ಗುಬ್ಬಿ: ತಾಲ್ಲೂಕು ಕಚೇರಿಯಲ್ಲಿ ಬಗೆದಷ್ಟು ಆಳವಾಗಿ ಬೇರೂರಿರುವ ಭೂ ಹಗರಣ ಬೆಳಕಿಗೆ ಬರುತ್ತಿದೆ. 1999 ರ ಅವಧಿಯಲ್ಲಿದ್ದ ತಹಶಿಲ್ದಾರ್ ಮಂಜೂರು ಮಾಡುವ ಅಧಿಕಾರವನ್ನು ಪ್ಲಸ್ ಮಾಡಿಕೊಂಡ ಕೆಲವರು ದಂಧೆ ಮಾಡಿಕೊಂಡಿದ್ದು, ಈ ಎಲ್ಲವನ್ನೂ ಸೂಕ್ಷ್ಮವಾಗಿ ಲೋಪವಾಗದಂತೆ ಅವಲೋಕಿಸಿ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಶಾಸಕ ಎಸ್‌ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ವಿನಾಯಕ ನಗರ ಬಡಾವಣೆಯಲ್ಲಿ 77.50 ಲಕ್ಷ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಗರಣದಲ್ಲಿನ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆ ಖಚಿತ. ಭೂ ಮಂಜೂರು ಕಮಿಟಿ ಇಲ್ಲದ 1999 ರಿಂದ 2001 ರವರೆಗಿನ ಮೂರು ವರ್ಷದ ಅವಧಿಯಲ್ಲಿ ತಹಶಿಲ್ದಾರ್ ಗೆ ಭೂಮಿ ನೀಡುವ ಅಧಿಕಾರವಿತ್ತು. ಈ ಅವಧಿಯ ಎಲ್ಲಾ ದಾಖಲೆ ತಿದ್ದಿ, ಬೇರೆಯವರ ಹೆಸರು ಸೇರಿಸಿ ಅವ್ಯವಹಾರ ಮಾಡಿದ್ದಾರೆ. ಬಗೆದಷ್ಟು ಆಳವಾಗಿರುವ ಹಗರಣದಲ್ಲಿ ಈಗಾಗಲೇ 400 ಕ್ಕೂ ಅಧಿಕ ಪ್ರಕರಣ ಬಯಲಿಗೆ ಬರುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಒಟ್ಟು 14 ಕೋಟಿ ರೂಗಳ ಪಟ್ಟಣ ಅಭಿವೃದ್ಧಿ ಅನುದಾನ ತಡವಾಗಿ ಬಂದಿದೆ. ಈ ಪೈಕಿ ಮೊದಲ ಪ್ಯಾಕೇಜ್ 6 ಕೋಟಿ ರೂಗಳ ಕೆಲಸಕ್ಕೆ ಚಾಲನೆ ದೊರಕುತ್ತಿದೆ. ಪ್ರಮುಖ ಎಂಜಿ ರಸ್ತೆ ಹಾಗೂ ರೈಲ್ವೇ ಅಂಡರ್ ಪಾಸ್ ರಸ್ತೆಗೆ ಆದ್ಯತೆ ನೀಡಿದ್ದು, ಒಟ್ಟು 3 ಕೋಟಿ ಮೀಸಲಿಡಲಾಗಿದೆ. ಈ ಜೊತೆಗೆ ಬಸ್ ಡಿಪೋ ನಿರ್ಮಾಣಕ್ಕೆ ಹಣ ಮೀಸಲಿದೆ. ಗುರುತಿಸಲಾದ ಭೂಮಿ ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಕ್ರಿಯೆ ನಡೆಸಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಯುಜಿಡಿ ಒಳಚರಂಡಿ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ ಕೊನೆಯ ಹಂತದಲ್ಲಿ ಭೂಮಿ ನೀಡಬೇಕಾದ ರೈತರು ಕೋರ್ಟ್ ಮೆಟ್ಟಿಲೇರಿ ತಡವಾಗಿದೆ. ಒಟ್ಟು ಬಾಕಿ 75 ಲಕ್ಷ ರೂಗಳನ್ನು ಕಟ್ಟಲು ಸೂಚಿಸಿದ್ದ ಸಂಸ್ಥೆಗೆ 45 ಲಕ್ಷ ರೂ ಕಟ್ಟಲಾಗಿತ್ತು. ಬಾಕಿ 30 ಲಕ್ಷ ರೂ ಕಟ್ಟುವ ಸಮಯಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್ ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಶೋಕತ್ ಆಲಿ, ಮಂಗಳಮ್ಮ, ರಂಗಸ್ವಾಮಿ, ಮುಖ್ಯಾಧಿಕಾರಿ ಮಂಜುಳಾದೇವಿ, ಗುತ್ತಿಗೆದಾರ ಮಂಜುನಾಥ್ ಇತರರು ಇದ್ದರು.
ದೊಡ್ಡ ಕಿರೀಟದ ವ್ಯಕ್ತಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರ ನಡವಳಿ ಅಗೌರವ ಸೂಚಿಸುವಂತಹದು. ಅವರ ಮನೆಯ ಕೆಲಸಕ್ಕೆ ಮನೆಯವರೇ ಕರೆದಿಲ್ಲ. ಗೈರು ಹಾಜರಾಗಿರುವುದು ಹಾಸ್ಯಾಸ್ಪದ ಎಂದು ಶಾಸಕ ಶ್ರೀನಿವಾಸ್ ಪ.ಪಂ ಅಧ್ಯಕ್ಷರ ಗೈರು ಹಾಜರಿಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು. ಆದರೆ ಅಧ್ಯಕ್ಷರಾದವರು ನನ್ನನ್ನು ಆಹ್ವಾನಿಸಿಲ್ಲ ಎಂದು ಹೇಳಿ ಮುಖ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗೈರು ಹಾಜರಾಗಿರುವುದು ಶೋಭೆಯಲ್ಲ ಎಂದು ಟೀಕಿಸಿದರು.