ನಮ್ಮ ಅನುಮತಿ ಇಲ್ಲದೆಯೇ ನಮ್ಮ ಭೂಮಿಯಲ್ಲಿ ಹೇಮಾವತಿ ಕುಡಿಯುವ ನೀರಿನ ಪೈಪ್ ಲೈನ್ ತೆಗೆದುಕೊಂಡು ಹೋಗಿರುತ್ತಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಏನೇನೋ ಸಬೂಬು ಹೇಳುತ್ತಾರೆ. ಪರಿಹಾರ ಸಹ ನೀಡಿರುವುದಿಲ್ಲ. ಸಣ್ಣ ಪೈಪು. ಹೆಚ್ಚು ಹಾನಿಯಾಗಿಲ್ಲ, ಊರಿನ ಕೆಲಸ ಬಿಡಿ ಎನ್ನುತ್ತಾರೆ. ಸುಮಾರು ಮೂರುವರೆ ಕೋಟಿಯ ಯೋಜನೆ. ಈ ಕಾಮಗಾರಿಯಿಂದ ನನ್ನ ತೆಂಗು, ಅಡಿಕೆ ಮರಗಳು ಹೋಗಿವೆ. ಈಗ ನಾನೇನು ಮಾಡಲಿ?
ಚಿಕ್ಕಸ್ವಾಮಿ ಗೌಡ, ಕೋಡಿಹಳ್ಳಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ
ಯಾವುದೇ ಇಲಾಖೆಯ ಅಧಿಕಾರಿ ನಿಮ್ಮ ಅನುಮತಿ ಇಲ್ಲದೇ ನಿಮ್ಮ ತೋಟದಲ್ಲಿ ಕೆಲಸ ಮಾಡಿಸಿರುವುದು ಟ್ರಸ್ ಪಾಸ್ ಕಾಯ್ದೆ ಅಡಿ ಅಪರಾಧವಾಗಲಿದೆ. ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು.
RFCTLARRA-13 ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ರೈತರ ಭೂಮಿಯಲ್ಲಿ ಯೋಜನೆಗಳನ್ನು ಮಾಡಬೇಕಾದರೆ, ಸಾರ್ವಜನಿಕ ಉದ್ದೇಶವಾಗಿದ್ದರೆ ಸರ್ಕಾರ ಮೊದಲಿಗೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕಾಗುತ್ತದೆ. ಸಾಮಾಜಿಕ ಪರಿಣಾಮ ಅಧ್ಯಯನ ನಡೆಸಿ ಸೂಕ್ತ ಪರಿಹಾರದ ಅವಾರ್ಡ್ ಘೋಷಿಸಬೇಕಾಗುತ್ತದೆ. ತದನಂತರದಲ್ಲಿ ಕಾಮಗಾರಿ ಆರಂಭಿಸಬೇಕಾಗುತ್ತದೆ.
ನಿಮ್ಮ ವಿಚಾರದಲ್ಲಿ ಇದು ಭೂ ಸ್ವಾಧೀನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ನೀವು, ಮೊದಲಿಗೆ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಸಂಬಂಧಿಸಿದ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಕೂಡಲೇ ಪರಿಹಾರ ನೀಡುವಂತೆ ಕೋರಿ. ಅವರು ಅದಕ್ಕೆ ಸ್ಪಂದಿಸದಿದ್ದರೆ ಪರಿಹಾರ ಕೋರಿ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿದೆ.
@ ನಾನು ನನ್ನ ಸ್ನೇಹಿತನಿಗೆ ದಿಚಕ್ರ ವಾಹನವನ್ನು ಮಾರಾಟ ಮಾಡಿ ನಾಲ್ಕು ವರ್ಷಗಳಾದವು. ಆದರೆ ಈಗ ಕ್ರಿಮಿನಲ್ ಪ್ರಕರಣದಲ್ಲಿ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮುಂದೇನಾಗಬಹುದು?
ಜಯಶಂಕರ್, ಮತ್ತಿ ಘಟ್ಟ,
ಆರ್ ಟಿಒ ನಿಯಮಾವಳಿ ಪ್ರಕಾರ ಯಾವುದೇ ವಾಹನವನ್ನು ಮಾರಾಟ ಮಾಡಿದ ಕೂಡಲೇ ವಾಹನವನ್ನು ಮಾಲೀಕತ್ವವನ್ನು ಬದಲಾವಣೆ ಮಾಡಬೇಕು. ಆದರೆ ಸಾಕಷ್ಟು ಜನರು ಈ ರೀತಿ ಮಾಡುವುದಿಲ್ಲ.
ಇಂಥ ಘಟನೆಗಳು ಘಟಿಸಿದಾಗ ಅಥವಾ ಅಪಘಾತಗಳು ಸಂಭವಿಸಿದಾಗ ಮೂಲ ಮಾಲೀಕನೆ ಹೊಣೆ ಹೊರ ಬೇಕಾಗುತ್ತದೆ.
ನಿಮ್ಮ ವಿಚಾರದಲ್ಲೂ ಇದೇ ಆಗಿದೆ.
ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಕೆಳಗೆ ಅರ್ಜಿ ಸಲ್ಲಿಸಿ ವಾಹನವನ್ನು ಮರುಳಿ ಪಡೆದುಕೊಳ್ಳಬಹುದು.
ಪೊಲೀಸರು ವಿಚಾರಣೆಗೆ ಕರೆದಾಗ ಧೈರ್ಯ ವಾಗಿ ಹೋಗಿ ಇರುವ ವಿಷಯವನ್ನು ಹೇಳಿ. ನಿಮ್ಮ ಹೇಳಿಕೆಯ ಆಧಾರದಲ್ಲಿ ನಿಮಗೆ ತೊಂದರೆಯಾಗಲಾರದು. ಸ್ಥಳೀಯ ವಕೀಲರನ್ನು ಸಂಪರ್ಕಿಸಿ.