Publicstory/prajayoga
ತುಮಕೂರು: ಜಿಲ್ಲೆಯಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಒಳ್ಳೆಯ ಸ್ಥಾನಮಾನಗಳು ದೊರೆತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ರಾಜಕೀಯ ಜಾಗೃತಿ ಇಲ್ಲದಿರುವುದು ಎಂದು ಮಾಜಿ ಶಾಸಕ ಹಾಗು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತಿಗಳರ ವಿದ್ಯಾಭಿವೃದ್ಧಿ ಸಂಘ, ತಿಗಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಿಗಳ ಸಮುದಾಯದ ವಿವಿಧ ಸಂಘಟನೆಗಳು ಸೇರಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ರಾಜ್ಯಮಟ್ಟದ ತಿಗಳ ಕ್ಷತ್ರಿಯ ಜನಜಾಗೃತಿ ಸಮಾವೇಶವನ್ನು ಆಗಸ್ಟ್ 26 ರ ಶುಕ್ರವಾರ ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ ಎಂದರು.
ಅರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ತಿಗಳ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯ ಜೊತೆಗೆ, ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಆಗಸ್ಟ್ 26 ರಂದು ಶ್ರೀಮಹಾಲಕ್ಷ್ಮೀ ತಿಗಳ ಮಹಾಸಂಸ್ಥಾನ ಟ್ರಸ್ಟ್(ರಿ)ನ ಪೀಠಾಧ್ಯಕ್ಷ ಜ್ಞಾನಾನಂದಪುರಿ ಸ್ವಾಮೀಜಿಗಳ ಗುರುವಂದನೆ ಹಾಗು ತಿಗಳ ಕ್ಷತ್ರಿಯ ಜಾಗೃತಿ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 30 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿ ತಿಗಳ ಸಮುದಾಯವಿದ್ದರೂ ಕೊರಟಗೆರೆ ಕ್ಷೇತ್ರದಿಂದ ಮುದ್ದರಾಮಯ್ಯ ಮೂರು ಬಾರಿ ಶಾಸಕರಾಗಿದ್ದರು. ನಂತರ ನಾನು ಒಂದು ಬಾರಿ ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಶಾಸಕನಾಗಿದ್ದನ್ನು ಹೊರತು ಪಡಿಸಿದರೆ, ಉಳಿದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗಿಲ್ಲ. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 9 ರಲ್ಲಿ ನಮ್ಮವರೇ ನಿರ್ಣಾಯಕ ಮತದಾರರು. ಹೀಗಿದ್ದರೂ ಹಾಗಾಗಿ ತಿಗಳ ಸಮುದಾಯದಲ್ಲಿ ಜನಜಾಗೃತಿ ಉಂಟು ಮಾಡುವ ಉದ್ದೇಶದಿಂದಲೇ ಸ್ವಾಮೀಜಿಗಳ ಗುರುವಂದನೆಯನ್ನು ನೆಪವಾಗಿಟ್ಟುಕೊಂಡು ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶುಕ್ರವಾರ ನಡೆಯುವ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲು ಒಪ್ಪಿದ್ದಾರೆ. ಇವರೊಂದಿಗೆ ಪಾಂಡಿಚೇರಿ ರಾಜ್ಯದ ಮುಖ್ಯಮಂತ್ರಿ ಎನ್.ರಂಗಸ್ವಾಮಿ, ಪಾಂಡುಚೇರಿ ಸರ್ಕಾರದ ಸಭಾಪತಿ ಆರ್.ಸೆಲ್ವಂ ಪಾಲ್ಗೊಳ್ಳಲಿದ್ದಾರೆ.
ಇವರೊಂದಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮಂತ್ರಿಗಳು, ಶಾಸಕರುಗಳು, ಸಂಸದರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ತಿಗಳ ಜನಾಂಗದ ಮುಖಂಡ ರೇವಣ್ಣ ಸಿದ್ದಯ್ಯ ಮಾತನಾಡಿ, ತಿಗಳರ ಜನಜಾಗೃತಿ ಸಮಾವೇಶ ಪಕ್ಷಾತೀತ ಕಾರ್ಯಕ್ರಮವಾಗಿದೆ. ಹಾಗಾಗಿ ಸಮಾವೇಶಕ್ಕೆ ವಿರೋಧಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗುವುದು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ತಿಗಳ ಸಮುದಾಯದ ಅಭಿವೃದ್ದಿಗಾಗಿ ಸುಮಾರು 25 ಕೋಟಿ ರೂಗಳನ್ನು ನೀಡಿದ್ದರು. ಎಚ್.ಡಿ.ಕುಮಾರಸ್ವಾಮಿ ಸಹ ಸಮುದಾಯದ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಸಮುದಾಯದ ಬೆಳವಣಿಗೆಗೆ ವಿಶೇಷ ಅನುದಾನವಿಲ್ಲ. ಅಲ್ಲದೆ ನಮ್ಮ ಹಲವು ದಿನಗಳ ಬೇಡಿಕೆಯಾದ ತಿಗಳರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಕ್ರಮ ಕೈಗೊಂಡಿಲ್ಲ. ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮುಂದೆ ಈ ಎಲ್ಲಾ ಬೇಡಿಕೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಹಿಂದುಳಿದ ವರ್ಗದ ಮುಖಂಡ ಎಸ್.ಪಿ.ಚಿದಾನಂದ ಮಾತನಾಡಿ, ಅತ್ಯಂತ ಹಿಂದುಳಿದಿರುವ, ಕೃಷಿಯನ್ನೇ ನಂಬಿ ಬದುಕುತ್ತಿರುವ ಸಮುದಾಯ ರಾಜಕೀಯವಾಗಿ ಜಾಗೃತಿ ಹೊಂದಲು ಹೊರಟಿರುವುದು ಸಂತೋಷದ ವಿಷಯ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ8 ರಷ್ಟಿರುವ ಸಮುದಾಯ ಎಲ್ಲಾ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಬೇಕಿದೆ ಎಂದರು.
ಮಹಾಲಕ್ಷ್ಮೀ ಮಹಾಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷ ಹಾಗೂ ತಿಗಳ ಸಮುದಾಯದ ಜಗದ್ಗುರು ಜ್ಞಾನಾನಂದಪುರಿ ಸ್ವಾಮೀಜಿ ಮಾತನಾಡಿ, ಭವಿಷ್ಯದಲ್ಲಿ ಸಮುದಾಯವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸಿನತ್ತ ತೆಗೆದು ಕೊಂಡು ಹೋಗುವ ನಿಟ್ಟಿನಲ್ಲಿ ಗುರುವಂದನೆ ಮತ್ತು ಜನ ಜಾಗೃತಿ ಸಮಾವೇಶ ಬಹಳ ಮಹತ್ವ ಪಡೆದುಕೊಂಡಿದೆ. ಗುರುವಂದನೆ ಎಂಬುದು ನಿಮಿತ್ತ ಮಾತ್ರ. ಜನಾಂಗದ ಅಭಿವೃದ್ಧಿಯೇ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟದ ಗೌರವಾಧ್ಯಕ್ಷನಾಗಿ ಎಲ್ಲಾ ಮಠಾಧೀಶರು ಗುರುವಂದನೆ ಯಂತಹ ಕಾರ್ಯಕ್ರಮದ ಮೂಲಕ ಸಮುದಾಯ ಸಂಘಟನೆಯಲ್ಲಿ ತೊಡಗಬೇಕೆಂಬುದು ನಮ್ಮ ಆಶಯ. ತುಮಕೂರು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಿಗಳರ ಸಂಖ್ಯೆ ಹೆಚ್ಚಿದೆ.ಇವರೆಲ್ಲರನ್ನು ಒಗ್ಗೂಡಿಸಿ, ಅವರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಮೂಲಕ ನಮ್ಮ ಸಮುದಾಯವೂ ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗು ಸಮಬಾಳು ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾಲು ಪಡೆಯಲು ಸಜ್ಜುಗೊಳಿಸುವ ಕೆಲಸ ಇದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷೆ ಕಮಲಮ್ಮ, ಮುಖಂಡರಾದ ಸೂರ್ಯಪ್ರಕಾಶ್, ಮಹಾಲಿಂಗ, ಹುಚ್ಚೇಗೌಡ, ನಾರಾಯಣಪ್ಪ, ಮಂಜಣ್ಣ, ಬಾಬು ಗುಬ್ಬಿ, ಆನಂತರಾಜು ಎನ್.ಡಿ ಮತ್ತಿತರರು ಉಪಸ್ಥಿತರಿದ್ದರು.