ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಶನಿವಾರ ಮೊದಲ ಬಾರಿಗೆ ಮೌನ ಮುರಿದ ಮಾಜಿ ಪ್ರಧಾನಿ ದೇವೇಗೌಡರು, ಕಾನೂನು ಪ್ರಕಾರ ಶಿಕ್ಷೆಯಾಗಲಿ. ಪ್ರಜ್ವಲ್ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ತಮ್ಮ ಮನೆಯಿಂದ ಇದೇ ಮೊದಲ ಸಲ ಹೊರ ಬಂದ ಅವರು ದೇವಸ್ಥಾನಕ್ಕೆ ತೆರಳುವ ಮುನ್ನ ಟಿ.ವಿ. ಮಾಧ್ಯಮದವರೊಂದಿಗೆ ಮಾತನಾಡಿದರು.
ಘಟನೆಯನ್ನು ಇಡೀ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಸಹಿತ ಅನೇಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಎಲ್ಲರಿಗೂ ಶಿಕ್ಷೆಯಾಗಬೇಕು. ನೊಂದ ಹೆಣ್ಣು ಮಕ್ಕಳಿಗೆ ಪರಿಹಾರ ಸಿಗಬೇಕು ಎಂದರು.
ಶಾಸಕ ರೇವಣ್ಣ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿದೆ. ಅವರನ್ನು ಹೇಗೆ ಸಿಲುಕಿಸಲಾಗಿದೆ ಎಂಬುದನ್ನು ಜನರು ನೋಡಿದ್ದಾರೆ. ಈಗ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಒಂದು ತಿಂಗಳಿಂದ ಮಾಧ್ಯಮದವರು ಮಳೆ, ಬಿಸಿಲು ಎನ್ನದೇ ನನ್ನ ಮನೆ ಮುಂದೆ ಕಾಯುತ್ತಾ ಇದ್ದೀರಿ. ಇವತ್ತಿಗೆ ಇದನ್ನು ಕೊನೆ ಮಾಡಿ. ನಿಮ್ಮ ಮಾಲೀಕರಿಗೂ ನಾನು ಕೇಳುತ್ತಿದ್ದೇನೆ. ಇದರಿಂದ ಏನಾದರೂ ಸಾಧಿಸಲು ಸಾದ್ಯವಾ? ನೀವು ಸುದ್ದಿ ಮಾಡಲು ಸ್ವತಂತ್ರ ಇದ್ದೀರಿ. ಅದಕ್ಕೆ ನಾನು ಅಡ್ಡಿಪಡಿಸುವುದಿಲ್ಲ, ಪಡಿಸಿಲ್ಲ ಎಂದರು.