Publicstory
ತುರುವೇಕೆರೆ: ಶಾಸಕ ಮಸಾಲಜಯರಾಂ ಕುರುಕ್ಷೇತ್ರ ಪೌರಾಣಿಕ ನಾಟಕದ ರಂಗ ಗೀತೆಯೊಂದನ್ನು ಸುಶ್ರಾವ್ಯವಾಗಿ ತುಂಬಿದ ಸಭೆಯಲ್ಲಿ ಹಾಡುವ ಮೂಲಕ ಗ್ರಾಮಸ್ಥರು ಮತ್ತು ಕಾರ್ಯಕರ್ತರಿಂದ ಚಪ್ಪಾಳೆ, ಶಿಳ್ಳೆ ಹೊಡೆಸಿಕೊಂಡ ಪ್ರಸಂಗ
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ ಗ್ರಾಮದಲ್ಲಿ ನಡೆಯಿತು.
ಲೋಕೋಪಯೋಗಿ ಇಲಾಖೆಯ ಟಿಎಸ್ಪಿ, ಎಸ್.ಸಿ.ಪಿ ಯೋಜನೆಯಡಿಯ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಹಾಗು ಬಾಕ್ಸ್ ಚರಂಡಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ನಡೆಯಿತು.
ನಂತರ ಮಾತನಾಡಿದ ಶಾಸಕರು ತಾಲ್ಲೂಕು ವಿಧಾನಸಭಾ ಕ್ಷೇತ್ರದಾದ್ಯಂತ ಕೆರೆ ಕಟ್ಟೆಗಳಿಗೆ ಹೇಮಾವತಿ ನಾಲಾ ನೀರನ್ನು ಶೇ.90ರಷ್ಟು ತುಂಬಿಸಲಾಗಿದ್ದು ಆಮೂಲಕ ರೈತರಲ್ಲಿ ಸಂತಸ ಉಂಟು ಮಾಡಿದೆ.
ಹೇಮಾವತಿ ನಾಲಾ ನೀರು ಸರಾಗವಾಗಿ ಹರಿಯಲು ನಾಲೆಯ ಶಿಲ್ಟ್ ಅನ್ನು ತೆಗೆಯಲಾಗಿದ್ದು ಅದಕ್ಕಾಗಿ 2.80 ಕೋಟಿ ರೂಪಾಯಿಗಳ ಅನುದಾನದ ಹಣವನ್ನು ಬಳಸಲಾಗಿದೆ. ಇನ್ನುಳಿದ ಕಡೆ ನಾಲಾ ನೀರು ಹರಿಸುವ ಮುಂಚೆಯೇ ಕಸಕಟ್ಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿ.ಕಲ್ಕೆರೆ ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ 2 ಕೋಟಿ ರೂಪಾಯಿಗಳ ವಿವಿಧ ಕಾಮಗಾರಿ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ರಸ್ತೆಗಳನ್ನು ಮಣ್ಣುಮುಕ್ತ ಗ್ರಾಮವನ್ನಾಗಿ ಮಾಡುವ ಭರವಸೆ ವ್ಯಕ್ತಪಡಿಸಿದರು.
ಈ ಮಾರ್ಗದ ಬೋಚಿಹಳ್ಳಿಯಿಂದ ಮಾದಿಹಳ್ಳಿವರೆಗಿನ ಡಾಂಬರ್ ರಸ್ತೆ ನಿರ್ಮಾಣಕ್ಕಾಗಿ 8 ಕೋಟಿ ಅನುದಾನವನ್ನು ನೀಡಲಾಗಿದೆ. ಅದೇ ರೀತಿ ಮಾಯಸಂದ್ರ-ಟಿ.ಬಿ ಕ್ರಾಸ್ ರಸ್ತೆ ಯಿಂದ ಕಲ್ಲೂರ್ ಕ್ರಾಸ್ ವರೆಗಿನ ಡಾಂಬರ್ ರಸ್ತೆಗೆ 2 ಕೋಟಿ ಅನುದಾನ ವಿನಿಯೋಗಿಸಲಾಗಿದೆ ಎಂದರು.
ಇದೇ ವೇಳೆ ಬಾಲಗಂಗಾಧರನಾಥ ಸ್ವಾಮಿ ಹಾಗು ಶಿವಕುಮಾರ್ ಸ್ವಾಮಿಗಳ ಪುತ್ಥಳಿ ಅನಾವರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಂಗಭೂಮಿ ಗೀತೆಗಳ ಕಾರ್ಯಕ್ರಮದಲ್ಲಿ ಶಾಸಕರು ಕುರುಕ್ಷೇತ್ರ ಪೌರಾಣಿಕ ನಾಟಕದ ರಂಗಗೀತೆಯೊಂದನ್ನು ಹಾಡುವ ಮೂಲಕ ಗ್ರಾಮಸ್ಥರು ಮತ್ತು ಕಾರ್ಯಕರ್ತರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಆರ್.ಜಯರಾಂ, ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಂ, ವಿಎಸ್ಎಸ್ಎನ್ ಅಧ್ಯಕ್ಷ ಆಯರಹಳ್ಳಿ ಪಾಂಡು, ಮುಖಂಡರಾದ ಜಗದೀಶ್, ಪ್ರಕಾಶ್, ರಷೀದ್, ನಾಗಣ್ಣ, ದಾಸಣ್ಣ, ಶ್ರೀನಿವಾಸ್, ವಿರೂಪಾಕ್ಷ ಹಾಗು ದಿನೇಶ್, ಸುರೇಶ್ ಉಪಸ್ಥಿತರಿದ್ದರು.