ತುರುವೇಕೆರೆ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಮೇ30ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಮನೆ ಮುಂದೆ ಧರಣಿ ನಡೆಸಲು ಉದ್ದೇಶಿಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಶಾಸಕ ಎಂ.ಟಿ ಕೃಷ್ಣಪ್ಪನವರನ್ನು ಬಂಧಿಸಲು ಬಂದು ವಿಫಲವಾದ ಘಟನೆ ಗುರುವಾರ ಜರುಗಿತು.
ಗೊಲ್ಲಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದಿನ ಧರಣಿ ನಡೆಸಲು ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಒಳಗೊಂಡಂತೆ ಹೇಮಾವತಿ ಲಿಂಕ್ ಕೆನಾಲ್ ಹೋರಾಟ ಸಮಿತಿ ಹಾಗು ಜಿಲ್ಲೆಯ ರೈತರು ಹಾಗು ರೈತ ಮುಖಂಡರು ನಿರ್ಧರಿಸಿದ್ದರು.
ದೇವರಿಗೆ ಪೂಜೆ ಸಲ್ಲಿಸಿ ಮನೆಯಿಂದ ಹೊರಟು ಯಡಿಯೂರಿನತ್ತ ಪ್ರಯಾಣ ಬೆಳೆಸಿದ ಶಾಸಕರ ವಾಹನವನ್ನು ಅಡ್ಡಗಟ್ಟಿದ ಪೊಲೀಸರು ಬಂಧಿಸಲು ಮುಂದಾದರು.
ನಾನು ತಮ್ಮ ಹಿತೈಷಿಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವುದಾಗಿ ಶಾಸಕರು ಪೊಲೀಸರ ಪ್ರಶ್ನೆಗೆ ಉತ್ತರಿಸಿ ಹೊರಟರು.
ಮಾಯಸಂದ್ರ ರಸ್ತೆಯ ಬೆಳ್ಳಿ ಪೆಟ್ರೋಲ್ ಬಂಕ್ ಮುಂಭಾಗ ಹೈಡ್ರಾಮಾ ನಡೆದು ಶಾಸಕರ ವಾಹನವನ್ನು ಪೊಲೀಸರು ಹಿಂಬಾಲಿಸಿದರು.
ಗೃಹ ಸಚಿವರ ನಿವಾಸದ ಮುಂದೆ ಹಮ್ಮಿಕೊಳ್ಳಲಾಗಿದ್ದ ಧರಣಿಯನ್ನು ಕೈಬಿಡುವಂತೆ ಕಿರಿಯ ಪೊಲೀಸ ಅಧಿಕಾರಿಗಳು ಮನವಿ ಮಾಡಿದರು.
ಹಾಗಾದರೆ ನನ್ನ ಕ್ಷೇತ್ರದ ಜನರಿಗೆ ಹೇಮಾವತಿ ನೀರು ಕೈತಪ್ಪಿದರೆ ಸುಮ್ಮನೆ ಕೂರಬೇಕೆ? ಅವರು ಸರ್ಕಾರದ ಭಾಗವಲ್ಲವೇ ಹಾಗಾಗಿ ನ್ಯಾಯಕ್ಕಾಗಿ ಸಚಿವರ ಮನೆ ಮುಂದೆ ಧರಣಿ ಮಾಡುವುದು ಅನಿವಾರ್ಯ ಎಂದು ಶಾಸಕರು ಪೊಲೀಸರಿಗೆ ಮರು ಪ್ರಶ್ನಿಸಿ ಹೊರಟರು.
ಶಾಸಕರನ್ನು ಪೊಲೀಸ್ ಅಧಿಕಾರಿಗಳ ವಾಹನಗಳು ಹಿಂಬಾಲಿಸಿ ಕೊಂಡು ಹೊರಟರು.
ಇದಕ್ಕೂ ಮುನ್ನಾ ಮದುವೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಧರಣಿಯ ಸ್ಥಳಕ್ಕೆ ಹೋಗುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.