ಕಾಯಿಸೀಮೆ ನಾಡಿನಲ್ಲಿ ಮೊಳಗಿದ ಅಂಬೇಡ್ಕರ್ ನಾದ, ಸಾವಿರಾರು ಜನರು ಭಾಗಿ
ತುರುವೇಕೆರೆ:
ಜಾತಿ ಮತಗಳೆಂಬ ಕೋಮುವಾದವನ್ನು ಬುಡಸಮೇತ ಕಿತ್ತು ಎಸೆದು; ಬುದ್ದ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ಕಾರುಣ್ಯ ಸಮತೆಯ ಪಥದತ್ತ ಸಾಗಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಹಾಗು ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರಾದ ರಾಜರತ್ನ ಅಂಬೇಡ್ಕರ್ ದಲಿತರಿಗೆ ಕಿವಿ ಮಾತು ಹೇಳಿದರು.
ತಾಲ್ಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಮತ್ತು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಶುಕ್ರವಾರ ಪಟ್ಟಣದ ಕೆ.ಹಿರಣ್ಣಯ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಭೀಮೋತ್ಸವ ಸೋದರತ್ವ ಸಮಾರೋಪ ಹಾಗು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ನಿಮ್ಮಲ್ಲಿ ಒಂದು ಕಿವಿ ಮಾತು ಹೇಳಲು ಇಚ್ಛಿಸುತ್ತೇನೆ ಕೋಮುವಾದ ಈ ದೇಶದಲ್ಲಿ ಉಳಿದುಕೊಂಡರೆ ಅದೆಷ್ಟು ಅಪಾಯಗಳು ಘಟಿಸುತ್ತವೆ ಎಂಬುದನ್ನು ಒಮ್ಮೆ ಅವಲೋಕಿಸಿ ನೋಡಿ. ನಾವು ಒಂದು ದೊಡ್ಡ ಬಿರುಗಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ನಾವು ವಿಮಾನದಲ್ಲಿ ಹೋಗುವಾಗ ಬಿರುಗಾಳಿಗೆ ಸಿಲುಕು ಹಾಕಿಕೊಂಡಾಗ ವಿಮಾನ ಹೇಗೆ ಅಲ್ಲೋಲ ಕಲ್ಲೋವಾಗುತ್ತದೆಯೋ ಅಂತಹ ಬಿರುಗಾಳಿ ಇಂದು ಇಡೀ ಭಾರತವನ್ನು ಕಪಿಸುತ್ತಿದೆ.
ದೇಶದ ಜನ ಇವತ್ತು ತಮ್ಮ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ರವರ ಸಂವಿಧಾನ ನಮಗೆ ಕೊಟ್ಟ ಸಾಂಸ್ಥಿಕ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಂಡು ಭಾರತದ ಅಃತಸತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂವಿಧಾನ ಪೀಠಿಕೆ ಭಾರತೀಯರೆಲ್ಲಾ ಒಂದು ಎಂದು ಸಾರುತ್ತದೆ. ನಾವೆಲ್ಲ ಸಂವಿಧಾನ ಪೀಠಿಕೆಯ ಮಹತ್ವವನ್ನು ಅರಿತು ನಮಗೆ ತೊಡಕುಂಟು ಮಾಡುತ್ತಿರುವ ವಿಚಿದ್ರಕಾರಿ ಶಕ್ತಿಯನ್ನು ಒಡೆದೊಡಿಸುವ ಕೆಲಸವನ್ನು ಒಕ್ಕೊರಳಿನಿಂದ ಮಾಡಬೇಕಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟ ದಿನವನ್ನು ಇಡೀ ದೇಶವೇ ವಿಜೃಂಭಣೆಯಿಂದ ಸಂಭ್ರಮ ಆಚರಿಸುತ್ತಿದೆ. ಸಾಲದಕ್ಕೆ ಅವರ ಮೂರ್ತಿಯನ್ನು ಸುಪ್ರಿಂಕೋರ್ಟ್ನ ಮುಂದೆ ಸುಪ್ರಿಂಕೋರ್ಟ್ನ ನ್ಯಾಯಾದೀಶರು ಉದ್ಘಾಟನೆ ಮಾಡುವ ಮೂಲಕ ಅಂಬೇಡ್ಕರ್ ಘನತೆಯನ್ನು ವಿಶ್ವವ್ಯಾಪಿಗೊಳಿಸಿದ್ದಾರೆ.
ಅಂಬೇಡ್ಕರ್ ಒಂದು ಮಾತು ಹೇಳಿದರು ನೀವು ಎಲ್ಲ ಜಾತಿ, ಮತಗಳನ್ನು ಪಕ್ಕಕ್ಕಿಟ್ಟು, ಎಡಬಲ ಎನ್ನದೆ ಎಲ್ಲರೂ ಒಂದಾಗ ಬೇಕು ಎಂದು ಹೇಳಿದರಲ್ಲದೇ ಯಾವ ಧರ್ಮದಲ್ಲಿ ಜಾತಿಪದ್ಧತಿ ಇದೆಯೋ ಅದನ್ನು ತ್ಯಜಿಸಿ ಭಗವಾನ್ ಬುದ್ದನ ಬುದ್ಧ ದಮ್ಮ ಸೇರುವ ಮೂಲಕ ಜಾತಿ ರಹಿತ ಸಮಾಜ ನಿರ್ಮಿಸೋಣ ಎಂದು ಸಂದೇಶನ ಸಾರಿದ್ದಾರೆ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಅಂಬೇಡ್ಕರ್ ಹೋರಾಟ ಅವರು ಹಾಕಿಕೊಟ್ಟಂತಹ ಸಂವಿಧಾನದಿಂದ ನಾವು ಮನುಷ್ಯರಾಗಿ ಬಾಳುತ್ತಿದ್ದೇವೆ. ಈ ಭೂಮಿ ಇರುವರೆವಿಗೂ ಸಂವಿಧಾನ ಉಳಿಯಬೇಕಿದೆ. ಕೇವಲ ದಲಿತರಲ್ಲ ಇಡೀ ಮನು ಕುಲವೇ ಸಂವಿಧಾನದ ಪರವಾಗಿ ನಿಲ್ಲಬೇಕಿದೆ. ಭೀಮೋತ್ಸವದ ಹೋರಾಟದ ಕಿಡಿ ಇಡೀ ರಾಜ್ಯಾದ್ಯಂತ ಹಬ್ಬಬೇಕಿದೆ. ನಾವುಗಳು ಅಂಬೇಡ್ಕರ್ ನೋಡಿಲ್ಲ ನಮ್ಮ ಕಾಲದಲ್ಲಿ ಅವರ ಮೊಮ್ಮೊಗನನ್ನು ನೋಡುತ್ತಿದ್ದೇವೆ. ನಿಮ್ಮೆಲ್ಲರ ಆಶಯದಂತೆ ಸಿದ್ದರಾಮಯ್ಯರ ಸರ್ಕಾರ ಬಂದಿದೆ. ದಲಿತರಿಗೆ ಬಹಳ ಅನ್ಯಾಯವಾಗಿದೆ. ದಲಿತರು ಕೊಡುವ ಕೈಗಳಾಗಬೇಕು ಬೇಡುವ ಕೈಗಳಾಗಬಾರದು. ಅಂಬೇಡ್ಕರ್ ಆಶಯದಂತೆ ಜಾತಿ ಗಣತಿ ವರದಿಯನ್ನು ಸರ್ಕಾರ ಸುದೀರ್ಘ ಚರ್ಚೆ ಮಾಡಿ ಜಾರಿಗೊಳಿಸಲು ಬದ್ದವಾಗಿದ್ದೇವೆ ಎಂದರು.
ಇದಕ್ಕೂ ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್, ಸಚಿವ ಸತೀಶ್ ಜಾರಕಿಹೊಳಿ, ಸಮುದಾಯದ ಸ್ವಾಮೀಜಿಗಳು ಹಾಗು ಗಣ್ಯರನ್ನು ತೆರೆದ ವಾಹನದಲ್ಲಿ ಪಟ್ಟಣದ ಮಾಯಸಂದ್ರ ರಸ್ತೆಯಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಹಾಗು ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ರಾಜ್ಯದ ಹೆಸರಾಂತ ಕ್ರಾಂತಿ ಗೀತೆ ಹಾಗು ಭೂಮಿಗಳ ತಂಡದಿಂದ ಕ್ರಾಂತಿಗೀತೆ ಮೊಳಗಿತು.
ಸಮಾರಂಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಲೋಕಸಭಾ ಸಂಭಾವನೀಯ ಅಭ್ಯರ್ಥಿ ನಿಕೇತ್ ರಾಜ್ ಮೌರ್ಯ, ತುಮಕೂರು ಕಾಂಗ್ರೆಸ್ ಯುವ ಮುಖಂಡ ಕೊಟ್ಟಾ ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ತಾಲ್ಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಮೂರ್ತಿ, ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಷಡಕ್ಷರ ಮುನಿ ಸ್ವಾಮೀಜಿ, ಪ್ರತಿಪರ ಚಿಂತಕ ಕೆ.ದೊರೆರಾಜು, ಚಿಂತಕ ಮಂಜುನಾಥ್ ಅದ್ದೆ, ದಸಂಸ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ, ಕುಂದೂರ್ ಮುರುಳಿ, ಮುಖಂಡರಾದ ವಿ.ಟಿ.ವೆಂಕಟರಾಮು, ದಂಡಿನಶಿವರ ಕುಮಾರ್, ಚಂದ್ರಯ್ಯ, ಬಾಣಸಂದ್ರ ಕೃಷ್ಣ ಮಾದಿಗ, ಚಿದಾನಂದ್ ಸಮುದಾಯದ ಜನರು ಭಾಗವಹಿಸಿದ್ದರು.