Publicstory/prajayoga
ಶಿರಾ : ಶ್ರೀಕೃಷ್ಣನು ಧರ್ಮರಾಜ್ಯ ಸ್ಥಾಪನೆಗೆ ಕ್ರಿ.ಪೂ. 5000 ವರ್ಷಗಳ ಹಿಂದೆ ಜನಿಸಿದ್ದನು. ಶ್ರೀಕೃಷ್ಣನ ಮೂಲ ಉದ್ದೇಶ ದುಷ್ಟರ ಸಂಹಾರ ಶಿಷ್ಟರ ರಕ್ಷಣೆಗಿತ್ತು. ಎಲ್ಲರೂ ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜ ಮುನ್ನಡೆಸಬೇಕಾಗುತ್ತದೆ ಎಂದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶ್ರೀಕೃಷ್ಣನ ವಂಶದಲ್ಲಿ ಜನಿಸಿರುವ ಯಾದವ ಸಮುದಾಯದವರು ನಾವು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ. ಈ ಪ್ರಪಂಚಕ್ಕೆ ಪುಣ್ಯಕೋಟಿ ಕೊಟ್ಟ ಸಮಾಜ, ಯಾದವ ಸಮಾಜ. ಅಂದೇ ರಾಜನೀತಿ ಹೇಳಿಕೊಟ್ಟ ಜನಾಂಗ. ಯಾದವ ಸಮುದಾಯ ಮೂಡನಂಬಿಕೆ ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸಮಾಜದಲ್ಲಿ ರಾಜಕೀಯ ಅಧಿಕಾರ ಹಿಡಿದರೆ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಯಾದವ ಸಮುದಾಯ ಹಿಂದುಳಿದ ಸಮುದಾಯ ನಾವು ಹಿಂಜರಿಯದೆ ನಮ್ಮ ಹಕ್ಕನ್ನು ಕೇಳಿ ಪಡೆಯಬೇಕು ಎಂದರು.
ಶಿರಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ಕೊಟ್ಟಂತೆ ಹಿಂದುಳಿದಿರುವ ಸಮಾಜವಾದ ಯಾದವ ಜನಾಂಗಕ್ಕೆ ಅಭಿವೃದ್ಧಿ ನಿಗಮ ಸ್ಥಾಪಸುವುದಾಗಿ ಹೇಳಿದ್ದರು. ಅದರಂತೆ ಶಿರಾದಲ್ಲಿಯೇ ಮುನ್ನಲೆಗೆ ಬಂದ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಶಿರಾ ತಾಲ್ಲೂಕಿನ ನನ್ನನ್ನು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಇಡೀ ಶಿರಾ ಕ್ಷೇತ್ರದ ನಮ್ಮ ಸಮುದಾಯಕ್ಕೆ ಜನತೆಗೆ ಸಲ್ಲುತ್ತದೆ. ಇದಕ್ಕೆ ಶ್ರಮಿಸಿದ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಾಸಕ.ಡಾ.ಸಿ.ಎಂ.ರಾಜೇಶ್ ಗೌಡ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಹಶೀಲ್ದಾರ್ ಮಮತಾ ಎಂ ಮಾತನಾಡಿ, ಶ್ರೀಕೃಷ್ಣನು ಬೋಧಿಸಿರುವ ರಾಜನೀತಿ ಇಂದಿಗೂ ಎಲ್ಲಾ ಅಧಿಕಾರಿ ವರ್ಗದವರಿಗೂ, ಜನಪ್ರತಿನಿಧಿಗಳಿಗೂ ಅನ್ವಯವಾಗುತ್ತದೆ. ಶ್ರೀಕೃಷ್ಣನ ವ್ಯಕ್ತಿತ್ವ ದುಷ್ಟಶಿಕ್ಷಕ ಶಿಷ್ಟ ರಕ್ಷಣೆ ಮಾಡುವುದಾಗಿತ್ತು. ಶ್ರೀಕೃಷ್ಣ ಎಲ್ಲಾ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದನು. ನ್ಯಾಯವನ್ನು ನಿಷ್ಪಕ್ಷಪಾತವಾಗಿ ಪರಿಪಾಲನೆ ಮಾಡುವಂತೆ ಬೋಧನೆ ಮಾಡಿದ್ದಾನೆ. ತನ್ನ ಸಂಬಂಧಿಕರು ಎಷ್ಟೇ ನೋವು ಕೊಟ್ಟರೂ ಅದನ್ನು ಸಹಿಸಿಕೊಂಡು ಗೆದ್ದು ತೋರಿಸಿದ್ದಾನೆ. ಎಲ್ಲರೂ ಶ್ರೀಕೃಷ್ಣನ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯಾದವ ಮುಖಂಡರಾದ ಹುಳಿಗೆರೆ ಶ್ರೀರಂಗಪ್ಪ, ಎಮ್ಮೆರಹಳ್ಳಿ ಸಿದ್ದಪ್ಪ, ದೊಡ್ಡಗೂಳ ಪರಸಣ್ಣ, ಹಾರೋಗೆರೆ ಮಾರಣ್ಣ, ಗೌಡಗೆರೆ ಚಂದ್ರಶೇಖರ್, ಬಿಇಓ ಶಂಕರಪ್ಪ, ವಲಯ ಅರಣ್ಯಾಧಿಕಾರಿ ನವನೀತನ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಮುರುಳಿ, ಪಾಂಡಪ್ಪ ಇದ್ದರು.