ತುಮಕೂರು: ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮೊದಲಿಗೆ ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುವುದು.
ಇಟಿಪಿಬಿಎಸ್ ಮತ ಎಣಿಕೆಗಾಗಿ ಕ್ಯೂಆರ್ ಕೋಡ್ ರೀಡರ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಟ್ರೋಲ್ ಯೂನಿಟ್‍ಗಳ ಮತ ಎಣಿಕೆ ಮೇಜುಗಳ ಮೇಲೆ ಕ್ರಮವಾಗಿ 1 ರಿಂದ 14ರವರೆಗೆ ಸಂಖ್ಯೆಯನ್ನು ನಮೂದಿಸಲಾಗುವುದು. ಮತಗಟ್ಟೆ ಸಂಖ್ಯೆಯ ಕ್ರಮಾಂಕದಲ್ಲಿಯೇ ಕಂಟ್ರೋಲ್ ಯೂನಿಟ್‍ಗಳನ್ನು ಎಣಿಕೆಗೆ ಪೂರೈಸಲಾಗುವುದು.
ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಿಂದ ರ್ಯಾಂಡಮ್ ಆಗಿ 5 ಮತದಾನ ಖಾತ್ರಿ(ವಿವಿ ಪ್ಯಾಟ್) ಯಂತ್ರಗಳನ್ನು ಲಾಟರಿ ಮೂಲಕ ಆರಿಸಿ ಎಣಿಕೆ ಮಾಡಲಾಗುವುದು. ಇದನ್ನು ಕಂಟ್ರೋಲ್ ಯೂನಿಟ್ ಫಲಿತಾಂಶದೊಂದಿಗೆ ತಾಳೆ ಮಾಡಲಾಗುತ್ತದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 14 ಇವಿಎಂ ಟೇಬಲ್‍ನಂತೆ ಒಟ್ಟು 154 ಟೇಬಲ್, ಇಟಿಪಿಬಿಎಸ್ ಎಣಿಕೆಗಾಗಿ ತಲಾ 1ರಂತೆ ಒಟ್ಟು 11 ಟೇಬಲ್, ಅಂಚೆ ಮತಪತ್ರ ಎಣಿಕೆಗಾಗಿ ಒಟ್ಟು 30 ಟೇಬಲ್ ಸೇರಿದಂತೆ 195 ಟೇಬಲ್‍ಗಳಲ್ಲಿ ಮತ ಎಣಿಕಾ ಕಾರ್ಯವನ್ನು ನಡೆಸಲಾಗುವುದು. ಇದಕ್ಕಾಗಿ ಒಟ್ಟು 651 ಅಧಿಕಾರಿ/ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ.
ಸುಗಮವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 5 ಮಂದಿ ಡಿವೈ.ಎಸ್‍ಪಿ, 17 ಮಂದಿ ಪೊಲೀಸ್ ಇನ್ಸ್‍ಪೆಕ್ಟರ್, 33 ಮಂದಿ ಸಬ್ ಇನ್ಸ್‍ಪೆಕ್ಟರ್, 55 ಮಂದಿ ಸಹಾಯಕ ಸಬ್‍ಇನ್ಸ್‍ಪೆಕ್ಟರ್, 285 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಶಸ್ತ್ರ ಸಜ್ಜಿತ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.