Publicstory/prajayoga
ತುಮಕೂರು: ಗ್ರಾಮಾಂತರ ಊರುಕೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನರಸಾಪುರ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಮೀಪದಿಂದ ಪಂಪ್ ಹೌಸ್ ವರೆಗೂ ಸುಮಾರು 53 ಲಕ್ಷ ರೂಗಳ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗೆ ಶಾಸಕ ಡಿ ಸಿ ಗೌರೀಶಂಕರ್ ಸೋಮವಾರ ಶಂಕು ಸ್ಥಾಪನೆ ನೆರವೇರಿಸಿದರು.
ಗ್ರಾಮದಲ್ಲಿ ಬಾಕಿ ಇರುವ ರಸ್ತೆ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುವಂತೆ ನರಸಾಪುರ ಗ್ರಾಮಸ್ಥರು ಬೇಡಿಕೆ ಇಟ್ಟರು. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಉಳಿಕೆ ರಸ್ತೆ ಕಾಮಗಾರಿಗಳಿಗೆ 30 ಲಕ್ಷ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ನರಸಾಪುರ ಗ್ರಾಮದಲ್ಲಿರುವ ಶಾಲೆ ಹಳೆಯದಾಗಿದೆ. ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದಾಗ ಶಾಸಕರು ಆದಷ್ಟು ಬೇಗ ಶಾಲಾ ಕಟ್ಟಡ ನಿರ್ಮಿಸಿ ಕೊಡುವುದಾಗಿ ತಿಳಿಸಿದರು.
300 ಎಕರೆ ಕೃಷಿ ಭೂಮಿ ಮುಳುಗಡೆ
ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನೀರುಹರಿಸುತ್ತಿರುವುದರಿಂದ ನರಸಾಪುರ ಹಾಗೂ ಅಕ್ಕಪಕ್ಕದ ಗ್ರಾಮದ ರೈತರ 300 ಎಕರೆ ಅಡಿಕೆ , ತೆಂಗು, ಬಾಳೆ ತೋಟಗಳು ಹಿನ್ನೀರಿನಲ್ಲಿ ಮುಳುಗಿದೆ. ರೈತರ ಸಮಸ್ಯೆ ಆಲಿಸಿದ ತಕ್ಷಣವೇ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹಾನಗರ ಪಾಲಿಕೆ ಮೇಯರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವಿ ಮಾಡಿಕೊಟ್ಟರಲ್ಲದೆ ಆದಷ್ಟು ಬೇಗ ನೀರು ಖಾಲಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರು.
ಬುಗುಡನಹಳ್ಳಿ ಹಿನ್ನೀರಿನ ಪ್ರದೇಶದ ತೋಟಗಳಲ್ಲಿ 30 ಕ್ಕೂ ಹೆಚ್ಚು ರೈತ ಕುಟುಂಬಗಳು ವಾಸವಿದ್ದು, ಅವರ ಮನೆಗಳಿಗೆ ನೀರು ನುಗ್ಗಿವೆ ನೀರಿನ ಪ್ರಮಾಣ ಹೆಚ್ಚಾದರೆ ಮನೆಯಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಬಿ.ಜಿ ಕೃಷ್ಣಪ್ಪ, ಉಪಮೇಯರ್ ನಾಜಿಮ ಬಿ, ಮಹಾನಗರಪಾಲಿಕೆ ಸದಸ್ಯರಾದ ಶ್ರೀನಿವಾಸ್, ಧರಣೇಂದ್ರ ಕುಮಾರ್, ಜೆಡಿಎಸ್ ಯುವಮುಖಂಡ ನರಸಾಪುರ ಹರೀಶ್, ಗ್ರಾಮ ಪಂಚಾಯತಿ ಸದಸ್ಯರಾದ ಗಂಗಣ್ಣ, ಚಂದ್ರಪ್ಪ, ಮಂಜುಳಾ ರಾಜಣ್ಣ ಮಾಜಿ ಗ್ರಾಮ ಪಂಚಾಯತಿ ಸದಸ್ಯ ತೋಪೇಗೌಡ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ
ಚಂದ್ರಶೇಖರ್, ಗ್ರಾಮದ ಮುಖಂಡರಾದ ಲಕ್ಷ್ಮಯ್ಯ, ಕೃಷ್ಣಮೂರ್ತಿ, ಶಿವಕುಮಾರ್ ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು