Public story
ತುಮಕೂರು: ಮಾರ್ಗಾನ್ವೇಷಣೆ ಎಂಬ ಪದವೇ ಸಂಶೋಧನೆಯ ನಿಜವಾದ ಮಹತ್ತ್ವವನ್ನು ಎತ್ತಿ ಹೇಳುವಂತಿದೆ. ಸಂಶೋಧನೆಯಲ್ಲಿ ಒಂದು ಘಟ್ಟದಲ್ಲಿ ಎಲ್ಲೋ ನಿಲ್ಲುವ ಪ್ರಮೇಯ ಬರುತ್ತದೆ. ಆದರೆ ಅನ್ವೇಷಣೆ ನಿರಂತರವಾಗಿರುತ್ತದೆ ಎಂದು ವಿಮರ್ಶಕ ಎಸ್ ಆರ್ ವಿಜಯಶಂಕರ ಅಭಿಪ್ರಾಯಪಟ್ಟರು.
ತುಮಕೂರು ವಿವಿ ಪ್ರಾಧ್ಯಾಪಕರಾದ ನಿತ್ಯಾನಂದ ಬಿ ಶೆಟ್ಟಿಯವರ ಸಂಶೋಧನಾ ವಿಧಿ-ವಿಧಾನಗಳ ಕುರಿತ ಪುಸ್ತಕವಾದ ಮಾರ್ಗಾನ್ವೇಷಣೆಯ ಲೋಕಾರ್ಪಣೆಯಲ್ಲಿ ಭಾಗವಹಿಸಿ ಮಾತನಾಡಿದ ಎಸ್ ಆರ್ ವಿಜಯಶಂಕರ ಅವರು ಈ ಕಾಲದಲ್ಲಿ ವಿದ್ವತ್ ಹಿಂದಕ್ಕೆ ತಳ್ಳಲ್ಪಟ್ಟಿದೆ. ವಿದ್ವತ್ ಅನ್ನು ತಮಾಷೆ ಮಾಡುವ, ಲೇವಡಿ ಮಾಡುವ ಕಾಲ ಬಂದಿದೆ. ಆದರೆ ನಮ್ಮನ್ನು ವಿದ್ವತ್ ಲೋಕದಲ್ಲಿ ಸಂಭವಿಸುವ ಚಿಂತನೆಗಳು ಮಾತ್ರ ಕಾಪಾಡಬಲ್ಲವು ಎಂದರು.
ಪ್ರಾಮಾಣಿಕ ಅಧ್ಯಯನದಲ್ಲಿ ತೊಡಗಿಕೊಂಡಿರುವ ಓರ್ವ ನಿಜವಾದ ಪ್ರಾಧ್ಯಾಪಕನ ತೊಳಲಾಟ ಈ ಕೃತಿಯಲ್ಲಿ ಕಂಡುಬರುತ್ತದೆ. ಸಂಶೋಧನಾ ಚಟುವಟಿಕೆಗಳಿಂದ ವಿಶ್ವವಿದ್ಯಾನಿಲಯಗಳು ಮುಜುಗರ ಪಡಬೇಕಾದಂತಹ ವಾತಾವರಣದಲ್ಲಿ ವಿಶ್ವವಿದ್ಯಾನಿಲಯಕ್ಕೆ ಗೌರವ ತರುವಂತಹ ಕೆಲಸವನ್ನು ಈ ಪುಸ್ತಕ ಮಾಡಿದೆ ಎಂದು ಹೇಳಿದರು.
ಕನ್ನಡದಲ್ಲಿ ನವ್ಯರ ಅಬ್ಬರದಿಂದ ಪಾಂಡಿತ್ಯ ಹಿನ್ನೆಲೆಗೆ ಸರಿದಿತ್ತು. ಆದರೆ ಶೆಟ್ಟಿಯವರು ಈ ಪುಸ್ತಕದಲ್ಲಿ ಪಾಂಡಿತ್ಯ-ಸಂವೇದನೆ ಮತ್ತು ವಿಮರ್ಶೆ ಎಂಬ ಮೂರು ಅಂಶಗಳನ್ನು ಬೆಸೆದು ಕಟ್ಟಿರುವುದರಿಂದ ಇದು ಕನ್ನಡದ ಸಂಶೋಧನ ಜಗತ್ತಿನಲ್ಲಿ ಅ-ಪೂರ್ವವಾದ ಕೃತಿಯಾಗಿದೆ. ಫ್ಯಾಕ್ಟ್ ಫೈಂಡಿಂಗ್ ನಿಂದ ಥಾಟ್ ಫೈಂಡಿಂಗ್ ಕಡೆಗೆ ಹೇಗೆ ಸಂಶೋಧಕನಾದವನು ಚಲಿಸಬೇಕು ಎಂದು ಈ ಕೃತಿ ಹೇಳುತ್ತಿರುವುದರಿಂದ ಇದು ನಿಜಕ್ಕೂ ಮಾರ್ಗ ಕೃತಿಯೂ ಆಗಿದೆ ಎಂದು ಬಣ್ಣಿಸಿದರು.
ಕವಿ-ಚಿಂತಕ ರಘುನಂದನ ಮಾತನಾಡಿ ಈ ಪುಸ್ತಕ ಪ್ರತಿಯೊಬ್ಬರ ಮನೆ-ಮನದಲ್ಲಿರಬೇಕಾದ ಪುಸ್ತಕ. ಓದಿ-ಮನನ ಮಾಡಿ ತನ್ನ ಒಳಗನ್ನು-ಹೊರಗನ್ನು ನೋಡುವಂತೆ ಮಾಡುವ ಪುಸ್ತಕ ಎಂದು ಅಭಿಪ್ರಾಯಪಟ್ಟರು.
ಗ್ರೀಕ್ ಕಾಲದಿಂದ ಆರಂಭಿಸಿ ಇಂದಿನವರೆಗಿನ ಎಲ್ಲ ಮುಖ್ಯ ವಿದ್ಯಮಾನಗಳನ್ನು ವಿಮರ್ಶಿಸುವ ಈ ಪುಸ್ತಕ ಬರೆದು ನಿತ್ಯಾನಂದ ಶೆಟ್ಟಿಯವರು ಕನ್ನಡ ಸಂಶೋಧನ ಲೋಕಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಇಂತಹ ಪುಸ್ತಕವನ್ನು ಓದುತ್ತಾ ನನಗೆ ಹೊಟ್ಟೆಕಿಚ್ಚು ಶುರುವಾಯ್ತು. ತಮ್ಮಲ್ಲಿ ನಡೆಯುತ್ತಿರುವ ಕಾಂತಾಸಮ್ಮಿತೆಯ ಮಾದರಿಯಲ್ಲಿರುವ ಈ ಪುಸ್ತಕ ನೂರಾರು ದೃಷ್ಟಾಂತಗಳಿಂದ ಅತ್ಯಂತ ಕಠಿಣ ಪರಿಕಲ್ಪನಾತ್ಮಕ ವಿಷಯವನ್ನು ಸರಳವಾಗಿ ನಿರೂಪಿಸಿ ಎಲ್ಲರೂ ಓದಬಹುದಾದ ಪುಸ್ತಕವಾಗಿ ರೂಪುಗೊಂಡಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಬಾ ಹ ರಮಾಕುಮಾರಿ ಮಾತಾಡಿ ವಿಶ್ವವಿದ್ಯಾನಿಲಯಗಳು ಏನು ಮಾಡಬೇಕಾಗಿದೆ ಎಂಬ ಪ್ರಶ್ನೆಗೆ ಮಾರ್ಗಾನ್ವೇಷಣೆ ಒಂದು ಉತ್ತರವಾಗಿದೆ ಎಂದರು.
ಕುಲಪತಿಗಳಾದ ಕರ್ನಲ್ ಪ್ರೊ. ವೈ ಎಸ್ ಸಿದ್ದೇಗೌಡರು ಹೊಸಹೊಸ ಮಾರ್ಗವನ್ನು ತೋರಿಸುವುದು ಬುದ್ಧಿಜೀವಿಗಳ, ಸಂಶೋಧಕರ ಕೆಲಸವಾಗಿದೆ. ನಿತ್ಯಾನಂದ ಶೆಟ್ಟರು ಅತ್ಯಂತ ದಿಟ್ಟತನದಿಂದ ಈ ಕೆಲಸವನ್ನು ಮಾಡಿದ್ದು ಅವರು ಅಭಿನಂದನಾರ್ಹರು ಎಂದರು.
ಕುಲಸಚಿವ ಪ್ರೊ. ಕೆ ಶಿವಚಿತ್ತಪ್ಪ ಮತ್ತು ಲೇಖಕ ನಿತ್ಯಾನಂದ ಬಿ ಶೆಟ್ಟಿಯವರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.