Publicstory/prajayoga
ಶಿರಾ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಉದ್ದೇಶ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಬಂದು ಅವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯವನ್ನು ದೊರಕುವಂತೆ ಮಾಡುವುದು. ಈ ಕಾರ್ಯಕ್ರಮದಿಂದ ಹಲವಾರು ಜನರಿಗೆ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಬುಕ್ಕಾಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮದ ತಮ್ಮಣ್ಣ ಸ್ಮಾರಕ ಪ್ರೌಢಶಾಲಾ ಆವರಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯವನ್ನು ಮಾಡುವುದು ನಮ್ಮ ಕರ್ತವ್ಯ. ನಾವು ಅಧಿಕಾರಿಗಳೂ ಸಹ ಒಂದೊಂದು ಹಳ್ಳಿಗಳಲ್ಲಿ ಓದಿ ಬಂದಿದ್ದೇವೆ. ಅಧಿಕಾರಕ್ಕೆ ಬಂದ ನಂತರ ಆ ಮಣ್ಣನ್ನು ಜನರನ್ನು ಮರೆಯಬಾರದು. ಕಾನೂನು ಪ್ರಕಾರ ಸಿಗಬೇಕಾದ ಸೌಲಭ್ಯ ಜನರಿಗೆ ಸಿಗಬೇಕು. ಕೆಲವೊಮ್ಮೆ ಜನರು ಅಧಿಕಾರಿಗಳು ಬೇರೆ, ಜನರು ಬೇರೆ ಎಂದು ತಿಳಿದುಕೊಂಡಿರುತ್ತಾರೆ. ಅದು ತಪ್ಪು. ಅಧಿಕಾರಿಗಳು ಬೇರೆ ಅಲ್ಲ, ಜನರು ಬೇರೆ ಅಲ್ಲ. ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು, ಸಾವಿರಾರು ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದರು.
ತಹಶಿಲ್ದಾರ್ ಮಮತಾ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವು ಸಾರ್ವಜನಿಕರಿಗೆ ಉಪಯುಕ್ತವಾದ ಕಾರ್ಯಕ್ರಮವಾಗಿದ್ದು, ತಮ್ಮ ಗ್ರಾಮಗಳಿಗೆ ತಾಲೂಕಿನ ಎಲ್ಲಾ 28 ಇಲಾಖೆಯವರು ಹಾಜರಿದ್ದು, ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು. ಪಿಂಚಣಿ, ಮಾಶಾಸನ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ನೇರವಾಗಿ ತಾಲೂಕು ಕಚೇರಿ ಹಾಗೂ ಹೋಬಳಿಗಳ ನಾಡಕಚೇರಿಯನ್ನು ಸಂಪರ್ಕಿಸಿ ತಮ್ಮ ಸವಲತ್ತನ್ನು ಪಡೆಯಿರಿ ಎಂದರು.
ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ:
ಕಾರ್ಯಕ್ರಮದಲ್ಲಿ ಸುಮಾರು 52 ಜನರಿಗೆ ಸಾಗುವಳಿ ವಿತರಿಸಲಾಯಿತು, 215 ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಡಿ ಆದೇಶ ಪತ್ರ ವಿತರಿಸಲಾಯಿತು. ಖಾತೆ ಬದಲಾವಣೆ 60, ತೋಟಗಾರಿಕೆ ಇಲಾಖೆಯಿಂದ 10 ಜನರಿಗೆ ಹನಿ ನೀರಾವರಿ, ಗ್ರಾಮ ಪಂಚಾಯ್ತಿ ವತಿಯಿಂದ 15 ಜನ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು, ಇಬ್ಬರು ವಿಕಲಚೇತನರಿಗೆ ತ್ರಿಚಕ್ರ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್, ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೊಳ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅನಂತರಾಜು, ಕುರುಬರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಬುಕ್ಕಾಪಟ್ಟಣ ಗ್ರಾ.ಪಂ. ಅಧ್ಯಕ್ಷೆ ಸೌಭಾಗ್ಯ, ನೇರಲಗುಡ್ಡ ಗ್ರಾ.ಪಂ. ಅಧ್ಯಕ್ಷೆ ಕವಿತ, ಮಾಜಿ ತಾ.ಪಂ. ಅಧ್ಯಕ್ಷ ಬುಕ್ಕಾಪಟ್ಟಣ ಮಂಜುನಾಥ್, ಗ್ರೇಡ್-2 ತಹಶಿಲ್ದಾರ್ ಮಂಜುನಾಥ್, ನೇರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.