನ. ಹಾಗಾಗಿ ಹೆಸರು ಬೆಳೆಯುತ್ತಿರುವ ರೈತರು ಶೀಘ್ರವೇ ಬೆಳೆವಿಮೆ ಮಾಡಿಸಿಕೊಳ್ಳುವುದು ಸೂಕ್ತ.
ರಾಗಿ, ಸಾಮೆ, ಹುರುಳಿ, ತೊಗರಿ ಬೆಳೆಗಳಿಗೆ ಬೆಳೆವಿಮೆ ಮಾಡಿಸಿಕೊಳ್ಳಲು ಆಗಸ್ಟ್ 16’ರವರೆಗೆ ಕಾಲಾವಕಾಶವಿದೆ. ಆದರೆ, ರೈತರು ಕಾಲ ವಿಳಂಬ ಮಾಡದೆ ತಾವು ಬೆಳೆಯುವ ಬೆಳೆಗಳಿಗೆ ಬೇಗನೇ ಬೆಳೆವಿಮೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕಡೇ ಘಳಿಗೆಯಲ್ಲಿ ತಲೆದೋರುವ ತಾಂತ್ರಿಕ ದೋಷ, ಸರ್ವರ್ ಬ್ಯುಜ಼ಿ ಅಥವಾ ರೈತರ ಕೃಷಿ ಕಾರ್ಯಗಳ ಒತ್ತಡ ತರಹದ ಕಾರಣಗಳಿಂದಾಗಿ ಯಾವ ರೈತರೂ ಬೆಳೆವಿಮೆ ಲಾಭದಿಂದ ವಂಚಿತರಾಗಬಾರದು. ಇದರ ಮಹತ್ವವನ್ನು ರೈತ ಸಮಾಜಕ್ಕೆ ಮನವರಿಕೆ ಮಾಡಿಕೊಡಲು ಇಲಾಖೆಯ ವತಿಯಿಂದ ಅರಿವು ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬಾಕ್ಸ್ ಐಟಮ್::
ಬೆಳೆ ವಿಮೆ ಪಾವತಿ ವಂತಿಗೆ :
ಹೆಸರು-ಮಳೆಯಾಶ್ರಿತ 269 ರೂ.
ತೊಗರಿ-ಮಳೆಯಾಶ್ರಿತ 388 ರೂ.
ಹುರುಳಿ-ಮಳೆಯಾಶ್ರಿತ 165 ರೂ.
ರಾಗಿ– ಮಳೆಯಾಶ್ರಿತ 344 ರೂ.
ಸಾಮೆ– ಮಳೆಯಾಶ್ರಿತ 228 ರೂ.
ಇದಿಷ್ಟೂ ತಾವು ಬೆಳೆಯುತ್ತಿರುವ ಬೆಳೆಯನುಸಾರ ರೈತರು ಪಾವತಿಸಬೇಕಾದ ವಿಮಾ ವಂತಿಗೆ.
ನಮ್ಮ ಬೆಳೆ ನಮ್ಮ ಹಕ್ಕು ::
ಈ ಹಿಂದೆ ಅಧಿಕಾರಿಗಳು ರೈತರ ಬೆಳೆ ಸಮೀಕ್ಷೆ ನಡೆಸಿ ವಿವರಗಳನ್ನು ನಮೂದಿಸಿಕೊಳ್ಳುತ್ತಿದ್ದರು. ಇನ್ನುಮುಂದೆ ರೈತರೇ ಸ್ವತಃ ತಾವು ಬೆಳೆದ ಬೆಳೆಗಳ ಸಮೀಕ್ಷೆ ನಡೆಸಿ ಅದರ ವಿವರಗಳನ್ನು ಆ್ಯಪ್’ನಲ್ಲಿ ನಮೂದಿಸಿಕೊಳ್ಳಲು ಸರ್ಕಾರ ರೈತರಿಗೇ ಅವಕಾಶ ಮಾಡಿಕೊಟ್ಟಿದೆ. ಸದ್ಯದಲ್ಲೇ ಚಾಲ್ತಿಗೆ ಬರಲಿರುವ ಈ ಆ್ಯಪ್’ನ್ನು ರೈತರು ಬಳಸುವ ವಿಧಾನಗಳ ಸಮಗ್ರ ತರಬೇತಿಯನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವುದು.
ತಾವು ಬೆಳೆದ ಬೆಳೆಗಳನ್ನು ತಾವೇ ಸಮೀಕ್ಷೆ ನಡೆಸುವ ಹಕ್ಕನ್ನು ಸರ್ಕಾರ ರೈತರಿಗೇ ನೀಡಿದೆ. ನಮ್ಮ ಬೆಳೆ-ನಮ್ಮ ಹಕ್ಕು ಯೋಜನೆಯ ಪ್ರಯೋಜನವನ್ನು ರೈತರು ಪಡೆದುಕೊಳ್ಳಲಿ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ಗುಂಪು ಕರೆ ::
ರೈತರಿಗೆ ಸರ್ಕಾರ ಕೊಡಮಾಡುವ ಎಲ್ಲ ಸವಲತ್ತುಗಳು ಮತ್ತು ಆರ್ಥಿಕ ಸಹಾಯ-ಸೌಕರ್ಯಗಳನ್ನು ಚಾಚೂತಪ್ಪದೆ ಒದಗಿಸಿಕೊಡಬೇಕೆಂಬ ದೃಢ ನಂಬಿಕೆಯ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್’ರವರು, ರೈತರ ಗುಂಪು ಕರೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ವಾರದ ಒಂದು ದಿನ ರೈತರ ಗುಂಪು ಕರೆ ಕಾರ್ಯಕ್ರಮವನ್ನು ನಡೆಸಲು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳಿಗೆ ರಾಜ್ಯ ಕೃಷಿ ಸಂಯೋಜಕ ಅಧಿಕಾರಿಗಳು ಒಂದು ಸ್ಲಾಟ್’ನ್ನು ನೀಡಿದ್ದಾರೆ. ಇದರ ಪರಿಣಾಮವಾಗಿ ಏಕ ಕಾಲದಲ್ಲಿ 4500 ದಿಂದ 5000 ಮಂದಿ ರೈತರ ಜೊತೆಗೆ ಗುಂಪು ಸಂವಹನ ಕರೆಯ ಮೂಲಕ ಕೃಷಿ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ತಲುಪಿಸಬಹುದು. ರೈತರು, ಪ್ರತಿನಿಧಿಗಳು, ಅಧಿಕಾರಿಗಳು ಚರ್ಚೆ-ಪರಾಮರ್ಶೆ ನಡೆಸಿ ರೈತರಿಗೆ ಕಾಲಾನುಕೂಲ ಉಪಯುಕ್ತ ಮಾಹಿತಿಯನ್ನು ತಿಳಿಸಬಹುದು.
ಗುಂಪು ಕರೆಯ ಮೋಡಿ…
ಗುಂಪು ಕರೆಯಲ್ಲಿ ಲಭ್ಯ ಮಾಹಿತಿಗಳು,
ಮಣ್ಣು ಮತ್ತು ನೀರಿನ ಪರೀಕ್ಷೆ, ಬಿತ್ತನೆ ಬೀಜ, ಬೀಜ ಮಾರಾಟ, ಗೊಬ್ಬರ, ಔಷಧ, ಯಂತ್ರೋಪಕರಣ ಲಭ್ಯತೆ, ಬೆಳೆ ಮಾಹಿತಿ, ಕೃಷಿ ತರಬೇತಿ, ಕೃಷಿ ಮೇಳಗಳ ಮಾಹಿತಿ, ಬ್ಯಾಂಕ್ ಖಾತೆ ಲಿಂಕ್, ಎಸ್ಎಂಎಸ್ ಸೇವಾ ಮಾಹಿತಿ, ರೈತರ ಆ್ಯಪ್, ಸರ್ಕಾರದ ಯೋಜನೆಗಳ ಮಾಹಿತಿ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಗಳ ಮಾಹಿತಿ, ಹವಾಮಾನ ಮಾಹಿತಿ, ಬೆಳೆವಿಮೆ, ಪಿಎಮ್ ಕಿಸಾನ್ ಮಾಹಿತಿ ತರಹದ ಹತ್ತು ಹಲವು ಮಾಹಿತಿಗಳು ಒಂದು ಗುಂಪು ಕರೆಯ ಮೂಲಕ ಸಾವಿರಾರು ರೈತರಿಗೆ ಲಭ್ಯವಾಗಲಿದೆ.
_________ವರದಿ: ಸಂಚಲನ