ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯಿಂದ ಚಾಕುವಳ್ಳಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸ್ಥಾಪನೆ
ತುರುವೇಕೆರೆ: ತಾಲ್ಲೂಕಿನಾದ್ಯಂತ ಸಾಮಾಜಿಕ,ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಜನುಪಯೋಗಿ ಸೇವಾ ಚಟುವಟಿಕೆಗಳನ್ನು ಪ್ರತಿ ವರ್ಷವೂ ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಇಂಡಿಯಾದಿಂದ ಮಾಡಲಾಗುತ್ತಿದೆ ಎಂದು ಕಾರ್ಖಾನೆಯ ಮುಖ್ಯಸ್ಥ ಪಿ.ಎಸ್.ಮೂರ್ತಿ ತಿಳಿಸಿದರು.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಇಂಡಿಯಾ ವತಿಯಿಂದ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಚಾಕುವಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಚಾಕುವಳ್ಳಿ ಗ್ರಾಮದಲ್ಲಿ ಸುಮಾರು ಒಂದು ನೂರು ಮನೆಗಳಿವೆ. ಸುಮಾರು 800 ಜನರು ವಾಸಿಸುತ್ತಿದ್ದಾರೆ. ಗ್ರಾಮಸ್ಥರಿಂದ ಹಲವು ಬಾರಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಂದು ಮನವಿ ಮಾಡಿದ್ದರು. ಈಗಾಗಲೇ ಬೇಸಿಗೆ ಸಮೀಪಿಸುತ್ತಿದ್ದು ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಮನಗಂಡು 3 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶುದ್ದಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ಈಗ ಗ್ರಾಮಸ್ಥರ ಬಳಕೆಗೆ ಅನುವು ಮಾಡಿಕೊಟ್ಟಿದ್ದೇವೆ ಎಂದರು.
ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಇಂಡಿಯಾದ ಡಿಜಿಎಂ ಎಚ್.ಆರ್.ಮಂಜುನಾಥ್ ಮಾತನಾಡಿ, ನಮ್ಮ ಪ್ಯಾಕ್ಟರಿಯಿಂದ ಈ ಭಾಗದ ಸಾವಿರಾರು ಜನರಿಗೆ ಉದ್ಯೋಗ ನೀಡಿ ಇದೀಗ ನಷ್ಟದಲ್ಲಿದ್ದರೂ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ದಂಡಿನಶಿವರ ಪಬ್ಲಿಕ್ ಶಾಲೆಗೆ ಒಂದು ಕಟ್ಟಡ ನಿರ್ಮಾಣ ಮತ್ತು ಡೆಸ್ಕ್ ನೀಡಲಾಗಿದೆ.
ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್, ಸಂಪಿಗೆಹೊಸಹಳ್ಳಿ, ಮುಗಳೂರು, ಸಿಗೇಹಳ್ಳಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಡಿಜಿಟಲ್ ಕೊಠಡಿಗಳ ನಿರ್ಮಾಣ, ಇಡೀ ತಾಲ್ಲೂಕಿನ ಗ್ರಾಮೀಣ ಶಾಲೆಗಳಿಗೆ 500 ಡೆಸ್ಕ್, ಅಂಗನವಾಡಿ ಕೇಂದ್ರಗಳಿಗೆ ಸಾಮಗ್ರಿ ನೀಡುವುದು ಸೇರಿದಂತೆ ಹಲವು ಸೇವೆಗಳನ್ನ ಒದಗಿಸುತ್ತಾ ಬಂದಿದ್ದೇವೆ. ಅಮ್ಮಸಂದ್ರ ಮತ್ತು ಕೊಂಡ್ಲಿ ಕ್ರಾಸ್ ನಲ್ಲಿ ಬೃಹತ್ ವೈದ್ಯಕೀಯ ಮತ್ತು ಆರೋಗ್ಯ ತಪಸಣಾ ಶಿಬಿರವನ್ನು ಮಾಡಲಾಗಿದೆ. ಶಾಲೆಗಳಿಗೆ ಪೀಠೋಪಕರಣಗಳು, ನೋಟ್ ಬುಕ್, ಬ್ಯಾಗ್ ವಿತರಿಸುತ್ತಾ ಬಂದಿದ್ದೇವೆ. ಕೋವಿಡ್ ವೇಳೆ ಫುಡ್ ಕಿಟ್ಟಿಗಳನ್ನು ಸಹ ವಿತರಣೆ ಮಾಡಿದ್ದು ಹೀಗೆ ಸಾಕಷ್ಟು ಕಾರ್ಯಗಳು ಮಾಡುತ್ತಾ ಬಂದಿದ್ದೇವೆ ಎಂದರು.
ಈ ಸಂದರ್ಭಲ್ಲಿ ಹಡವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್, ಪಿಡಿಒ ಎನ್.ರವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಧಾರಂಗಸ್ವಾಮಿ, ಗ್ರಾಮದ ಮುಖಂಡರುಗಳಾದ ಗೋಪಾಲ್ , ನಾಗರಾಜು, ಸಂಪತ್, ಮಧು ಸೇರಿದಂತೆ ಕಾರ್ಖಾನೆಯ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.