ಸಂದರ್ಶನ: ರವಿಗೌಡ
ತುಮಕೂರು ವಕೀಲರ ಸಂಘದ ಚುನಾವಣೆಯ ಕಾವು ಜೋರಾಗಿದೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ವಕೀಲ ಕೆಂಪರಾಜಯ್ಯ ಅವರು ಎಲ್ಲರೊಂದಿಗೆ ಬೆರೆಯುವ ಸರಳ ಸ್ವಭಾವದವರು. ವಕೀಲರಿಗೆ ದನಿಯಾಗುವಲ್ಲಿ ಯಾವಾಗಲೂ ಮುಂದೆ ನಿಲ್ಲುವ ಅವರನ್ನು ಮತ್ತೊಬ್ಬ ಹಿರಿಯ ವಕೀಲರಾದ ರವಿ ಗೌಡ ಅವರು ಸಂದರ್ಶನ ಮಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
# ನಿಮ್ಮ ಬಗ್ಗೆ ಸ್ವಲ್ಪ ಹೇಳಿ?
ನಾನು, 2003 ರಲ್ಲಿ ಕರ್ನಾಟಕ ರಾಜ್ಯ ವಕೀಲ ಪರಿಷತ್ ನಲ್ಲಿ ಎನ್ರೋಲ್ ಆಗಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದೆ. ಸರಿ ಸುಮಾರು 20 ವರ್ಷಗಳಿಂದ ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಾ, ಜಿಲ್ಲಾ ವಕೀಲ ಸಂಘದಲ್ಲಿ ಪ್ರತಿ ವರ್ಷ ನಡೆಯುವ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿಕೊಂಡು ಬಂದಿದ್ದೇನೆ.
# ವಕೀಲರಿಗಾಗಿ ಏನೆಲ್ಲ ಮಾಡಿದ್ದೀರಿ?
ಜಿಲ್ಲಾ ವಕೀಲ ಸಂಘದಲ್ಲಿ ವಕೀಲರ ವಿವಿಧೋದ್ದೇಶ ಸಹಕಾರ ಸಂಘವನ್ನು ಪ್ರಾರಂಭಿಸಲು ಸಹಕಾರ ನೀಡಿದ್ದು ನನ್ನ ತ್ರಯ ಮರೆಯಲಾರದ ನೆನಪು. ಇಂದು ವಕೀಲರ ವಿವಿದ್ಧೋದ್ದೇಶ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅನೇಕರ ಸಂಕಷ್ಟಗಳಿಗೆ ಹೆಗಲಾಗಿರುವೆ.
ಯುವ ವಕೀಲರುಗಳ ಯಾವುದೇ ಸಮಸ್ಯೆಗಳಿದ್ದರೂ ಮುಂದೆ ನಿಂತು ಪರಿಹರಿಸಿ ಕೊಟ್ಟಿದ್ದೇನೆ. ನ್ಯಾಯಾಲಯ ಹಾಗೂ ಯುವ ವಕೀಲರ ಸಂಬಂಧ ಸುಧಾರಿಸುವಲ್ಲಿ ಅನೇಕ ರೀತಿಯಲ್ಲಿ ನೆರವಾಗಿರುವೆ. ಯಾವುದೇ ವಕೀಲರಿಗೆ ಸಮಸ್ಯೆ ಎದುರಾದಾಗ ಮುಂದೆ ನಿಂತಿದ್ದೇನೆ.
# ಈ ಸಲ ಚುನಾವಣೆಯಲ್ಲಿ ಗೆದ್ದರೆ ಏನೆಲ್ಲ ಮಾಡುತ್ತೀರಿ?
ವಕೀಲರ ಸಂಘದ ಕಟ್ಟಡವನ್ನು ಅತ್ಯಾಧುನಿಕಗೊಳಿಸಬೇಕಾಗಿದೆ. ವಕೀಲರು ತಮ್ಮ ಕಕ್ಷಿದಾರರೊಂದಿಗೆ ಚರ್ಚಿಸಲು ಬೇಕಾದ ಮುಕ್ತ ವಾತಾವರಣ/ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ. ಆಧುನಿಕ ಸೌಲಭ್ಯ ಒದಗಿಸಬೇಕಾಗಿದೆ. ಪಾರ್ಕಿಂಗ್ ಸಮಸ್ಯೆ ಬಗೆಹರಿಸಬೇಕಾಗಿದೆ.
# ಮತ್ತೇ ಇನ್ನೇನು ಮಾಡುತ್ತೀರಿ?
ತುಮಕೂರು ವಕೀಲರ ಸಂಘಕ್ಕೆ ಒಂದು ದೊಡ್ಡ ಇತಿಹಾವಿದೆ. ಇಲ್ಲಿನ ವಕೀಲರ ವಕೀಲಿಕೆ ಬಗ್ಗೆ ಇಡೀ ರಾಜ್ಯದ ವಕೀಲತ ಸಮೂಹದಲ್ಲಿ ಗೌರವವಿದೆ. ಬಾರ್ ಅಂಡ್ ಬೆಂಚ್ ನಡುವೆ ಸಂಬಂಧ ಸೌಹಾರ್ದಗೊಳಿಸಬೇಕಾಗಿದೆ. ಯುವ ವಕೀಲರನ್ನು ಪ್ರೋತ್ಸಾಹಿಸುವಂಥಹ ವಾತಾವರಣ ಕೋರ್ಟ್ ಒಳಗೆ ಬೇಕಾಗಿದೆ. ವಕೀಲರಿಗೆ ಸೂಕ್ತ ಗೌರವ, ಮನ್ನಣೆ ಸಿಗುವಂಥ ವಾತಾವರಣ ನಿರ್ಮಿಸಲು ನ್ಗಾಯಾಧೀಶರು ಹಾಗೂ ವಕೀಲರೊಂದಿಗೆ ಕೊಂಡಿಯಂತೆ ಕೆಲಸ ನಿರ್ವಹಿಸುವ ಆಸೆ ಇದೆ.
# ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ಹೇಗೆ ತರುತ್ತೀರಿ?
ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರುಗಳೊಂದಿಗೆ ನನಗೆ ಉತ್ತಮ ಒಡನಾಟ, ಸಂಬಂಧವಿದೆ. ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಸಂಘದ ಹಿರಿಯ ಸದಸ್ಯರು. ಸಂಸದ ಜಿ.ಎಸ್.ಬಸವರಾಜು, ಶಾಸಕ ಟಿ.ಬಿ.ಜಯಚಂದ್ರ ಇವರೆಲ್ಲರೂ ಸಂಘದ ಸದಸ್ಯರೇ. ಇವರೆಲ್ಲರ ಸಹಕಾರ ಪಡೆಯುವೆ. ಈ ಸಂಬಂಧ ಬಳಸಿಕೊಂಡು ಸರ್ಕಾರದಿಂದ ಅನುದಾನ ತರಲು ಪ್ರಯತ್ನಪಡುವೆ. ಅಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳ ಅನುಕೂಲ ಪಡೆದುಕೊಳ್ಳುವ ಬಗೆಯನ್ನು ಯೋಚಿಸುವೆ.
# ಗೆದ್ದರೆ ನಿಮ್ಮ ಮೊದಲ ಹೋರಾಟ ಯಾವುದು ಆಗಿರಲಿದೆ?
ಯುವ ವಕೀಲರಿಗೆ ಸರ್ಕಾರ ನೀಡುವ ತರಬೇತಿ ಭತ್ಯೆಗೆ ಸಂಖ್ಯೆಯನ್ನು ನಿಗದಿಪಡಿಸಬಾರದು. ಎಷ್ಟು ಜನ ವಕೀಲರು ಅರ್ಜಿ ಹಾಕುತ್ತಾರೋ ಅವರೆಲ್ಲರಿಗೂ ಶಿಷ್ಯ ವೇತನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರುವೆ. ಇದಕ್ಕಾಗಿ ವಕೀಲರ ಪರಿಷತ್, ವಕೀಲರ ಸಂಘಗಳ ನೆರವು ಯಾಚಿಸಲಾಗುವುದು.
ಪೊಲೀಸ್ ಠಾಣೆಗಳಲ್ಲಿ ವಕೀಲರಿಗೆ ಗೌರವ ಸಿಗುವ ವಾತಾವರಣ ನಿರ್ಮಾಣ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಸೇರಿ ಒಂದು ಮಾರ್ಗ ದರ್ಶಿ ಸೂತ್ರ ರಚಿಸುವ ಯೋಚನೆ ಇದೆ.