Publicstory/prajayoga
– ವರದಿ,ದೇವರಾಜ್ ಗುಬ್ಬಿ
ಗುಬ್ಬಿ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪೋಷಿಸಿ ಬೆಳೆಸುವ ಕೆಲಸ ಮಾಡಲು ಶಿಕ್ಷಣ ಇಲಾಖೆ ಆಯೋಜಿಸುವ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಮತ್ತು ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಕರೆ ನೀಡಿದರು.
ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಕಸಬಾ ಹೋಬಳಿ ಅಡಗೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಕುಚಿತ ಮನೋಭಾವ ಬೆಳೆಸಿಕೊಂಡ ಮಕ್ಕಳು ಸೂಕ್ಷ್ಮ ಮತೀಯ ಆಲೋಚನೆ ಮಾಡುತ್ತಾರೆ. ಇಂತಹ ವೇದಿಕೆ ಮೂಲಕ ಮಕ್ಕಳಲ್ಲಿ ವಿಶಾಲ ಹಾಗೂ ಕ್ರೀಡಾ ಮನೋಭಾವ ಬೆಳೆಸುವ ಕೆಲಸ ಆಗಬೇಕಿದೆ ಎಂದರು.
ಮಕ್ಕಳ ವಿಕಸನಕ್ಕೆ ಪಾಠ ಪ್ರವಚನ ಜೊತೆ ಸಾಂಸ್ಕೃತಿಕ ಕಲೆ ಅಗತ್ಯವಿದೆ. ಹಲವು ಪ್ರತಿಭೆಗಳು ಎಲೆ ಮರೆ ಕಾಯಂತೆ ಮರೆಯಾಗುವ ಮುನ್ನ ಮಕ್ಕಳ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ಬೇಕು. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ವೇದಿಕೆ ಉತ್ತಮ. ಕ್ರೀಡೆಗೆ ನಾನಾ ರೀತಿಯ ತರಬೇತಿ ನೀಡುವ ಕೆಲಸ ಮಾಡುವ ಸರ್ಕಾರ ಮಕ್ಕಳಲ್ಲಿ ಅಡಗಿರುವ ಕಲೆಗೆ ನೀರೆರೆಯುವ ಕೆಲಸ ಮಾಡಬೇಕು. ಪ್ರತಿಭಾ ಕಾರಂಜಿ ಮೂಲಕ ಬೆಳಕಿಗೆ ಬರುವ ಮಕ್ಕಳ ಪ್ರತಿಭೆ ಹಾಗೆಯೇ ಮುಂದುವರೆಸಲು ಸಹಕಾರ ನೀಡಲು ಸರ್ಕಾರ ಇಲಾಖೆಗೆ ನಿರ್ದೇಶನ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅಡಗೂರು ಕ್ಲಸ್ಟರ್ ಶಾಲೆಯ ಎಲ್ಲಾ ಮಕ್ಕಳು ತಮ್ಮ ಕಲೆಯ ಪ್ರದರ್ಶನ ಮಾಡಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ, ಮಂಜುನಾಥ್, ಎಸ್ ಡಿಎಂಸಿ ಸದಸ್ಯ ನಿರಂಜನ್, ಮುಖಂಡರಾದ ಆನಂದ್, ಲಕ್ಷ್ಮಣ, ಕೃಷ್ಣಪ್ಪ ಇತರರು ಇದ್ದರು.