ಜಡಿ ಮಳೆಯ
ನಂತರದ
ಬಿಸಿಲು ….
ಧೋ ಎಂದು ಸುರಿದ
ಮಳೆ ನೀರಾಗಿ…
ನದಿಯಾಗಿ ಸಮುದ್ರ
ಸೇರುತ್ತದೆ…
ಎಲ್ಲ ಕಷ್ಟಗಳೂ
ಒಂದು ದಿನ
ಹರಿಯುತ್ತವೆ….
ದುಃಖ
ದುಮ್ಮಾನಗಳು
ಸರಿಯುತ್ತವೆ….
ಕೋಪ
ತಾಪ, ಸೆಡವುಗಳು
ತಣ್ಣಗಾಗುತ್ತವೆ…
ಮೌನ
ಮುನಿಸು
ಮಾತಾಗುತ್ತದೆ…
ಮೋಹ , ಪ್ರೇಮ ,
ಪ್ರೀತಿ ..
ಹಣ್ಣಾಗುತ್ತದೆ…
ಎಲ್ಲ
ಹೊಸದೂ
ಹಳೆಯದಾಗುತ್ತದೆ…
ನೆನೆಯುವುದೆಂದರೆ
ಸುಮ್ಮನಲ್ಲ…
ತೋಯುವುದು…
ಮಳೆ ನಂತರದ
ಬಿಸಿಲಲ್ಲಿ
ಎಲ್ಲ ನಿಚ್ಚಳವಾಗುತ್ತದೆ..
ನಾನೇಕೆ
ಅದೇ ಮಳೆಗೆ
ಸಿಕ್ಕಿದೆ ಎಂದು…
ನೆನೆದ ಮೈ,
ತಲೆ
ಒಣಗಿ ..
ಮೊದಲಿಗಿಂತ
ಹಗುರ
ಎಂದು…
ರಜನಿ.
ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರಗಳಿವೆ. ನಾವು ಸಮಸ್ಯೆಯ ಸುಳಿಗೆ ಸಿಲುಕಿದಾಗ ಅಥವಾ ಸಮಸ್ಯೆ ನಮ್ಮತ್ತ ಬಂದಾಗ ನಾವು ಅವುಗಳನ್ನು ಯಾವ ರೀತಿ ಪರಿಗಣಿಸುತ್ತೇವೆ ಎಂಬುದರ ಆಧಾರದಲ್ಲಿ ಸಮಸ್ಯೆಯ ತೀವ್ರತೆ ಇರುತ್ತದೆ. ಕಷ್ಟಗಳು ಎಲ್ಲ ಕಡೆಯೂ ಇರುತ್ತವೆ. ಒಳ್ಳೆಯದನ್ನು ಸಾಧಿಸುವಾಗ ಇರುವ ಸವಾಲುಗಳು ನಮ್ಮನ್ನು ಉತ್ತಮದೆಡೆಗೆ ಸಾಗಿಸುತ್ತದೆ. ಕಷ್ಟಗಳಿಂದಲೇ ಜೀವನ ಹೊರತು; ಜೀವನವೇ ಕಷ್ಟಕರ ಅಲ್ಲ. ಕಷ್ಟಗಳ ನಂತರದ ಸುಖ.
ನೋವಿನ ನಂತರದ ನಲಿವು. ಜ್ವರ ಬಿಟ್ಟ ಶರೀರ.
ಜಗಳದ ನಂತರದ ಸ್ನೇಹ. ಪ್ರಕೃತಿಯ ಕೋಪದ ನಂತರ
ಜೀವನ, ದೇವರು, ನಶ್ವರದ ಅರಿವು ….. ಇವುಗಳನ್ನು
ಮಳೆ ನಂತರದ ಬಿಸಿಲಿಗೆ ಸಮೀಕರಿಸಿದ್ದಾರೆ ರಜನಿ.