Publicstory/prajayoga
ಗುಬ್ಬಿ: ನೆರೆ ಹಾವಳಿಗೆ ತುತ್ತಾದ ತಾಲೂಕಿನ ಅಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರೆ ತೋಟ ಗ್ರಾಮದ 33 ರೈತ ಕುಟುಂಬಸ್ಥರ ಮನೆ ಸಂಪೂರ್ಣ ಜಲಾವೃತಗೊಂಡು ದವಸ ಧಾನ್ಯ ಎಲ್ಲವೂ ಕೊಚ್ಚಿ ಹೋದ ಹಿನ್ನಲೆ ಅಡಗೂರು ಗ್ರಾಪಂ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ದಿನಸಿ ಕಿಟ್ ನೀಡಲಾಯಿತು.
ಗುಬ್ಬಿ ಅಮಾನಿಕೆರೆ ತುಂಬಿ ಹರಿದ ಪರಿಣಾಮ ಕೋಡಿಗೆ ಹೊಂದಿಕೊಂಡ ಈ ತೊರೆ ತೋಟ ಗ್ರಾಮ ಮುಳುಗಡೆಯಾಗಿದೆ. ಕೃಷಿಯನ್ನೇ ಅವಲಂಬಿಸಿದ್ದ 33 ಕುಟುಂಬದ ಸಣ್ಣ ಗ್ರಾಮ ಈಗ ಕೆರೆಯಂತಾಗಿದೆ. ಮನೆಗೆ ನೀರು ನುಗ್ಗಿದ ಹಿನ್ನಲೆ ಅಲ್ಲಿನ ಕುಟುಂಬಗಳು ಯಾವ ವಸ್ತುಗಳನ್ನು ಬಳಸಲಾಗಿಲ್ಲ. ಮನೆಯಲ್ಲಿದ್ದ ದವಸ ಧಾನ್ಯ ಕೂಡಾ ನೀರಿನಲ್ಲಿ ತೇಲಿ ಹೋಗಿದೆ. ಹೀಗೆ ಕಳೆದ ಒಂದು ವಾರದಿಂದ ಪರದಾಡಿದ ಸಂತ್ರಸ್ತ ಕುಟುಂಬಗಳಿಗೆ ತುರ್ತು ಶೆಡ್ ವ್ಯವಸ್ಥೆ ಮಾಡಿಕೊಟ್ಟು ಅತ್ಯಗತ್ಯ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.
ಪಿಡಿಒ ಶಿವಾನಂದ್ ಮಾತನಾಡಿ, ಪ್ರತಿ ಬಾರಿ ಕೆರೆ ಕೋಡಿ ಆದ ಸಮಯದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಈ ಕುಟುಂಬಗಳು ಹೇಗೋ ನಿಬಾಯಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ನಿರಂತರ ಮಳೆ ಹಿನ್ನಲೆ ಕೆರೆ ಕೋಡಿ ನೀರು ಅತ್ಯಧಿಕ ಬಂದು ಇಡೀ ಗ್ರಾಮವೇ ಮುಳುಗಡೆಯಾಗಿದೆ. ಅವರಿಗೆ ಮೂಲ ಸವಲತ್ತು ಒದಗಿಸುವ ಕೆಲಸ ಅಡಗೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಒಗ್ಗೂಡಿ ಫುಡ್ ಕಿಟ್ ವಿತರಣೆ ಮಾಡಲು ಮುಂದಾಗಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಕಂದಾಯ ಇಲಾಖೆ ಕೂಡ ಪರಿಹಾರ ಒದಗಿಸುವ ಕೆಲಸ ಮಾಡಿದೆ ಎಂದರು.
ಈ ವೇಳೆ ಅಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಆರ್.ಭಾಗ್ಯಮ್ಮ, ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಶ್ವೇತಾ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಲರಾಮಣ್ಣ, ತೊರೆ ತೋಟ ಗ್ರಾಮಸ್ಥರಾದ ಪ್ರಕಾಶ್, ಕಾಂತಾಜು ಇನ್ನಿತರರು ಹಾಜರಿದ್ದರು.