Koratagere: ಪರಮೇಶ್ವರ್ ಗೆದ್ದರೆ ನನಗೆ ಸಂತೋಷವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಬೇಕಿರುವುದು ರಾಜ್ಯದ 7 ಕೋಟಿ ಜನರ ಆಶಯವಾಗಿದೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ, ರಾಜ್ಯದ ಜನರು ತಲೆ ತಗ್ಗಿಸುವಂತೆ ರಾಜ್ಯಭಾರ ಮಾಡುತ್ತಿರುವ ಬಿಜೆಪಿಯನ್ನು ತೊಲಗಿಸಿ ರಾಜ್ಯವನ್ನು ಉಳಿಸಲು ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡಿದರು.
ಸ್ವಾತಂತ್ರ ಬಂದಾಗಿನಿಂದ ನಾನು ಮುಖ್ಯಮಂತ್ರಿ ಹುದ್ದೆ ಬಿಡುವವರೆಗೆ ರಾಜ್ಯದ ಸಾಲ 2.70 ಲಕ್ಷ ಕೋಟಿ, ಆದರೆ ಈಗ 5.64 ಲಕ್ಷ ಕೋಟಿ ಸಾಲವನ್ನು ಮಾಡಿದ್ದಾರೆ, ಕೇವಲ ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿ, ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ, ಯೋಜನಾ ಬದ್ಧ ವೆಚ್ಚ 103ರಷ್ಟಿದೆ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆ, ಬಿಜೆಪಿ ಸರ್ಕಾರ ಒಂದು ಮನೆಯನ್ನು ನೀಡಿಲ್ಲ ಎಂದರು.
ಬಿಜೆಪಿ ಲಂಚ ಹೊಡೆಯುವುದನ್ನು ಕಡಿಮೆ ಮಾಡಿದ್ದರೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ಕಡಿಮೆ ಮಾಡುವ ಅಗತ್ಯ ಬರುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರಲಿದೆ, ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ, ರೈತರ ಸಾಲಮನ್ನಾ ಮಾಡಲು ಆಗದ ಬಿಜೆಪಿ ಉದ್ಯಮಿಗಳ 12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ, ಶ್ರೀಮಂತರ ಪರ ಇರುವ ಬಿಜೆಪಿ, ರೈತರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿಯಾಗಲಿದೆ ಎನ್ನುವ ಮನೋಭಾವನೆ ಇರುವವರಿಗೆ ಅಧಿಕಾರ ಕೊಡಬೇಕೆ ಎಂದು ಪ್ರಶ್ನಿಸಿದರು.
ಮೋದಿ ಚುನಾವಣೆಗಾಗಿ ಬರುತ್ತಿದ್ದಾರೆ, ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಮುಖ ನೋಡಿ ಜನರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿದೆ, ಮೋದಿ ನೂರು ಬಾರಿ ಬಂದರೂ ಬಿಜೆಪಿಯ ಭ್ರಷ್ಟ್ರತೆಯನ್ನು ಮುಚ್ಚಲು ಆಗುವುದಿಲ್ಲ, ರಾಜ್ಯದ ಜನರು ಪ್ರಬುದ್ಧರಿದ್ದಾರೆ, ಅಚ್ಛೇದಿನ್ ಬರುತ್ತದೆ ಎಂದರು ಬಂತಾ ಎಂದು ಪ್ರಶ್ನಿಸಿದರು