Publicstory
ತುರುವೇಕರೆ: ಶಾಸಕ ಮಸಾಲಜಯರಾಂ, ಜಿಲ್ಲಾ ಪಂಚಾಯಿತಿ ಸದಸ್ಯೆ ಪತಿ ನಾಗರಾಜು ಅವರುಗಳ ಕುಮ್ಮಕ್ಕಿನಿಂದ ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರ ಹೋಬಳಿ ಇಡಗೂರಿನ ಜೆಡಿಎಸ್ ಕಾರ್ಯಕರ್ತ ಆನಂದನನ್ನು ಬಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ ಮಾಡಿದರು.
ಇಡಗೂರಿನಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಕೆಂಪಮ್ಮದೇವಿ ಜಾತ್ರೆ ನಡೆದಿತ್ತು. ಆ ಜಾತ್ರೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಇಡಗೂರಿನ ರವಿ ಮತ್ತು ಆತ ಸ್ನೇಹಿತರು ಸೇರಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ವೃತ್ತಿಪರ ಕೊಲೆಗಡುಕರು ಬಳಸುವ ಬಾಕುವಿನಿಂದ ಇರಿದು ಮಾರಣಾಂತಿಕ ಕೊಲೆ ಪ್ರಯತ್ನ ನಡೆದಿರುವುದು ಪೊಲೀಸರ ನಿರ್ಲಕ್ಷ್ಯತನವನ್ನು ಎತ್ತಿಹಿಡಿದಿದೆ ಎಂದರು.
ಇಂತಹ ಅಹಿತಕರ ಘಟನೆಯು ಈ ತಾಲ್ಲೂಕಿನಲ್ಲಿ ಅದರಲ್ಲೂ ಸಿ.ಎಸ್.ಪುರ ಹೋಬಳಿಯಲ್ಲಿ ನಡೆದೇ ಇರಲಿಲ್ಲ. ಆದರೆ ಮಸಾಲಜಯರಾಂ ಶಾಸಕನಾದ ಮೇಲೆ ಇದು 3 ನೇ ಪ್ರಕರಣವಾಗಿದೆ. ಶಾಂತವಾಗಿದ್ದ ಸಿಎಸ್.ಪುರಕ್ಕೆ ಇವರು ಕಾಲಿಟ್ಟ ಮೇಲೆ ಅಲ್ಲಿ ಅಶಾಂತಿ ಮೂಡಿ ಜನರಲ್ಲಿ ಆತಂಕ ಹೆಚ್ಚಿಸಿದೆ.
ಇದರ ಹೊಣೆಯನ್ನು ಶಾಸಕರೆ ಹೊರಬೇಕು. ಶಾಸಕ ಮಸಾಲಜಯರಾಂ ಮತ್ತು ಆತನ ಬೆಂಬಲಿಗರ ಗುಂಡಾವರ್ತನೆಯನ್ನು ಕೂಡಲೇ ನಿಯಂತ್ರಿಸಬೇಕೆಂದು ಜಿಲ್ಲಾಧಿಕಾರಿ ಹಾಗು ಎಸ್ಪಿವರನ್ನು ಒತ್ತಾಯಿಸಿದರು.
ಆರೋಪಿ ಇಡಗೂರು ರವಿ ಮತ್ತು ಆತನ ಸಹಚರರ ಮೇಲೆ ಸಿಎಸ್.ಪುರ ಠಾಣೆಯಲ್ಲಿ ಸೆಕ್ಷಷನ್ 307 ಪ್ರಕರಣ ದಾಖಲಾಗಿದ್ದು ಪೊಲೀಸರು ನಿರ್ಲಕ್ಷ್ಯ ವಹಿಸದೆ ಹಾಗು ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಬಂಧಿಸ ಬೇಕು. ಇಲ್ಲವಾದಲ್ಲಿ ಇನ್ನು ಮೂರುದಿನದೊಳಗಾಗಿ ನನ್ನ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಠಾಣೆಯ ಎದುರು ಕೋವಿಡ್ ಮಾರ್ಗಸೂಚಿಯಂತೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಯುವ ರಾಜ್ಯ ಘಟಕದ ಪ್ರಧಾನ ಕಾರ್ಯದಶರ್ಿ ದೊಡ್ಡಾಘಟ್ಟ ಚಂದ್ರೇಶ್, ಪಟ್ಟಣ ಪಂಚಾಯಿತಿ ಸದಸ್ಯ ವಿಜಯೇಂದ್ರ, ಕೊಳಾಲ ಗಂಗಾಧರ್, ಧರೀಶ್, ಆನೆಮೊಳೆ ಲಕ್ಕಣ್ಣ ಇದ್ದರು.