PublicStory:
ಮಡಿಕೇರಿ: ಕೊಡಗಿನ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ಸಮೀಪದ ಕುಕ್ಲೂರಿನ ನಿವಾಸದ ಮೇಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಐ.ಟಿ.ದಾಳಿ ಯಿಂದಾಗಿ ತೆಲುಗು, ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಮೂರು ಭಾಷೆಯ ಸಿನಿಮಾಗಳಲ್ಲಿ ರಶ್ಮಿಕಾ ಬಹುಬೇಡಿಕೆ ನಟಿಯಾಗಿದ್ದಾರೆ.
ಕಳೆದ ವರ್ಷದ ಜನವರಿಯಲ್ಲಿ ಸ್ಯಾಂಡಲ್ವುಡ್ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿದ್ದ ಐ.ಟಿ ಅಧಿಕಾರಿಗಳು, ಈಗ ನಟಿ ರಶ್ಮಿಕಾ ಅವರ ಕಕ್ಲೂರಿನ ಎರಡು ಅಂತಸ್ತಿನ ನಿವಾಸ, ಅವರ ತಂದೆಗೆ ಸೇರಿದ್ದ ಸೆರೆನಿಟಿ ಹಾಲ್, ಬೃಹತ್ ವಾಣಿಜ್ಯ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದಾರೆ.
ರಷ್ಮಿಕಾ ಹುಟ್ಟೂರು ಮೈತಾಡಿ ಗ್ರಾಮದಲ್ಲಿ ಕಾಫಿ ತೋಟ, ಬಿಟ್ಟಂಗಾಲದಲ್ಲಿ ಹೊಸದಾಗಿ ಖರೀದಿಸಿದ್ದ 5 ಎಕರೆ ಜಾಗವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಐಷಾರಾಮಿ ಕಾರು ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅವುಗಳ ವಿವರವನ್ನು ಐ.ಟಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ವಿಜಯನಗರದಲ್ಲಿದ್ದ ಮನೆಯನ್ನು ವರ್ಷದ ಹಿಂದೆ ಮಾರಾಟ ಮಾಡಿದ್ದರು.
ಅಭಿಮಾನಿಗಳ ಹೆಸರಲ್ಲಿ ಪ್ರವೇಶ: ಬೆಳಿಗ್ಗೆ ರಶ್ಮಿಕಾ ಅಭಿಮಾನಿಗಳೆಂದು ಹೇಳಿಕೊಂಡ ಪ್ರವಾಸಿ ಟ್ಯಾಕ್ಸಿಯಲ್ಲಿ ಬಂದಿದ್ದ ಅಧಿಕಾರಿಗಳು, ಮನೆಯ ಒಳಹೊಕ್ಕಿ ಇಡೀ ದಿನ ದಾಖಲೆ ಪರಿಶೀಲಿಸಿದರು. ಬುಧವಾರವಷ್ಟೇ ಕನ್ನಡ ಸಿನಿಮಾವೊಂದರ ಡಬ್ಬಿಂಗ್ ಕೆಲಸ ಮುಗಿಸಿ ಹೈದರಾಬಾದ್ಗೆ ತೆರಳಿದ್ದ ರಶ್ಮಿಕಾ ತಮ್ಮ ಮನೆಯಲ್ಲಿ ಇರಲಿಲ್ಲ. ಅವರ ತಾಯಿ ಬೆಂಗಳೂರಿನಲ್ಲಿದ್ದಾರೆ. ಮನೆಯಲ್ಲಿದ್ದ ತಂದೆ ಮದನ್ ಮಂದಣ್ಣ ಅವರಿಂದ ವಿವಿಧ ಹೂಡಿಕೆ ಹಾಗೂ ಮಗಳ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟು 9 ಅಧಿಕಾರಿಗಳು ಮೂರು ಪ್ರತ್ಯೇಕ ತಂಡಗಳಾಗಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಒಂದು ತಂಡವು ಪಂಜರ್ಪೇಟೆಯ ಮಂದಣ್ಣಗೆ ಸೇರಿದ ಸೆರೆನಿಟಿ ಹಾಲ್ಗೆ ಹೋಗಿ ಅಲ್ಲಿನ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿತು. ವ್ಯವಸ್ಥಾಪಕ ವಿಕ್ಕಿ ಚಂಗಪ್ಪ ಅವರನ್ನು 9 ನಿಮಿಷಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ನಿವಾಸಕ್ಕೆ ಕರೆತಂದು ಮತ್ತಷ್ಟು ಮಾಹಿತಿ ಪಡೆಯಲಾಯಿತು. ಮನೆಯಲ್ಲಿದ್ದ ಅಡುಗೆ ಸಿಬ್ಬಂದಿಯ ಮೊಬೈಲ್ ಸ್ವಿಚ್ ಆಫ್ ಮಾಡಿಸಲಾಗಿತ್ತು. ಸಂಜೆಯ ವೇಳೆಗೆ ಮದನ್ ಮಂದಣ್ಣ ಅವರನ್ನು ಐ.ಟಿ ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ದು ಅವರ ಸಮ್ಮುಖದಲ್ಲಿ ಅವರ ಆಸ್ತಿಯ ಮಾಹಿತಿ ಪಡೆಯಲಾಯಿತು.
ತೆರಿಗೆ ವಂಚನೆ ಆರೋಪ: ರಶ್ಮಿಕಾ ಅವರು ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪ್ರಮಾಣದ ಸಂಭಾವನೆಯನ್ನು ನಗದು ರೂಪದಲ್ಲಿ ಪಡೆದುಕೊಂಡು ತೆರಿಗೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ದೊಡ್ಡಮೊತ್ತ ನೀಡಿ ಖರೀದಿಸಿದ್ದ 5 ಎಕರೆ ಜಾಗದಲ್ಲಿ ವಸತಿ ಶಾಲೆ ಹಾಗೂ ಪೆಟ್ರೋಲ್ ಬಂಕ್ ತೆರೆಯಲು ರಶ್ಮಿಕಾ ಸಿದ್ಧತೆ ನಡೆಸಿದ್ದರು. ಆ ಜಾಗವನ್ನು ಸಮತಟ್ಟು ಮಾಡಲಾಗಿದೆ.
ನೋಟಿಸ್ ಜಾರಿ: ರಶ್ಮಿಕಾ ಮನೆಯಲ್ಲಿ ಇರದ ಕಾರಣ ತಕ್ಷಣವೇ ಐ.ಟಿ ಎದುರು ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಅವರು ಶುಕ್ರವಾರ ಐ.ಟಿ ಅಧಿಕಾರಿಗಳ ಎದುರು ಹಾಜರಾಗುವ ಸಾಧ್ಯತೆಯಿದೆ.
ಯಾವ್ಯಾವ ಸಿನಿಮಾಗಳು?: ರಶ್ಮಿಕಾ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ನಂತರ, ಕನ್ನಡದಲ್ಲಿ ‘ಯಜಮಾನ’, ‘ಅಂಜನಿಪುತ್ರ’, ‘ಚಮಕ್’ನಲ್ಲಿ ನಟಿಸಿದ್ದಾರೆ. ‘ಪೊಗರು’ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗಿನ ‘ಗೀತಾ ಗೋವಿಂದಂ’ ಹೆಸರು ತಂದುಕೊಟ್ಟಿದ್ದ ಚಿತ್ರ. ತೆಲುಗು ಹಾಗೂ ತಮಿಳಿನ ಸ್ಟಾರ್ ನಟರೊಂದಿಗೆ ನಟಿಸಿರುವ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.
ಐ.ಟಿ ಅಧಿಕಾರಿಗಳ ದಾಳಿ ವೇಳೆ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಿದ್ದರು. ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಧ್ಯಾಹ್ನ ಮನೆಗೆ ಹೋಟೆಲ್ನಿಂದ ಊಟ ತರಿಸಿಕೊಂಡು ಅಲ್ಲೇ ಸೇವಿಸಿದರು.