ತುಮಕೂರು ಲೈವ್

Mobile: ಮಕ್ಕಳ‌ ಮೇಲೆ ಗೀಳು

Tumkuru: ಮೊಬೈಲ್ ಗೀಳು ಹಾಗೂ ಟಿ. ವಿ.ಯಲ್ಲಿ ಬರುವ ಧಾರವಾಹಿಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಮಕ್ಕಳು ಚಟುವಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ಯಶಸ್ಸನ್ನು ಸಾಧಿಸಬೇಕೆಂದು ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ. ಮರುಳಯ್ಯ ಅಭಿಪ್ರಾಯಪಟ್ಟರು.

ಬಾಲಭವನ ಸಮಿತಿ ಬೆಂಗಳೂರು, ತುಮಕೂರು ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಸಹ ಯೋಗದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಚಟುವಟಿಕೆಗಳ ಕಾರ್ಯಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಮಕೂರು ವಿಜ್ಞಾನ ಕೇಂದ್ರದ ಸಹಕಾರ್ಯದರ್ಶಿ ಪಿ. ಪ್ರಸಾದ್ ಮಾತನಾಡಿ, ಅಂಕಗಳಿಗೆ ಮಾರುಹೋಗದೆ ಅನುಭವ ಹಾಗೂ ಚಟುವಟುಕೆಗಳ ಮೂಲಕ ವೈಜ್ಞಾನಿಕ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಯಶಸ್ಸು ಕಾಣಿರೆಂದು ಮಕ್ಕಳಿಗೆ ಕವಿಮಾತು ಹೇಳಿದರು.

ಕಾರ್ಯಾಗಾರದಲ್ಲಿ ತುಮಕೂರಿನ ಪಶ್ಚಿಮ ಬಡಾವಣೆ , ಮಾರ್ಕೆಟ್ ಚೌಕ ಹಾಗೂ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಪರಿಸರ ಅಧ್ಯಯನ , ಮಾಡು-ನೋಡು , ಓರಿಗಮಿ, ಪವಾಡ ರಹಸ್ಯ ಬಯಲು ಹಾಗೂ ವಿಜ್ಞಾನ ಚಲನಚಿತ್ರಗಳ ವೀಕ್ಷಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಸ್. ರವಿಶಂಕರ್ , ಉಪಾಧ್ಯಕ್ಷ ಎಂ. ಹನುಮದಾಸ್ , ಸಹಕಾರ್ಯದರ್ಶಿ ಟಿ. ಎಸ್. ನಿತ್ಯಾನಂದ, ಜಿಲ್ಲಾ ಬಾಲಭವನದ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಪಿ. ಮಮತ, ಶಿಕ್ಷಕರಾದ ಕೇಶವ ಮೂರ್ತಿ ಹಾಗೂ ಲತಾ ಭಾಗವಹಿಸಿದ್ದರು.

Comment here