ಗುಬ್ಬಿ: ಶಿಕ್ಷಣ ಕ್ಷೇತ್ರವು ಪವಿತ್ರವಾದ ಕ್ಷೇತ್ರವಾಗಿದೆ ಎಂದು ಎಸ್.ಆರ್. ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ತಾಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ರಚಿಸಿದ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಮಕ್ಕಳ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಬೇಕು. ತಾನು ಓದಿದ ಶಾಲೆಗೆ ಏನಾದರೂ ಕೊಡುಗೆಯನ್ನು ಕೊಡುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬರಬೇಕು. ವಿದ್ಯಾವಂತರು ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತಿಸಿ ಸಹಕಾರ ಮನೋಭಾವದಿಂದ ಇದ್ದಾಗ ಮಾತ್ರ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಬಿಇಓ ಕಾಂತರಾಜು ಮಾತನಾಡಿ, ಶಿಕ್ಷಣ ಪಡೆದ ಶಾಲೆಗೆ ಕೊಡುಗೆಗಳನ್ನು ನೀಡುವ ಮನಃಸ್ಥಿತಿಯನ್ನು ಮೈಗೂಡಿಸಿಕೊಂಡು ಏನಾದರು ದಾನ ಮಾಡಬೇಕು. ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುವುದರಿಂದ ಪೋಷಕರು ಆಂಗ್ಲ ಮಾಧ್ಯಮ ಶಾಲೆಯನ್ನು ಬಿಟ್ಟು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಮಾಡಿಸುವ ಮೂಲಕ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ ಆರ್ ಸಿ ಮಧುಸೂದನ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಗದೀಶ್, ಪಿಡಿಒ ಸಿದ್ದರಾಮಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಗೋವಿಂದರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ, ಮಹೇಂದ್ರ ಕುಮಾರ್, ದಾನಿಗಳಾದ ರುದ್ರಣಮ್ಮ, ಮುಖ್ಯ ಶಿಕ್ಷಕ ಬಿ.ಎಲ್ ಲಕ್ಷ್ಮಣ್ ಹಾಗೂ ಶಿಕ್ಷಕರು, ಗ್ರಾಮಸ್ಥರು ಇತರರು ಇದ್ದರು