ಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ : ದಸಂಸ ಪ್ರತಿಭಟನೆ ಮಾಡಿದ ಸುದೀರ್ಘ ವರದಿಯನ್ನು ಸಂಚಲನ ಅವರು ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.
ಚಿಕ್ಕನಾಯಕನಹಳ್ಳಿ : ತಾಲ್ಲೂಕು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ, ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ನೆಹರೂ ಸರ್ಕಲ್’ನಿಂದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ವರೆಗೆ ಸೋಮವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯ್ತು.
ತಾಲ್ಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದ ಸರ್ವೆ ನಂಬರ್ 30 ಮತ್ತು 28’ರಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ದಸಂಸ ಮುಖಂಡರು ತಾಲ್ಲೂಕು ಆಡಳಿತ ಸೌಧದ ತಲಬಾಗಿಲಲ್ಲಿ ಪ್ರತಿಭಟನೆ ನಡೆಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ, ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು.
ಘಟನೆ ಹಿನ್ನೆಲೆ :
ಆಶ್ರಿಹಾಲ್ ಸರ್ವೆ ನಂಬರ್ 30’ರಲ್ಲಿರುವ ಇನ್ನೂ ದುರಸ್ತಿಯಾಗದ ಉಳಿಕೆ 5 ಎಕರೆ ಹಾಗೂ ಸರ್ವೆ ನಂಬರ್ 28’ರಲ್ಲಿ ಇನ್ನೂ ದುರಸ್ತಿಯಾಗದ ಉಳಿಕೆ (ಎಕ್ಸ್ಟೆಂಟ್) ಜಮೀನು 2 ರಿಂದ ಎರಡೂವರೆ ಎಕರೆ ಮತ್ತು ಜಾಣೆಹಾರ್ ಗಡಿ’ಯಲ್ಲಿನ ಸರ್ವೆ ನಂಬರ್ 7 ರಲ್ಲಿ 1 ಒಂದೂವರೆ ಎಕರೆ, ಸರ್ವೆ ನಂಬರ್ 8 ರಲ್ಲಿ 2 ರಿಂದ ಎರಡೂವರೆ ಎಕರೆ ಹಾಗೂ ಸರ್ವೆ ನಂಬರ್ 9 ರಲ್ಲಿ ಮುಕ್ಕಾಲು ಎಕರೆಯಷ್ಟಿರುವ ಕಂದಾಯ ಭೂಮಿ ರೈತರಿಗೆ ಮಂಜೂರಾಗಿರುವ ಗ್ರ್ಯಾಂಟೆಡ್ ಜಮೀನಾಗಿದೆ.
ಈ ಸರ್ವೆ ನಂಬರುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅವರ ಜಮೀನಿಗೆ ನಿರಂತರವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿದ್ದಾರೆ. ಸದರಿ, ಆಶ್ರಿಹಾಲ್ ಮತ್ತು ಜಾಣೆಹಾರ್ ಗಡಿ ಸರ್ವೆ ನಂಬರುಗಳಲ್ಲಿರುವ ಇದಿಷ್ಟೂ ಕಂದಾಯ ಜಮೀನು ಒಟ್ಟಾರೆ ಹತ್ತನ್ನೊಂದು ಎಕರೆಗಳಷ್ಟು ವಿಸ್ತೀರ್ಣದ್ದಾಗಿದೆ. ಈ ಸರ್ವೆ ನಂಬರುಗಳಲ್ಲಿರುವ ರೆವೆನ್ಯೂ ಜಮೀನು ರೈತರಿಗೆ ಮಂಜೂರಾಗಿರುವಂತಹ ಗ್ರಾಂಟೆಡ್ ಲ್ಯಾಂಡೇ ಆಗಿದೆ ಎಂಬುದು ರೈತರ ವಾದವಾಗಿದೆ.
ಈ ಭಾಗದ ರೈತರು 1970’ರಿಂದಲೂ ಇಲ್ಲಿ ಈ ಜಮೀನಿನ ಸಾಗುವಳಿ ನಡೆಸುತ್ತಿದ್ದಾರೆ. ಇದಕ್ಕೆ ಪುರಾವೆಯಾಗಿ 1978’ರಲ್ಲೇ ಭಾಗ್ಯಮ್ಮD/O ಲಕ್ಷ್ಮಯ್ಯ ಎಂಬ ಜಾಣೆಹಾರ್ ಗ್ರಾಮದ ರೈತ ಮಹಿಳೆಗೆ 3 ಎಕರೆಗಳಿಗೂ ಹೆಚ್ಚಿನ ಜಮೀನು ಇದೇ ಜಾಣೆಹಾರ್ ಸರ್ವೆ ನಂಬರಲ್ಲಿ ಮಂಜೂರಾಗಿದೆ. ಇಲ್ಲಿ ಎಪ್ಪತ್ತರ ದಶಕದಿಂದಲೂ ನಾವು ಗೆಯ್ಮೆ ಮಾಡುತ್ತಿದ್ದೇವೆ. ಇದು ನಮ್ಮ ಜಮೀನು. ಇದು ಆಗ ಸರ್ಕಾರಿ ಬೀಳು ಆಗಿದ್ದಿರಬಹುದು. ಈಗ್ಗೆ ಸುಮಾರು ಐವತ್ತು ವರ್ಷಗಳಿಗೂ ಮುಂಚಿನಿಂದ ಜಾಣೆಹಾರ್ – ಆಶ್ರಿಹಾಲ್ ಗ್ರಾಮದ ಅತ್ಯಂತ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇದು ಎಪ್ಪತ್ತು-ಎಂಭತ್ತರಲ್ಲೇ ರೈತರಿಗೆ ಮಂಜೂರಾಗಿರುವ ರೈತರ ಜಮೀನು. ಈಗ ಈ ಅಧಿಕಾರಿಗಳು ಕಳೆದ ಶನಿವಾರದಂದು ಹಿಟಾಚಿ-ಜೆಸಿಬಿಗಳನ್ನು ತಂದು ಹೆದರಿಸಿ, ನಮ್ಮನ್ನು ಇಲ್ಲಿಂದ ವಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶಗೊಂಡು ಹೇಳುತ್ತಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಮೀರಿದ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರಗಳನ್ನು ಕಡಿದು, ಅದೇ ಮರಗಳ ಕೊರಡುಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ಬಿಂಬಿಸುತ್ತಾ, ರೈತರ ಜಮೀನುಗಳಿಗೆ ಹಿಟಾಚಿ-ಜೆಸಿಬಿ ನುಗ್ಗಿಸುತ್ತಿದ್ದಾರೆ. ಬಡ ದಲಿತ ರೈತರ ಮೇಲಿನ ಈ ದೌರ್ಜನ್ನು ಅಕ್ಷಮ್ಯವಾದುದು ಎಂದು ದಸಂಸ ತಾಲ್ಲೂಕು ಸಂಚಾಲಕ ಆನಂದ್ ಹೇಳುತ್ತಾರೆ.
ಈ ಹಿಂದೆ ಅಕೇಶಿಯಾ ಮರಗಳನ್ನು ಕಡಿಯಲು ಒಬ್ಬರಿಗೆ ಟೆಂಡರ್ ಕೊಡಲಾಗಿತ್ತು. ಮರಗಳನ್ನು ಕಡಿಯುವುದರ ಜೊತೆಗೆ ಅದರ ಬೊಡ್ಡೆಗಳನ್ನೂ ಬೇರುಮಟ್ಟದಿಂದ ಕೀಳಬೇಕಾದ ನಿಯಮವಿದ್ದರೂ, ಅದಕ್ಕಾಗುವ ಖರ್ಚುವೆಚ್ಚದ ಹಣ ಉಳಿಸುವ ದುರಾಸೆಯಿಂದ ಆ ಬೊಡ್ಡೆಗಳನ್ನು ಕೀಳದೆ ಹಾಗೇ ಬಿಟ್ಟುಹೋಗಿದ್ದರು. ಅವು ಕಾಲಾಂತರದಲ್ಲಿ ಮತ್ತೆ ಚಿಗುರಿ ಈಗ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರ ಬಳಿ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿರುವ ಅರಣ್ಯ ಅಧಿಕಾರಿಗಳು ತಮ್ಮ ಬಳಿ ಇರುವ ದಾಖಲೆ ಪ್ರಮಾಣಗಳನ್ನು ಯಾಕೆ ಸಾರ್ವಜನಿಕಗೊಳಿಸದೆ, ನಮ್ಮ ಅನಕ್ಷರಸ್ಥ ಬಡ ರೈತರ ಮೇಲೆ ಮಾತ್ರ ಜೋರು ಜಬರದಸ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಹೀಗೆಲ್ಲ ವರ್ತಿಸಲು ಅವಕಾಶವಿಲ್ಲ ಎಂದು ಅರಣ್ಯ ಅಧಿಕಾರಿಗಳ ಕ್ರಮವನ್ನು ರೈತ ಮಂಜು ಖಂಡಿಸಿದರು.
ಪ್ರಜಾಪ್ರಭುತ್ವದಲ್ಲಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಆಸ್ಪದವಿಲ್ಲ ಎಂಬುದನ್ನು ಈ ಅಧಿಕಾರಿಗಳಿಗೆ ಬಡವರು ಮತ್ತು ರೈತರು ತಿಳಿಸಿಕೊಡಬೇಕೇ ಎಂದು ಪ್ರಶ್ನಿಸಿದ ಬೇವಿನಹಳ್ಳಿ ಚನ್ನಬಸವಯ್ಯ, ಲೋಕಸಭಾ ಚುನಾವಣಾ ನೀತಿಸಂಹಿತೆಯ ಕಾಲಾವಧಿ ಮುಗಿದ ನಂತರ ಇದುವರೆಗೂ ತಾಲ್ಲೂಕಿನಲ್ಲಿ ಬಗರ್ ಹುಕುಂ ಕಮಿಟಿಯ ಒಂದೇ ಒಂದು ಸಭೆಯನ್ನೂ ಮಾಡದಿರುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ವಿಶೇಷವೆಂದರೆ, ಆಶ್ರಿಹಾಲ್-ಜಾಣೆಹಾರ್ ಭಾಗದ ಹತ್ತಾರು ರೈತ ಮಹಿಳೆಯರೂ ಈ ಪ್ರತಿಭಟನೆಯಲ್ಲಿ ಸಮನಾಗಿ ಭಾಗಿಯಾಗಿದ್ದುದು.
ದೌರ್ಜನ್ಯ ನಡೆದಿಲ್ಲ, ಅರಣ್ಯ ಬಿಡುವುದಿಲ್ಲ
ರೈತ ಅಥವಾ ದಲಿತರ ಮೇಲೆ ದೌರ್ಜನ್ಯ ನಡೆಸುವ ಕುಕೃತ್ಯವನ್ನು ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಎಸಗಿಲ್ಲ. ಯಾವುದೇ ರೈತ ಕಾರ್ಯಕರ್ತರಿಗೂ ಯಾವ ಬಗೆಯಲ್ಲೂ ಧಮ್ಕಿ ಹಾಕಿಲ್ಲ. ಅರಣ್ಯ ಸಂರಕ್ಷಣೆಗೆ ವಿರುದ್ಧವಾಗಿ ಕೆಲಸ ಮಾಡುವವರ ಬಗ್ಗೆ ಅಸಹನೆ ತೋರಿರಬಹುದು. ತಾಲ್ಲೂಕಿನ ಕಣಿವೆ ಸುತ್ತ ರಾತ್ರಿ ಹೊತ್ತಿನಲ್ಲಿ ಕೆಲವು ಕಡೆ ಮರ ಕಡಿಯುವ ಹಾಗೂ ನೆಲ ಉಳುವ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಹಿತಿಯಿತ್ತು. ಆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಾಗ ಅವರು, ಇಲಾಖೆಯ ಸುಪರ್ದಿಗೆ ಬರುವ ಅರಣ್ಯದ ಸುತ್ತ ಬೇಲಿ ಹಾಕುವಂತೆ ಸೂಚನೆ ನೀಡಿದರು. ಆ ರೀತಿಯಾಗಿ ನಾವು ನಮ್ಮ ಇಲಾಖೆಯ ಸತ್ತ ಬೇಲಿ ಹಾಕಿಕೊಳ್ಳುತ್ತಿದ್ದೇವೆ. ರೈತರ ಜಮೀನುಗಳಿಗೆ ಸಂಬಂಧಿಸಿದ ಜಾಗಕ್ಕೆ ನಮ್ಮ ಹಿಟಾಚಿಗಳು ನುಗ್ಗಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ. ಅರಣ್ಯ ಸಂರಕ್ಷಣಾ ಕಾಯ್ದೆ-ಕಾನೂನುಗಳ ಪ್ರಕಾರ ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರ್ ಎಫ್ ಒ ಅರುಣ್ ಸ್ಪಷ್ಟಪಡಿಸುತ್ತಾರೆ.
__ ಸಂಚಲನ