ಮಧುಗೌಡ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಹೋಬಳಿಯನ್ನು ತಾಲೂಕು ಕೇಂದ್ರ ಮಾಡುವಂತೆ 50 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ 63 ಸಂಘ-ಸಂಸ್ಥೆಗಳು ಜತೆಯಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿವೆ.
#ತಾಲೂಕು ಕೇಂದ್ರಕ್ಕೆ ಬೇಕಾದ ಜನಸಂಖ್ಯೆ ಸೇರಿದಂತೆ ಎಲ್ಲಾ ಅರ್ಹತೆಗಳೂ ಹುಳಿಯಾರಿಗಿದ್ದು, ತಾಲೂಕು ಕೇಂದ್ರವನ್ನಾಗಿ ಮಾಡಲೇಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
#ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಹುಳಿಯಾರು ಮತ್ತೆ ತಾಲೂಕು ಮಾನ್ಯತೆ ಪಡೆಯಬೇಕೆಂಬುದು ಸ್ಥಳೀಯರ ಮಹಾ ಕನಸು. ತಾಲೂಕು ಕೇಂದ್ರಕ್ಕೆ 50 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇನ್ನು 15 ದಿನಗಳಲ್ಲಿ ಹೋರಾಟ ಮತ್ತಷ್ಟು ಬಿಗಿಗೊಳ್ಳಲಿದೆ.
#ಚಿಕ್ಕನಾಯಕನಹಳ್ಳಿ ತಾಲೂಕಿನ #ಹೋಬಳಿ ಕೇಂದ್ರವಾಗಿರುವ ಹುಳಿಯಾರು, ತಾಲೂಕು ಕೇಂದ್ರವಾಗಿ ಬಡ್ತಿ ಪಡೆಯುವ ಎಲ್ಲಾಅರ್ಹತೆ ಹೊಂದಿದೆ. ಆದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಮೇಲ್ದರ್ಜೆಗೇರುವ ಭಾಗ್ಯ ಸಿಕ್ಕಿಲ್ಲ. ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಈ ಕನಸು ನನಸು ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಹುಳಿಯಾರಿಗರು.
ಹೋರಾಟಕ್ಕೆ ಸಿಗಲಿದೆ ತಿರುವು
ಹುಳಿಯಾರು ತಾಲೂಕಿಗಾಗಿ ಹೋರಾಟ ಹೊಸ ತಿರುವು ಪಡೆಯುವ ಸೂಚನೆ ಸಿಕ್ಕಿದೆ. ಈ ಬಗ್ಗೆ ತಾಲೂಕು ಹೋರಾಟ ಸಮಿತಿ ಸದಸ್ಯ ಹಾಗೂ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ’15-30 ದಿನಗಳಲ್ಲಿ ನಾಡಕಚೇರಿ ಎದುರು ಧರಣಿ ಆರಂಭಿಸುತ್ತಿದ್ದೇವೆ. ಹುಳಿಯಾರಿನ 63 ಸಂಘ-ಸಂಸ್ಥೆಗಳು ಜತೆಯಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ಉದ್ದೇಶಿಸಿದ್ದೇವೆ. ಹುಳಿಯಾರು ತಾಲೂಕು ಕೇಂದ್ರ ಘೋಷಣೆಯಾಗುವ ತನಕ ಚಳುವಳಿ ಮುಂದುವರೆಸುತ್ತೇವೆ’ ಎಂದು ತಿಳಿಸಿದ್ದಾರೆ.
ಹಂದನಕೆರೆ, ಮತ್ತಿಘಟ್ಟ , ಹೊಯ್ಸಳಕಟ್ಟೆ ಮೊದಲಾದ ಕೆಲವು ಗ್ರಾಮಗಳಿಗೆ ಈಗಿನ ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ 25-30 ಕಿಮೀ ದೂರದಲ್ಲಿದೆ. ಬೊಮ್ಮನಹಳ್ಳಿ, ಎಣ್ಣೆಗೆರೆ, ಮೇಳನಹಳ್ಳಿ ಸುಮಾರು 40 ಕಿಮೀ, ಎಳನೂರು 35, ದಸೂಡಿ 50 ಕಿಮೀ ದೂರದಲ್ಲಿದೆ. ಆದರೆ ಹುಳಿಯಾರು ಈ ಎಲ್ಲಾ ಭಾಗಗಳಿಗೆ 10-20 ಕಿಮೀ ದೂರದಲ್ಲಿದ್ದು, ತಾಲೂಕು ಕೇಂದ್ರವಾದರೆ ಈ ಹತ್ತಾರು ಗ್ರಾಮಸ್ಥರಿಗೆ ವ್ಯವಹಾರ, ಆಸ್ಪತ್ರೆ ಸೇರಿದಂತೆ ಎಲ್ಲಾ ಕಾರ್ಯಚಟುವಟಿಕೆಗಳಿಗೂ ಅನುಕೂಲವಾಗುತ್ತದೆ. ಅಲ್ಲದೆ ತಾಲೂಕು ಕೇಂದ್ರಕ್ಕೆ ಬೇಕಾದ ಜನಸಂಖ್ಯೆ ಸೇರಿದಂತೆ ಎಲ್ಲಾ ಅರ್ಹತೆಗಳೂ ಹುಳಿಯಾರಿಗಿದ್ದು, ತಾಲೂಕು ಕೇಂದ್ರವನ್ನಾಗಿ ಮಾಡಲೇಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
#ಬ್ರಿಟಿಷರ_ಕಾಲದ_ತಾಲೂಕು
ಹುಳಿಯಾರು ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿತ್ತು. ಅಂದಿನ ತಾಲೂಕು ಕಚೇರಿ ಕಟ್ಟಡದಲ್ಲಿ ಇಂದು ಎಂಪಿಎಸ್ ಸರಕಾರಿ ಶಾಲೆಯಿದೆ.
ತಾಲೂಕು ಕೇಂದ್ರವಾಗಲು ಏನಿದೆ ಅರ್ಹತೆ?
ಹುಳಿಯಾರು ಅತೀ ದೊಡ್ಡ ಹೋಬಳಿ ಕೇಂದ್ರ
ಹೋಬಳಿ ವ್ಯಾಪ್ತಿಯಲ್ಲಿ 45,000 ಜನಸಂಖ್ಯೆಯಿದೆ
ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ 20 ಸಾವಿರ ಜನಸಂಖ್ಯೆಯಿದೆ
16 ಸಾವಿರ ಜನಸಂಖ್ಯೆಯಿದ್ದರೆ ತಾಲೂಕು ಕೇಂದ್ರ ಮಾಡಬಹುದು
ಜಿಲ್ಲೆಯ 2ನೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ
ಈಗಾಗಲೇ ಇಲ್ಲಿ 1 ಪ್ರಥಮ ದರ್ಜೆ ಕಾಲೇಜು, 3 ಪದವಿ ಪೂರ್ವ, 2 ಐಟಿಐ ಕಾಲೇಜು, 1 ಉರ್ದುಶಾಲೆ ಸೇರಿದಂತೆ 7 ಪ್ರೌಢಶಾಲೆಗಳು, 6 ಪ್ರಾಥಮಿಕ ಶಾಲೆಗಳು, ಪ್ರವಾಸಿ ಮಂದಿರ, ಕೆಇಬಿ ಕಚೇರಿ, ಪವರ್ ಸ್ಟೇಷನ್, ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಾದವುಗಳಿವೆ.
ಯಾವೆಲ್ಲಾ ಹೋಬಳಿಗಳು?
ಹುಳಿಯಾರು ತಾಲೂಕು ಮಾಡಿದರೆ ಈಗಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿ ಸೇರಿಸಿಕೊಳ್ಳಬಹುದು. ಮತ್ತಿಘಟ್ಟ, ಹೊಯ್ಸಳಕಟ್ಟೆ, ದಸೂಡಿಯನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡಬಹುದು.
ಸಿರಾ ತಾಲೂಕಿನ ಬುಕ್ಕಾಪಟ್ಟಣ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ್ದು, ಹುಳಿಯಾರು ತಾಲೂಕು ಆದರೆ 20 ಕಿಮೀ ವ್ಯಾಪ್ತಿಯ ಈ ಹೋಬಳಿಯನ್ನು ಕೂಡ ಸೇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.
ಅಲ್ಲದೆ ಈ ಹಿಂದೆ ಹೋರಾಟ ನಡೆದ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮತ್ತೋಡ್ ಕೂಡ ಹುಳಿಯಾರಿಗೆ ಸೇರಿಸಬಹುದು ಎನ್ನಲಾಗಿತ್ತು. ಮತ್ತೋಡ್ ಹೊಸದುರ್ಗ ತಾಲೂಕು ಕೇಂದ್ರಕ್ಕೆ 30 ಕಿಮೀ ದೂರದಲ್ಲಿದ್ದು, ಹುಳಿಯಾರಿಗೆ 20 ಕಿಮೀ ಅಂತರದಲ್ಲಿದೆ. ಜತೆಗೆ ಹೊಸದುರ್ಗದ ಶ್ರೀರಾಂಪುರವನ್ನು ಕೂಡ ಸೇರಿಸಿಕೊಳ್ಳಬಹುದೆಂಬ ಚರ್ಚೆಯಿದೆ.
ಹುಳಿಯಾರು ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗಿಲ್ಲ. ಇನ್ನು 15 ದಿನದಿಂದ ಒಂದು ತಿಂಗಳೊಳಗೆ ಅನಿರ್ಧಿಷ್ಟಾವಧಿ ಧರಣಿ ಕೂರುತ್ತೇವೆ.
ತಾಲೂಕು ಕೇಂದ್ರ ಆಗುವವರೆಗೂ ಚಳುವಳಿ ಮುಂದುವರಿಸುತ್ತೇವೆ.ಎಂದು ತಾಲ್ಲೋಕು ಹೋರಾಟ ಸಮಿತಿ ತಿಳಿಸಿದೆ,