Publicstory/prajayoga
ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಮುಂಬರುವ ವಿಧಾನಸಭೆ, ಸ್ಥಳೀಯ ಸಂಸ್ಥೆ ಮತ್ತು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ನೇತೃತ್ವದಲ್ಲಿ ಬ್ಲಾಕ್ ಅಧ್ಯಕ್ಷರು, ತಾಲೂಕು ಅಧ್ಯಕ್ಷರುಗಳ ಸಭೆ ನಡೆಯಿತು.
ಈ ವೇಳೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಮುತಬೀರ್ ಅಹಮದ್ ಖಾನ್ ಮಾತನಾಡಿ, ಇಂದಿನ ವಿದ್ಯಮಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳು ಎಷ್ಟು ಮುಖ್ಯವೋ, ಅದೇ ರೀತಿ ನೆಮ್ಮದಿ ಮತ್ತು ಶಾಂತಿ ಜೀವನಕ್ಕೆ ಮುಖ್ಯ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ಹಾಗಾಗಿ ಈ ಹಿಂದಿನ ಚುನಾವಣೆಗಳಲ್ಲಿ ಆದಂತೆ ಅಲಸಂಖ್ಯಾತರ ಮತಗಳು ಛಿದ್ರವಾಗದಂತೆ ಎಚ್ಚರಿಕೆ ವಹಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬಹುದು. ಆ ಮೂಲಕ ಅಲ್ಪಸಂಖ್ಯಾತರು ಸಹ ರಾಜಕೀಯ ಸ್ಥಾನ ಮಾನಗಳನ್ನು ಪಡೆಯುಬಹುದಾಗಿದೆ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 3000 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದರು. ಇದರ ಫಲವಾಗಿ ಹಲವಾರು ಹೊಸ ಯೋಜನೆಗಳ ಮೂಲಕ ಶೈಕ್ಷಣಿಕ, ಅರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಯಿತು. ಆದರೆ ಬಿಜೆಪಿ ಸರ್ಕಾರದಲ್ಲಿ ಅನುದಾನವನ್ನು 800 ಕೋಟಿ ರೂಗಳಿಗೆ ಕಡಿತ ಮಾಡಿದಲ್ಲದೆ, ಅದನ್ನು ಸಹ ಸರಿಯಾಗಿ ನೀಡದೆ, ಹಲವಾರು ಯೋಜನೆಗಳು ಸ್ಥಗೀತಗೊಂಡವು. ಇದರ ಫಲವಾಗಿ ಶೈಕ್ಷಣಿಕ ಸಾಲ ಸೌಲಭ್ಯ ಕೆ.ಎಂ.ಡಿ.ಸಿ.ಯಿಂದಾಗಲಿ, ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ದೊರೆಯದೆ ಹಲವಾರು ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಹಾಗಾಗಿ ನಮ್ಮ ಏಳಿಗೆಗೆ ಶ್ರಮಿಸುವ, ನಮ್ಮ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಎಲ್ಲಾ ಅಲ್ಪಸಂಖ್ಯಾತ ಬಂಧುಗಳನ್ನು ಮನವೊಲಿಸುವ ಕೆಲಸ ಮಾಡಬೇಕಾಗಿದೆ ಎಂದು ಮುತಬೀರ್ ಅಹಮದ್ ಖಾನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನಕಾರ್ಯದರ್ಶಿ ಇರ್ಷಾದ್ ಅಹಮದ್, ರಾಜ್ಯ ಕಾರ್ಯದರ್ಶಿಗಳಾದ ಸಜ್ಜಾದ್ ಅಹಮದ್,ಸಾಧಿಕ್ ಅಹಮದ್, ಉಪಾಧ್ಯಕ್ಷರಾದ ರಫಿವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.