ತುರುವೇಕೆರೆ: ಸುಮಾರು 600 ವರ್ಷಗಳ ಇತಿಹಾಸವಿರುವ ಸಂಪಿಗೆ ಗ್ರಾಮದ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಡಿ.23 ರಂದು ವೈಕುಂಠ ಏಕಾದಶಿ ಮಹೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದೇವಾಲಯದ ಧರ್ಮದರ್ಶಿ ಸಂಪಿಗೆ ಶ್ರೀಧರ್ ತಿಳಿಸಿದ್ದಾರೆ.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀನಿವಾಸ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ದೇವಾಲಯದ ಆಚರಣಾ ಸಮಿತಿಯು ವೈಕುಂಠ ಏಕಾದಶಿ ಮಹೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆಗೆ ಬಿಡುಗಡೆಗೊಳಿಸಿ ಮಾತನಾಡಿದರು.
ಸಂಪಿಗೆ ಹಾಗು ಅದರ ಆಸುಪಾಸಿನ ಗ್ರಾಮಸ್ಥರುಗಳು ಕಳೆದ ಇಪ್ಪತ್ತು ದಿನಗಳಿಂದ ಸ್ವಾಮಿಯವರ ವೈಕುಂಠ ಏಕಾದಶಿ ಮಹೋತ್ಸವಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಈ ಮಹೋತ್ಸವಕ್ಕೆ ತುಮಕೂರು ಜಿಲ್ಲೆ ಅಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸಲಿದ್ದಾರೆ.
ಅಂದು ಬೆಳಗ್ಗೆ ನಾಲ್ಕು ಗಂಟೆಗೆ ಸ್ವಾಮಿಗೆ ಅಭಿಷೇಕದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ವೈಕುಂಠ ದ್ವಾರ ಪ್ರವೇಶ, ಸಪ್ತ ದ್ವಾರಗಳ ದಿವ್ಯ ದರ್ಶನವಿರಲಿದೆ. ಅದೇ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ.
ಅಬ್ಬರವಿಲ್ಲದ ಭಕ್ತರ ಕಣ್ಮನ ತಣಿಸುವ ಸಿಡಿಮದ್ದಿನ ಪ್ರದರ್ಶನವಿದೆ. ಬಹಳ ಮುಖ್ಯವಾಗಿ ಶನಿವಾರ ಮುಂಜಾನೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಭಕ್ತಾಧಿಗಳಿಗೆ ನಿರಂತರ ದರ್ಶನ ಹಾಗು ಪ್ರಸಾದ ವಿನಿಯೋಗವಿರುತ್ತದೆ ಎಂದರು.
ದೇವಾಲಯ ಒಳಗೊಂಡಂತೆ ಇಡೀ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಹಾಗು ಕೇಸರಿ ಬಂಟಿಂಗ್ಸ್ ಗಳಿಂದ ಅಲಂಕಾರಗೊಳಿಸಲಾಗಿರುತ್ತದೆ. ಮುಖ್ಯ ರಸ್ತೆಯ ಇಕ್ಕೆಲೆಗಳು ಹಾಗು ದೇವಾಲಯದ ದ್ವಾರದವರೆಗೆ ಬಾಳೆ ಕಂದು ಹಾಗು ತಳಿರು ತೋರಣಗಳಿಂದ ಸಿಂಗರಿಸಲಾಗುವುದು.
ದೊಡ್ಡಗುಣಿ, ಸಂಪಿಗೆ ನಿಟ್ಟೂರು, ಕಲ್ಲೂರು ಮತ್ತು ಕಲ್ಲೂರ್ ಕ್ರ್ರಾಸ್ಗಳಿಂದ ಭಕ್ತಾಧಿಗಳು ಬರುವ ವಾಹನಗಳಿಗೆ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳಿಗೆ ದೇವರ ದರ್ಶನ ಮಾಡಲು ಸರತಿ ಸಾಲಿನ ಬ್ಯಾರಿಕೇಟ್ಗಳ ಹಾಕಲಾಗುತ್ತಿದೆ.
ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ, ಹಾಲಿನ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಭಜನಾ ಮಂಡಳಿಗಳು ಆ ದಿವಸ ಭಜನಾ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ.
ಗುಬ್ಬಿ ತಾಲ್ಲೂಕಿನ ಸೋಮಲಾಪುರ ಮತ್ತು ಕಲ್ಲೂರ್ ಗ್ರಾಮದಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಪ್ರತಿ ವರ್ಷದಂತೆ ಈ ಬಾರಿಯೂ ದೇವರ ಸನ್ನಿದಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ರಾಜ್ಯದ ಹೆಸರಾಂತ ಜನಪದ ಗಾಯಕರಾದ ಡಾ.ಅಪ್ಪಗೆರೆ ತಿಮ್ಮರಾಜು ಅವರ ತಂಡಿದಿಂದ ಜನಫದ ಝೇಂಕಾರ್ ಕಾರ್ಯಕ್ರಮ ಭಕ್ತರ ಗಮನ ಸೆಳೆಯಲಿದೆ.
ಈ ಬಾರಿ ವಿಶೇಷವಾಗಿ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಪಂಚಾಯಿತಿಗಳಲ್ಲಿ ಪೌರ ಕಾಮರ್ಿಕರಾಗಿ ದುಡಿಯುತ್ತಿರುವ ತುರುವೇಕೆರೆ ಹಾಗು ಗುಬ್ಬಿ ತಾಲ್ಲೂಕಿನಿಂದಲೂ ಪೌರ ಕಾರ್ಮಿಕರನ್ನು ಸನ್ಮಾನ ಮಾಡಲಾಗುವುದು.
ಇದೇ ವೇಳೆ ಗುಬ್ಬಿ ತಾಲ್ಲೂಕಿನ ಕಂಚಿರಾಯ ಮತ್ತು ಕೆಂಪಮ್ಮ ದೇವಿ ಉತ್ಸವ ಕೂಡ ನಡೆಯಲಿದೆ. ಅಂದು 30 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ದೇವರ ದರ್ಶನಕ್ಕೆ ಆಗಮಿಸಲಿದ್ದು ಬಂದವರಿಗೆಲ್ಲಾ ಲಾಡು ವಿತರಿಸುವ ಕಾರ್ಯವೂ ಮಾಡಲಾಗಿದೆ.
ಒಟ್ಟಾರೆ ಕಾರ್ಯಕ್ರಮ ಯಾವುದೇ ವ್ಯತ್ಯಾಸವಾಗದಂತೆ ಮಾಡಲು 100 ಪೊಲೀಸ್, 20 ಕ್ಕೂ ಹೆಚ್ಚು ಮಹಿಳಾ ಪೊಲೀಸ್, ತುರ್ತು ಸೇವೆಗಾಗಿ ವೈದ್ಯಕೀಯ ತಂಡದ ಜೊತೆಗೆ ಒಂದು ಆಂಬ್ಯೂಲೆನ್ಸ್ ಕೆಲಸ ನಿರ್ವಹಿಸಲಿದೆ.
ತುಮಕೂರು ಮಾರ್ಗದಿಂದ ಗುಬ್ಬಿ ಸಂಪಿಗೆ ಹಾಗು ತುರುವೇಕೆರೆ ಕೊಂಡಜ್ಜಿ ಮಾರ್ಗದಿಂದ ಸಂಪಿಗೆಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ತುಮಕೂರು ಡಿಫೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸ್ವಾಮಿಯ ದರ್ಶನಕ್ಕೆ ಆಗಮಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಭಗವಾನ್, ಆಚರಣಾ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಬಾಬು, ಎಸ್.ಎನ್.ಯೋಗೀಶ್, ಚಿದಾನಂದ್, ಕುಮಾರ್, ಜಯಣ್ಣ, ವಿಜಯಕುಮಾರ್, ನಂದೀಶ್, ಉಮಾಶಂಕರ್, ನಂಜುಂಡಯ್ಯ, ಶ್ರೀನಿವಾಸ್, ಅಜೇಯ್, ಪ್ರದೀಪ್, ಪ್ರಕಾಶ್ ರಾವ್, ಯೋಗೀಶ್, ಆನಂದಯ್ಯ ಉಪಸ್ಥಿತರಿದ್ದರು.