ತುರುವೇಕೆರೆ: ಶಾಸಕ ಎಂ.ಟಿ.ಕೃಷ್ಣಪ್ಪನವರ ತಾಕತ್ತಿನ ಬಗ್ಗೆ ಮಾತನಾಡುವ ಗುಬ್ಬಿ ಶಾಸಕ ಶ್ರೀನಿವಾಸು ಅವರೇ, ಹೇಮಾವತಿ ಎಕ್ಸ್ ಫ್ರೆಸ್ ಲಿಂಕ್ ಕೆನಾಲ್ ತಮ್ಮದೇ ಕ್ಷೇತ್ರದ ಮೂಲಕ ಹಾಯ್ದು ರಾಮನಗರಕ್ಕೆ ನೀರು ಹೋಗುವುದನ್ನು ನಿಲ್ಲಿಸುವುದರಲ್ಲಿ ತೋರಿಸಿ ಎಂದು ತುರುವೇಕೆರೆ ತಾಲ್ಲೂಕು ಜೆಡಿಎಸ್ ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್ ತಿರುಗೇಟು ನೀಡಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಗುಬ್ಬಿ ಕ್ಷೇತ್ರದ ಶಾಸಕರು ಎಂ.ಟಿ.ಕೃಷ್ಣಪ್ಪನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಮೊದಲು ನಿಲ್ಲಿಸಲಿ ಮತ್ತು ಇದನ್ನು ಜೆಡಿಎಸ್ ಕಾರ್ಯಕರ್ತರು ಬಲವಾಗಿ ಖಂಡಿಸುತ್ತಾರೆ.
ಶ್ರೀನಿವಾಸ್ ಅವರೇ, ನಾವು ನಿಮಗೆ ನೇರವಾಗಿ ಪ್ರಶ್ನೆ ಮಾಡಲು ಬಯಸುತ್ತೇನೆ. ನಮ್ಮ ಶಾಸಕರು ನಿಮ್ಮನ್ನು ಎಲ್ಲಿ ಕಳ್ಳ ಎಂದು ಹೇಳಿಕೆಯನ್ನು ನೀಡಿದ್ದಾರೆ ಎಂಬುದರ ಬಗ್ಗೆ ತಮ್ಮಲ್ಲಿ ಆಡಿಯೋ ಅಥವಾ ವಿಡಿಯೋ ದಾಖಲೆ ಇದ್ದರೆ ಮೊದಲು ಬಹಿರಂಗಪಡಿಸಿ ಮಾತನಾಡಿ. ಸುಕಾ ಸುಮ್ಮನೆ ವ್ಯಕ್ತಿಯ ಘನತೆಗೆ ಮಸಿ ಬಳಿಯುವ ರೀತಿ ವರ್ತಿಸಬೇಡಿ ಎಂದರು.
‘ಎಂ.ಟಿ.ಕೃಷ್ಣಪ್ಪನವರೇ ತಾಕತ್ತಿದ್ದರೆ ಗುಬ್ಬಿಗೆ ಬನ್ನಿ ನಿಮ್ಮ ಕೊರಳಪಟ್ಟಿ ಹಿಡಿದು ಎಳೆಯುತ್ತೇನೆ ಎಂದು ಹೇಳಿರುವುದಲ್ಲದೆ ಕೃಷ್ಣಪ್ಪನವರ ಗಂಡಸ್ತನದ ಬಗ್ಗೆ ಮಾಧ್ಯಮದ ಮುಂದೆ ಪ್ರಶ್ನೆ ಮಾಡಿದ್ದೀರಿ. ಇದು ಖಂಡನೀಯ ಎಂದು ತಿಳಿಸಿದರು.
ಎಂ.ಟಿ.ಕೃಷ್ಣಪ್ಪನವರ ಶಕ್ತಿ ಏನು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷರಾಗಿ ತದನಂತರ ರೈತ ಪರ ಹೋರಾಟದ ಮೂಲಕ ತಮ್ಮ ರಾಜಕೀಯ ಅಸ್ಥಿತ್ವ ಕಂಡು ಕೊಂಡವರು ನಾಯಕರು ಎಂದರು.
ನಿಮಗೆ ತಾಕತ್ತಿದ್ದರೆ ಎಕ್ಸ್ ಪ್ರೆಸ್ ಕೆನಾಲ್ ನಿಲ್ಲಿಸಿ ಕ್ಷೇತ್ರದ ಜನರಿಂದ ವೋಟು ಹಾಕಿಸಿಕೊಂಡಿರುವ ನೀವು ನಿಮ್ಮ ಜನರಿಗೆ ಅನ್ಯಾಯ ಮಾಡಬೇಡಿ. ಆಗ ನಿಮ್ಮನ್ನು ಒಪ್ಪುತ್ತೇವೆ ಎಂದರು.
ಸಂಸದ ಜಿ.ಎಸ್.ಬಸವರಾಜು ಅವರನ್ನು ಬೈದಂತೆ, ತಮ್ಮದೇ ಪಕ್ಷದ ರಾಯಸಂದ್ರ ರವಿಯ ಮೇಲೆ ಹಲ್ಲೆ ನಡೆಸಿ ಗೆದ್ದೆನೆಂದು ಬೀಗ ಬೇಡಿ ತಾಕತ್ತಿದ್ದರೆ ಕೃಷ್ಣಪ್ಪನವರನ್ನು ಮುಟ್ಟಿ ನೋಡಿ ನಂತರ ಪರಿಣಾಮ ಏನಾಗುತ್ತದೆಂದು ತಿಳಿಯುವಿರಿ.
ವಾಸುರವರೇ ಒಂದು ವೇಳೆ ನೀವೇ ಸಮಯ-ಸ್ಥಳ ಎಲ್ಲಿ ಎಂಬುದನ್ನು ನಿಗಧಿಪಡಿಸಿ ನಮ್ಮ ಶಾಸಕರೊಡಗೂಡಿ ನಾವುಗಳೇ ಆ ಜಾಗಕ್ಕೆ ಬರುತ್ತೇವೆ ಎಂದು ಸವಾಲೆಸೆದು ಇನ್ನೊಮ್ಮೆ ಈ ರೀತಿ ನಮ್ಮ ನಾಯಕರ ಬಗ್ಗೆ ಅಸಂಬದ್ದ ಮಾತುಗಳನ್ನಾಡಬೇಡಿ ಎಂದು ಎಚ್ಚರಿಸಿದರು.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ದೊಡ್ಡೇಗೌಡ ಹಾಗೂ ಎಚ್.ಆರ್.ರಾಮೇಗೌಡ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಯಾರೂ ಸಹ ಬಳೆ ತೊಟ್ಟು ಕೂತಿಲ್ಲ. ಎಲ್ಲದಕ್ಕೂ ಸಿದ್ದರಿದ್ದೇವೆ. ನಮ್ಮ ಶಾಸಕರು ಹೋರಾಟದ ಹಾದಿಯಿಂದ ಬಂದವರು ಅವರ ಶಕ್ತಿ ಏನೂ ಎಂಬುದು ನಿಮಗೂ ಗೊತ್ತಿದೆ. ಈ ಕ್ಷೇತ್ರದ ಶಾಸಕರನ್ನಾಗಿ ನಾವು ಅವರನ್ನು ಪಡೆದಿರುವುದು ನಮ್ಮ ಪುಣ್ಯ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದರು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಕಾಂತರಾಜು,ತಿಮ್ಮೇಗೌಡ, ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.