ತುರುವೇಕೆರೆ: ನಫೆಡ್ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಯನ್ನು ದಿಢೀರ್ ನಿಲ್ಲಿಸಿರುವುದರಿಂದ ತಾಲ್ಲೂಕಿನ ರೈತರಿಗೆ ಬಾರಿ ಅನ್ಯಾಯವಾಗಿದ್ದು ಕೇಂದ್ರಸರ್ಕಾರ ಕೂಡಲೇ ನಫೆಡ್ ನೋಂದಣಿ ಅವಧಿಯನ್ನು ವಿಸ್ತರಿಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಆಗ್ರಹಿಸಿದ್ದಾರೆ.
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೊಬ್ಬರಿ ಬೆಲೆ ಪಾತಾಳಕಂಡಿದ್ದು ಕೊಬ್ಬರಿಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಬೀದಿಗೆ ಬಂದಿದೆ.
ರಾಜ್ಯ ಸರ್ಕಾರ ಸೇರಿದಂತೆ ಹಲವು ರೈತ ಮುಖಂಡರುಗಳು ಕೊಬ್ಬರಿಗೆ ಬೆಂಬಲ ಬೆಲೆಯನ್ನು ಘೋಷಿಸಬೇಕು ಹಾಗು ನಫೆಡ್ ಕೇಂದ್ರ ತೆರೆಯ ಬೇಕೆಂದು ಮನವಿ ಮಾಡುತ್ತಾ ಬಂದಿದ್ದರ ಪರಿಣಾಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯ ದನ ಸೇರಿ ಕ್ವಿಂಟಾಲ್ಗೆ 13500 ನೀಡುವುದಾಗಿ ಹೇಳಿ ನಫೆಡ್ ಖರೀದಿ ಕೇಂದ್ರವನ್ನು ಸೋಮವಾರ ತೆರೆಯಲಾಗಿತು. ಆದರೆ ನಫೆಡ್ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ವರ್ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿ ಸಾಕಷ್ಟು ಮಂದಿ ರೈತರು ನಫೆಡ್ ಕೇಂದ್ರದ ಬಳಿ ಕಾದು ಕುಳಿತರೂ ನೋಂದಿಣಿಯ ಅವಕಾಶದಿಂದ ವಂಚಿತರಾಗಿದ್ದಾರೆ.
ನಫೆಡ್ ಅಧಿಕಾರಿಗಳು ಜನಸಂದಣಿ ಹೆಚ್ಚಾಗುತ್ತದೆಂದು ಹೋಬಳಿ ಕೇಂದ್ರದಲ್ಲಿ ನಫೆಡ್ ಸೆಂಟರ್ ಮಾಡುತ್ತೇವೆಂದು ಕಾಲಹರಣ ಮಾಡಿ ಈಗ ಮೂರೇ ದಿನಕ್ಕೆ ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆಂದು ಸಿಡಿಮಿಡಿಗೊಂಡರು.
ಜಿಲ್ಲಾಧಿಕಾರಿಗಳು, ನಫೆಡ್ ಎಂ.ಡಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ರೈತರಿಗೆ ನಫೆಡ್ ತೆರೆಯುವ ಬಗ್ಗೆ ವ್ಯವಸ್ಥಿತವಾಗಿ ಪ್ರಚಾರ ನಡೆಸಿಲ್ಲ. ಸರ್ವರ್ ಸಮಸ್ಯೆ ಎಂದೇ ಮೂರ್ನಾಲ್ಕು ದಿನ ವಿಳಂಬ ಮಾಡಿದರು ರೈತರ ಸಮಸ್ಯೆ ಅರಿತು ನೋಂದಣಿ ಪ್ರಕ್ರಿಯೆ ಮಾಡಿಲ್ಲವೆಂದು ದೂರಿದರು.
ಈಗ ಕೊಬ್ಬರಿಗೆ ನೀಡುತ್ತಿರುವ ಬೆಂಬಲ ಬೆಲೆಯಿಂದ ರೈತರ ಸಮಸ್ಯೆ ನಿವಾರಣೆಯಾಗದು ಹಾಗಾಗಿ ವೈಜ್ಞಾನಿಕ ಬೆಲೆಯಾಗಿ ಕನಿಷ್ಠ 15 ರಿಂದ 20 ಸಾವಿರದ ತನಕ ಬೆಲೆ ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಕೇಂದ್ರ ಸರ್ಕಾರದ ಈಚಿನ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಇಡೀ ದೇಶದಲ್ಲೆ ಕರ್ನಾಟಕ ಹೆಚ್ಚು ಜಿ.ಎಸ್.ಟಿ ಹಾಗು ಇನ್ನಿತರ ತೆರಿಗೆಯನ್ನು ಕಟ್ಟುತ್ತದೆ. ಆದರೆ ಬಿಜೆಪಿ ಆಡಳಿತಾ ರೂಢ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ನೀಡಿ ಮಲತಾಯಿಧೋರಣೆ ಮಾಡುತ್ತಿದೆ ಎಂದರು.
ಈ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಾಗಲಿ ಅಥವಾ ಬಿಜೆಪಿ ರಾಜ್ಯಧ್ಯಕ್ಷ ವಿಜೆಯೇಂದ್ರ ಕೂಡ ತುಟಿಬಿಚ್ಚಿಲ್ಲ. ಬಿಜೆಪಿಯವರು ಧರ್ಮ, ಜಾತಿಗಳ ನಡುವೆ ಸಂಘರ್ಷ ಭಿತ್ತಿ ಜನರ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಕೇಂದ್ರ ಬಳಿ ಹೋಗಿ ರಾಜ್ಯದ ಪಾಲು ತರಲಿ ಎಂದು ಸವಾಲಾಕಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ರಾಜ್ಯದ ಪಾಲಿನ ಬಗ್ಗೆ ಹೋರಾಟ ಮಾಡಿ ಕೇಂದ್ರಕ್ಕೆ ಎಚ್ಚರಿಗೆ ಸಂದೇಶ ನೀಡಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಜಾಗೃತಿ ಜಾಥ ತಾಲ್ಲೂಕಿಗೆ ಆಗಮಿಸುತ್ತಿದ್ದು ಸಂವಿಧಾನ ನಮ್ಮೆಲ್ಲರ ಹಕ್ಕು ಅದಕ್ಕೆ ಗೌರವ ಕೊಡುವ ಮೂಲಕ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಹಬ್ಬದೋಪಾದಿಯಲ್ಲಿ ಸ್ವಾಗತಿಸೋಣ ಎಂದರು.
ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜು ಮಾತನಾಡಿ, ತಾಲ್ಲೂಕಿನ ನಫೆಡ್ ನೋಂದಣಿ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಇದಕ್ಕೆ ಕಾರಣರಾದ ಅಧಿಕಾರಿಗಳು ಬಗ್ಗೆ ತನಿಖೆ ನಡೆಸಿ ಶಿಕ್ಷೆಯಾಗ ಬೇಕು. ಮತ್ತು ಈಗಾಗಲೇ ನೋಂದಾವಣಿಯಾಗಿರುವ ಪಟ್ಟಿಯನ್ನು ವಜಾ ಮಾಡಿ ಹೊಸದಾಗಿ ನಫೆಡ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರುಗಳಾದ ಪ್ರಸನ್ನಕುಮಾರ್, ರಾಜಣ್ಣ, ನಂಜುಂಡಪ್ಪ, ಮಾಳೆಕೃಷ್ಣಪ್ಪ, ಅಪ್ಝಲ್, ಮಹೇಂದ್ರ ಇನ್ನಿತರರು ಇದ್ದರು.