Publicstory/prajayoga
ತುಮಕೂರು: ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಮೂಲಕ ನೈಲಾನ್ ಮತ್ತು ಪಾಲಿಯಸ್ಟರ್ ವಸ್ತುಗಳಿಂದ ತಯಾರಿಸಿದ ರಾಷ್ಟ್ರ ಧ್ವಜ ಬಳಕೆಗೆ ಅವಕಾಶ ಮಾಡಿಕೊಡುವ ಮೂಲಕ, ನೇಕಾರರ ಹೊಟ್ಟೆಯ ಮೇಲೆ ಒಡೆದಿದೆ ಎಂದು ಜಿಲ್ಲಾ ನೇಕಾರರ ಸಮುದಾಯದ ಕಾರ್ಯದರ್ಶಿ ಧನಿಯಕುಮಾರ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಆಗಸ್ಟ್ 17 ರಂದು ನಡೆಸಲು ಉದ್ದೇಶಿಸಿರುವ 8ನೇ ಅಂತರರಾಷ್ಟ್ರೀಯ ನೇಕಾರರ ದಿವಸ ಕಾರ್ಯಕ್ರಮದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಧ್ವಜಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಹತ್ತಿಯ ಬಟ್ಟೆಯಿಂದ ತಯಾರಿಸಿದ ರಾಷ್ಟ್ರದ್ವಜವನ್ನು ಮಾತ್ರ ಬಳಕೆ ಮಾಡಬೇಕೆಂಬ ನಿಯಮವಿದ್ದ ಕಾರಣ, ರಾಷ್ಟ್ರೀಯ ಹಬ್ಬ ಸಂದರ್ಭದಲ್ಲಿ ನೇಕಾರರಿಗೆ ಧ್ವಜ ನೇಯ್ಗೆ ಮಾಡಲು ಆರ್ಡರ್ಗಳು ಬರುತ್ತಿದ್ದವು. ಇದರಿಂದ ಸಾವಿರಾರು ನೇಕಾರರ ಕುಟುಂಬಗಳು ಜೀವನ ನಡೆಸುತ್ತಿದ್ದರು. ಆದರೆ ಸರ್ಕಾರ ನೈಲಾನ್ ಮತ್ತು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಭಾವುಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ನೇಕಾರರ ಕೈಯಲ್ಲಿ ಕೆಲಸವಿಲ್ಲದೆ, ಹಸಿದ ಹೊಟ್ಟೆಯಲ್ಲಿಯೇ ಜೀವನ ನಡೆಸುವಂತಾಗಿದೆ. ಸರ್ಕಾರದ ಈ ನೀತಿ ಖಂಡನೀಯ. ಸರ್ಕಾರ ಕೂಡಲೇ ಧ್ವಜ ಸಂಹಿತೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ದೇವಾಂಗ ಸಮಾಜದ ಅಧ್ಯಕ್ಷರಾದ ರಾಮಕೃಷ್ಣಯ್ಯ ಮಾತನಾಡಿ, ನೇಕಾರ ಸಮುದಾಯದ ಬಟ್ಟೆ ನೇಯ್ದು ಪ್ರಪಂಚದ ಜನರ ಮಾನ ಮುಚ್ಚುವ ಪವಿತ್ರ ವೃತ್ತಿ ಮಾಡುತ್ತಿದೆ.1915ರಲ್ಲಿ ಮಹಾತ್ಮಗಾಂಧಿ ವಿದೇಶಿ ವಸ್ತುಗಳನ್ನು ತ್ಯಜಿಸಿ, ಸ್ವದೇಶಿ ವಸ್ತುಗಳಿಗೆ ಕರೆ ನೀಡಿದ್ದರು.
ಚಳವಳಿಯ 100 ನೇ ವರ್ಷದ ನೆನಪಿಗಾಗಿ ಪ್ರಧಾನಿ ನರೇಂದ್ರಮೋದಿ ಆಗಸ್ಟ್ 07ನ್ನು ನೇಕಾರರ ದಿನವಾಗಿ ಘೋಷಿಸಿದ್ದರು. ಆದರೆ ಕಳೆದ ಎರಡು ವರ್ಷಗಳ ಕಾಲ ಕರೋನದಿಂದ ಕೆಲಸವಿಲ್ಲದೆ ಅರ್ಥಿಕ ಸಂಕಷ್ಟ ಅನುಭವಿಸುತ್ತಿದ್ದ ನೇಕಾರರ ಮೇಲೆ ಧ್ವಜ ಸಂಹಿತೆ ತಿದ್ದುಪಡಿ, ಸಮುದಾಯವು ಮತ್ತಷ್ಟು ಆರ್ಥಿಕವಾಗಿ ಕುಸಿಯುವಂತೆ ಮಾಡಿದೆ ಎಂದರು.
ದೇವಾಂಗ ಸಮುದಾಯದ ಮುಖಂಡರಾದ ರಾಮಕೃಷ್ಣಯ್ಯ ಮಾತನಾಡಿ, ನೆರೆಯ ತಮಿಳುನಾಡು ಸರ್ಕಾರ ನೇಕಾರರಿಗೆ ಉಚಿತವಾಗಿ ವಿದ್ಯುತ್, ಆಶ್ರಯ ಮನೆ, ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ವಿದ್ಯಾಭ್ಯಾಸದಲ್ಲಿ ಮೀಸಲಾತಿ ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರವು ನೇಕಾರರಿಗೆ 100 ಯೂನಿಟ್ವರೆಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಕಚ್ಚಾವಸ್ತುಗಳ ಸರಬರಾಜಿನ ಜೊತೆಗೆ, ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಬೇಕೆಂಬುದು ಕರ್ನಾಟಕ ನೇಕಾರರ ಸಮುದಾಯದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಆ.17ರ ವಿಶ್ವ ನೇಕಾರರ ದಿನದಂದು ಮಾಡಲಾಗುವುದು ಎಂದು ತಿಳಿಸಿದರು.
ನೇಕಾರರ ಸಮುದಾಯಗಳ ಒಕ್ಕೂಟದ ಉಪಾಧ್ಕಕ್ಷ ಎಸ್.ವಿ.ವೆಂಕಟೇಶ್ ಮಾತನಾಡಿ, ಆಗಸ್ಟ್ 17 ರಂದು ನಗರದ ಹೊರಪೇಟೆ ಮುಖ್ಯರಸ್ತೆಯಲ್ಲಿರುವ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ವಿಶ್ವ ನೇಕಾರರ ದಿನವನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ಶಾಸಕ ಜಿ.ಬಿ.ಜೋತಿಗಣೇಶ್ ಉದ್ಘಾಟಿಸುವರು. ಜೆಡಿಎಸ್ ಮುಖಂಡ ಎನ್.ಗೋವಿಂದರಾಜು, ಮಾಜಿ ಶಾಸಕ ಡಾ.ರಫೀಕ್ ಅಹಮದ್, ನೇಕಾರರ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್.ಸೋಮಶೇಖರ್ ಸೇರಿದಂತೆ ಹಲವು ನಾಯಕರುಗಳು ಉಪಸ್ಥಿತರಿರುವರು. ಇದೇ ವೇಳೆ ನೇಕಾರರ ಸಮುದಾಯದ ನಾಲ್ವರು ಹಿರಿಯರನ್ನು ಅಭಿನಂದಿಸಲಾಗುವುದು. ಜಿಲ್ಲೆಯ ಎಲ್ಲಾ ನೇಕಾರ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವೇಳೆ ನೇಕಾರರ ಸಮುದಾಯದ ಕುರುಹಿನ ಶೆಟ್ಟಿ, ತೋಗಟವೀರ, ಪದ್ಮಶಾಲಿ, ಅನಿಲ್ಕುಮಾರ್, ಎಸ್.ವಿ.ವೆಂಕಟೇಶ್, ಎಸ್.ಎನ್.ರಂಗಸ್ವಾಮಿ, ಯೋಗಾನಂದ, ಕರಿಯಪ್ಪ ಮತ್ತಿತರರು ಸರ್ಕಾರದ ನಡೆಯನ್ನು ಖಂಡಿಸಿದರು.