Public story
ತುರುವೇಕೆರೆ: ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳ ಕಾರ್ಮಿಕರಿಗೆ ಸರ್ಕಾರ ನೀಡಿದ 2 ಸಾವಿರ ಕಿಟ್ ಗಳನ್ನು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಸ್ವಾರ್ಥ ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಣೆ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಬೆಮೆಲ್ ಕಾಂತರಾಜು ಜಿಲ್ಲೆಯ 10 ತಾಲೂಕಿನಲ್ಲಿ ಮತ ಪಡೆದು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದರೆ ತುರುವೇಕೆರೆ ಕ್ಷೇತ್ರದಲ್ಲಿನ ಜನರಿಗೆ ಮಾತ್ರ ಸರ್ಕಾರ ನೀಡಿರುವ ಕಿಟ್ ಅನ್ನು ನೀಡುತ್ತಿದ್ದು, ಇತರೆ ತಾಲ್ಲೂಕಿನ ಜನರಿಗೆ ಅನ್ಯಾಯ ಮಾಡುತ್ತಿದ್ದು ಇದು ಕಾನೂನು ಬಾಹಿರವಾಗಿದೆ ಎಂದರು.
ಶ್ರಮಿಕರಿಗೆ, ಕಾರ್ಮಿಕರಿಗೆ ನೀಡುವುದು ಸರ್ಕಾರದ ಉದ್ದೇಶವೇ ವಿಫಲವಾಗಿದೆ. ವಿಧಾನ ಪರಿಷತ್ ಸದಸ್ಯರು ತನ್ನ ಸ್ವಾರ್ಥಕ್ಕಾಗಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಿದ್ದಾರೆ. ಕಾರ್ಮಿಕರಿಗೆ ನೀಡುತ್ತಿಲ್ಲ. ಆದ್ದರಿಂದ ಸದ್ಯದಲ್ಲಿಯೇ ಲೇಬರ್ ಕಮಿಷನರ್ ಅಕ್ರಂಪಾಷ ಅವರನ್ನು ಖುದ್ದು ಬೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುವಂತೆ ಮನವಿ ಮಾಡಲಾಗುವುದುಎಂದರು.
ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ವಿಧಾನ ಪರಿಷತ್ ಅಧ್ಯಕ್ಷರಿಗೆ ಪತ್ರ ಬರೆದು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಇದುವರೆವಿಗೂ ದೇಶದ ಪ್ರಜೆಗಳಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಅಲ್ಲದೆ ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದ್ದರೂ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಇವರೊಬ್ಬ ಪ್ರಪಂಚದ ದೊಡ್ಡ ಸುಳ್ಳುಗಾರನೆಂದು ಟೀಕಿಸಿದರು.
ಗೋಷ್ಠಿಯಲ್ಲಿ ಬಾಣಸಂದ್ರ ಗ್ರಾ.ಪಂ ಅಧ್ಯಕ್ಷ ಆನಂದ್ಮರಿಯಾ, ಮುಖಂಡರಾದ ವೆಂಕಟಾಪುರ ಯೋಗೀಶ್, ಬಾಣಸಂದ್ರ ರಮೇಶ್, ರೇಣಕಪ್ಪ, ಕಾಂತರಾಜು ದಲಿತ ಮುಖಂಡರಾದ ತಿಮ್ಮೇಶ್, ಹನುಮಂತಯ್ಯ, ರಮೇಶ್, ಗಿರೀಶ್, ರಾಘವೇಂದ್ರ ಇತರರು ಇದ್ದರು.