Publicstory/prajayoga
ತುಮಕೂರು: ಕುಳುವಾಡಿಕೆ ಜಮೀನಿನ ಹಂಚಿಕೆ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ, ತುಮಕೂರು ತಹಶಿಲ್ದಾರ್, ಸರ್ವೆ ನಂ 91-92 ಹಾಗು 08 ರ ಜಮೀನನಲ್ಲಿ ಕೆಲವೇ ಜನರ ಹೆಸರುಗಳನ್ನು ಪಹಣಿ ಕಲಂನಲ್ಲಿ ನಮೂದು ಮಾಡಿ ಅನ್ಯಾಯ ಮಾಡಿದ್ದಾರೆ. ಕೋಟ್ಯಂತರ ರೂ. ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸಿರುವ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ತಾಲೂಕು ಕಸಬಾ ಹೋಬಳಿ ಸರ್ವೆ ನಂಬರ್ 08 ರ ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸುಮಾರು 4.18 ಗುಂಟೆ ಹಾಗೂ ಸರ್ವೆ ನಂ 91-92ರಲ್ಲಿ 30 ಗುಂಟೆ ಜಮೀನು ಕಳೆದ 50 ವರ್ಷಗಳಿಂದಲೂ ವಿವಾದದಲ್ಲಿದೆ. ಮೂಲತಃ ಈ ಭೂಮಿ ದಲಿತರಾದ ರಾಮ, ಲಕ್ಕ ಮತ್ತು ಪಠಾಣ್ ಎಂಬುವವರಿಗೆ ಮಂಜೂರಾಗಿದ್ದು, ಸುಮಾರು 50 ರಿಂದ 60 ಜನರು ಈ ಕುಟುಂಬದಲ್ಲಿದ್ದಾರೆ. ಆದರೆ ಕೇವಲ ಮೂರು ಜನರ ಹೆಸರಿಗೆ ಪಹಣಿ ಕೂರಿಸಿ ಉಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಹಶಿಲ್ದಾರ್ ವಿರುದ್ಧ ಆಗಸ್ಟ್ 16ರಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದರು.
ಸದರಿ ಆಸ್ತಿಗೆ ಸಂಬಂಧಸಿದಂತೆ ಕುಟುಂಬದವರ ನಡುವೆಯೇ ಆಸ್ತಿಯ ಸಮಾನ ಹಂಚಿಕೆಗಾಗಿ ಸ್ಥಳೀಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇದೆ. ಸದರಿ ವಿಚಾರವನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿ ಕಾರಿಗಳು ಮತ್ತು ತಹಶಿಲ್ದಾರ್ ಗಳಿಗೆ ಲಿಖಿತವಾಗಿ ದೂರು ನೀಡಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆಯಲ್ಲಿಯೂ ಸಹ ಚರ್ಚೆ ನಡೆಸಲಾಗಿದೆ. ಇಷ್ಟಿದ್ದರೂ ತುಮಕೂರು ತಾಲೂಕು ತಹಶೀಲ್ದಾರರು ಏಕಾಏಕಿ ಕುಟುಂಬದ ಸದಸ್ಯರಲ್ಲಿ ಹಲವರನ್ನು ಕೈಬಿಟ್ಟು, ಕೆಲವರ ಹೆಸರನ್ನು ಮಾತ್ರ ಪಹಣಿ ಕಲಂ ನಲ್ಲಿ ಕೂರಿಸಿ, ದಲಿತರ ಜಮೀನಿಗೆ ಸಂಚಕಾರ ತರಲು ಹೊರಟಿದ್ದಾರೆ ಎಂದರು.
ಕಾನೂನು ಉಲ್ಲಂಘನೆ ಮಾಡಿ, ಕೆಲವರನ್ನು ಮಾತ್ರ ಪಹಣಿ ಕಲಂನಲ್ಲಿ ಕೂರಿಸಿರುವ ತಹಶಿಲ್ದಾರ್ ಮೋಹನ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆಗಸ್ಟ್ 16 ರಿಂದ ನಿರಂತರವಾಗಿ ಹೋರಾಟ ನಡೆಸುವುದಲ್ಲದೆ, ಸದರಿ ವಿಚಾರವನ್ನು ಲೋಕಾಯುಕ್ತ, ಕಂದಾಯ ಮಂತ್ರಿಗಳು, ಅಧಿಕಾರಿಗಳ ಗಮನಕ್ಕೆ ತಂದು ಅನ್ಯಾಯದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ತುಮಕೂರು ತಾಲೂಕು ಕಸಬಾ ಸರ್ವೆ ನಂ 08 ಮತ್ತು 91-91ರ ಜಮೀನಿಗೆ ಸಂಬಂಧಿಸಂತೆ ಈ ಹಿಂದೆ ಇದ್ದ ತಹಶಿಲ್ದಾರ್ ಗೋಪಾಲಯ್ಯ ಮತ್ತು ಯೋಗಾನಂದ ಕುಮಾರ್ ಅವರು ಮಾಡಿರುವ ಏಕಪಕ್ಷೀಯ ಆದೇಶವನ್ನು ಪ್ರಶ್ನಿಸಿ, 2020ರಲ್ಲಿಯೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಅದು ವಿಚಾರಣೆಯಲ್ಲಿದೆ. ಕುಳುವಡಿಕೆ ಜಮೀನು ಮಂಜೂರಾದ ರಾಮ, ಲಕ್ಕ ಮತ್ತು ಪಠಾಣ್ ಈ ಎಲ್ಲಾ ಸದಸ್ಯರನ್ನು ಜಮೀನಿನ ವಾರುಸುದಾರರಾಗಿ ಪರಿಗಣಿಸಬೇಕು. ಮೂಲ ವಂಶವೃಕ್ಷದಲ್ಲಿ ಬರುವ ಎಲ್ಲರಿಗೂ ಆಸ್ತಿಯಲ್ಲಿ ಪಾಲು ಬರಬೇಕೆಂಬ ವ್ಯಾಜ್ಯವಿದೆ. ಹಾಗಿದ್ದರೂ ಕೇವಲ ಮೂವರ ಹೆಸರಿಗೆ ಪಹಣಿ ಮಾಡಿ, ಕೋಟ್ಯಾಂತರ ರೂ ಭೂಮಿಯನ್ನು ಒಡೆಯಲು ತಹಶಿಲ್ದಾರ್ ಹುನ್ನಾರ ನಡೆಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎ.ನಾಗೇಶ್, ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.