Publicstory/Prajayoga
ತುರುವೇಕೆರೆ :ಹೆತ್ತ ತಾಯಂದಿರು ಹಾಗೂ ಶಿಕ್ಷಕರು ದೇಶದ ಭವಿಷ್ಯತ್ತಿನ ಸತ್ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳು ಎಂದು ಕೌಶಾಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಡಿ.ಕಲ್ಕೆರೆ ಗ್ರಾಮದ ಶ್ರೀ ಅಲ್ಲಮಪ್ರಭು ಮಹಾಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯನ್ನುದ್ದೇಶಿಸಿ ಮತನಾಡಿದ ಅವರು, ಭವಿಷ್ಯತ್ತಿನ ಭಾರತದ ಸತ್ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಶಿಕ್ಷಕರು ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕಿದೆ. ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಶಾಲೆಯಲ್ಲಿ ಶಿಕ್ಷಕರಿಂದ ಕಲಿತದ್ದಕ್ಕಿಂತ ತಾಯಿಯಿಂದ ಕಲಿತದ್ದೇ ಹೆಚ್ಚು. ಗುರುಗಳು, ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮೈಗೂಡಸಿಕೊಳ್ಳುವ ಮೂಲಕ ಗುರುವಿನ ಮಾರ್ಗದರ್ಶನದಲ್ಲಿ ಗುರಿ ತಲುಪಬೇಕಿದೆ ಎಂದರು.
ಅಲ್ಲಮಪ್ರಭು ಮಹಾಸಂಸ್ಥಾನ ಮಠದ ತಿಪ್ಪೇರುದ್ರಸ್ವಾಮೀಜಿ ಮಾತನಾಡಿ, ಭಾರತೀಯ ಗುರುಪರಂಪರೆಗೆ ಬಹು ದೊಡ್ಡ ಇತಿಹಾಸವಿದೆ. ಮಕ್ಕಳನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಗುರುಗಳ ಪಾತ್ರ ಮಹತ್ವದ್ದು. ಜೀವನದಲ್ಲಿ ಗುರಿ ತಲುಪಲು ಮಾರ್ಗದರ್ಶನ ಮಾಡಿದ ಗುರುಗಳನ್ನು ಸಹ ಅತ್ಯಂತ ಗೌರವದಿಂದ ಸ್ಮರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ಕೆಂಪೇಗೌಡ, ಸಾವಿತ್ರಮ್ಮ ಹಾಗೂ ಮಿಹಿರಾ ಕುಮಾರ್ ಅವರನ್ನು ಶ್ರೀ ಮಠದ ವತಿಯಿಂದ ಗೌರವಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ನಾಗರತ್ನಮ್ಮ, ಪಂಚಾಕ್ಷರಯ್ಯ, ಎಸ್.ಡಿ.ಎಂ.ಸಿ.ಅಧ್ಯಕ್ಷ ನವೀನ್‌ಕುಮಾರ್, ಕಿಸಾನ್ ಘಟಕದ ಸ್ವರ್ಣಕುಮಾರ್ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.