ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ ಗೇಟ್ ಬಳಿ ಸುಮಾರು 19 ಕೋಟಿ ರೂಪಾಯಿಗಳ ವೆಚ್ಚದಲ್ಲಿ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ಶಾಸಕ ಎಂ.ಟಿ.ಕೃಷ್ಣಪ್ಪ ಶನಿವಾರ ಚಾಲನೆ ನೀಡಿದರು. ಇದರಿಂದ ಗ್ರಾಮಸ್ಥರಲ್ಲಿ ಸಂತಸ ವ್ಯಕ್ತವಾಗಿದೆ.
ಈ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಇಲ್ಲಿನ ಏತ ನೀರಾವರಿ ಯೋಜನೆಯಿಂದ ವಿಠಲದೇವರಹಳ್ಳಿ ಮಾರ್ಗದಲ್ಲಿ ಸುಮಾರು 29 ಕೆರೆಗಳಿಗೆ ಹೇಮಾವತಿ ನೀರು ಸರಾಗವಾಗಿ ಹರಿಯಲಿದೆ. ದಬ್ಬೇಘಟ್ಟ ಹೋಬಳಿ ಹಿಂದಿನಿಂದಲೂ ನೀರಾವರಿಯಿಂದ ವಂಚಿತವಾಗುವ ಪ್ರದೇಶವಾಗಿದ್ದು ರೈತರು ತಮ್ಮ ಬೆಳೆಗಳು ಓಣಗದಂತೆ ಕಾಪಾಡಲು ಹರಸಾಹಸ ಪಡುತ್ತಾ ಬಂದಿದ್ದಾರೆ.
ಈ ಭಾಗದ ರೈತರುಗಳ ಸಂಕಷ್ಟ ಅರಿತೇ ಹೇಮಾವತಿ ನಾಲಾ ನೀರನ್ನು ದಬ್ಬೇಘಟ್ಟ ಹೋಬಳಿಯ ಎಲ್ಲಾ ಕೆರೆಕಟ್ಟೆಗಳಿಗೂ ಸರಾಗವಾಗಿ ಹರಿಸುವ ಕಾರ್ಯ ಕೈಗೂಡಲುವ ಸನಿಯದಲ್ಲಿದ್ದೇವೆ. ಈ ಮೂಲಕ ದಬ್ಬೇಘಟ್ಟ ಹೋಬಳಿಯ ಜನತೆಯ ಬಹು ದಿನಗಳ ಕನಸು ನನಸಾಗಲಿದೆ.
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡನೇ ಹಂತದ ದಬ್ಬೇಘಟ್ಟ, ಬಾಣಸಂದ್ರ, ಢಣನಾಯಕನಪುರ ಏತ ನೀರಾವರಿ ಯೋಜನೆಗೆ ಅಂಕಿತ ಹಾಕಿದ್ದರು. ಹಿಂದಿನ ಬಿಜೆಪಿ ಸರ್ಕಾರವು ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ 19 ಕೋಟಿ ಹಣ ಬಿಡುಗಡೆ ಮಾಡಿತ್ತು. ಮತ್ತೆ ಇದೇ ಯೋಜನೆಗೆ 30 ಕೋಟಿ ಬಿಡುಗಡೆಯಾಗಲಿದೆ.
ಈ ಹಿಂದೆ ಮೊದಲ ಹಂತದಲ್ಲಿ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದು ಮತ್ತೊಂದು ಹಂತದ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದ ದಬ್ಬೇಘಟ್ಟ ಏತ ನೀರಾವರಿ ಯೋಜನೆ ಶೀಘ್ರ ಚಾಲನೆಯಾಗಲಿದೆ ಅದರೊಂದಿಗೆ ಬಹುತೇಕ ಹೋಬಳಿಯ ಜಲಕ್ಷಾಮ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಗ್ರಾಮಪಂಚಾಯಿತಿ ಅಧ್ಯಕ್ಷೆ ರೂಪಾಜವರಪ್ಪ, ಎ.ಇ. ಮಧುಸೂಧನ್, ಮುಖಂಡರಾದ ದೇವರಾಜು, ನಂಜುಂಡಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಎಚ್.ಎಸ್.ನಾಗರಾಜು, ಬೋರೇಗೌಡ, ಸಂಗಲಾಪುರ ಶಂಕರಣ್ಣ, ತ್ಯಾಗರಾಜು ,ಹರಿದಾಸನಹಳ್ಳಿ ಶಶಿಧರ, ರಾಘು, ಸೇರಿದಂತೆ ಅನೇಕ ಮುಖಂಡರುಗಳು ಇದ್ದರು.