ತುಮಕೂರು: ನೀವು ಮಾಡುವ ಸಾಧನೆ ಸಮಾಜದ ಸಾಧನೆಯಂತಾಗಬೇಕು ಎಂದು ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿ, ನಾಡೋಜ ಡಾ. ವೂಡೇ ಪಿ.ಕೃಷ್ಣ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ಗಂಗಸಂದ್ರದಲ್ಲಿರುವ ಶೇಷಾದ್ರಿ ಪುರಂ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಯುವ ದಿವಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾತೃದೇವೊಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವ, ಎಂಬುದು ನಮ್ಮ ಸಂಸೃತಿ, ಆದರೆ ಸ್ವಾಮಿ ವಿವೇಕಾನಂದರು ದರಿದ್ರ ದೇವೋಭವ, ಮೂರ್ಖದೇವೋಭವ, ಪಾಪಿ ದೇವೋಭವ ಎನ್ನುತ್ತಿದ್ದರು. ಬಡವರು, ಅಜ್ಞಾನಿಗಳಲ್ಲೂ ದೇವರನ್ನು ಕಾಣಬೇಕು ಎನ್ನುತ್ತಿದ್ದರು. ವಿದ್ಯಾರ್ಥಿಗಳು ವಿವೇಕ ವಾಣಿಯಂತೆ ಬದುಕಬೇಕು ಎಂದು ಕರೆ ನೀಡಿದರು.
“ಶಿಕ್ಷಣ ಎನ್ನುವುದು ಜೀವನದ ನಿರಂತರ ಕಲಿಕೆ” ಕ್ಷಣ ಕ್ಷಣ ಕಲಿಯುವುದೇ ಶಿಕ್ಷಣ. ನಾವೂ ಯಾವತ್ತಿಗೂ ಕೂಡ ವಿದ್ಯಾರ್ಥಿಗಳಾಗಿ ಬದುಕಬೇಕು. ಇಂದಿಗೆ ಮನುಷ್ಯ ನಿರ್ಮಾಣದ ಶಿಕ್ಷಣಬೇಕು, ರಾಷ್ಟ್ರ ನಿರ್ಮಾಣದ ಶಿಕ್ಷಣಬೇಕು. ಮನುಷ್ಯನನ್ನು ನಿರ್ಮಾಣ ಮಾಡಬೇಕಾಗಿದೆ. ನಿಜವಾದ ಮಾನವ ಸಂಪನ್ಮೂಲದ ಅಭಿವೃದ್ಧಿಯೇ ರಾಷ್ಟ್ರದ ಸಂಪತ್ತಾಗಿದೆ ಎಂದು ಕೃಷ್ಣ ಅಭಿಪ್ರಾಯಪಟ್ಟರು”
ನಮ್ಮ ಮಾತು ಮುತ್ತಿನಂತೆ, ಮಂತ್ರದಂತೆ ಇರಬೇಕು, ಮಾತು ಮಂತ್ರದ ಶಕ್ತಿ ಎಂದಿದ್ದಾರೆ” ನಮ್ಮ ಪರಿಸರದಲ್ಲಿ ಸಿಗುವ ಸಂಸ್ಕೃತಿಯನ್ನು, ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಬೆಂಗಳೂರಿನ ಸದಾಶಿವನಗರ ಯೂಥ್ ಅಸೋಸಿಯೇಷನ್ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ ಎಸ್ ವೀರಭದ್ರಯ್ಯ ಮಾತನಾಡಿ, ಮಕ್ಕಳನ್ನು ಮಕ್ಕಳ ಏಳಿಗೆಗಾಗಿ ಶ್ರಮಿಸುವವರು ತಂದೆ ತಾಯಿಗಳು ಮಾತ್ರ ಎಂದರು.
ಬೆಂಗಳೂರಿನ ಆಟೋ ಚಾಲಕ ಮಗನ ಓದಿಗಾಗಿ ಭಾನುವಾರವೂ ಕೆಲಸ ಮಾಡುತ್ತಿದ್ದ ಆ ತಂದೆಯ ತ್ಯಾಗ, ಪರಿಶ್ರಮದಿಂದ ಆತನ ಮಗ ವೈದ್ಯಕೀಯ ವಿದ್ಯಾರ್ಥಿಯಾದ ಘಟನೆಯನ್ನು ಉದಾಹರಿಸುತ್ತಾ ತಂದೆ ತಾಯಿಯರ ಪರಿಶ್ರಮ ಮತ್ತು ಆಸೆಯನ್ನು ಪ್ರತಿ ಮಕ್ಕಳು ತಿಳಿದುಕೊಳ್ಳ ಬೇಕು ಎಂದು ಹೇಳಿದರು.
“ಯಾರಾದರೂ ಕೋತಿ ಎಂದರೆ ನಾವು ತಿರುಗಿ ಮಂಗ ಎನ್ನಬಹುದಲ್ಲವೇ ಅದರ ಬದಲಾಗಿ ದೇವರಲ್ಲಿ ಅವರಿಗೆ ಒಳ್ಳೆಯ ಬುದ್ದಿಕೊಡಿ ಎಂದು ಕೇಳಿಕೊಳ್ಳುವುದೇ ಉತ್ತಮ” ಎಂದರು.
ಸ್ವಾಮಿ ವಿವೇಕಾನಂದರ “ ಹೇಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ”, “ ನನ್ನ ಏಳಿಗೆಗೆ ನಾನೇ ಶಿಲ್ಪಿ “ ಎಂದು ಮಕ್ಕಳ ಮೂಲಕ ಹೇಳಿಸಿದರು.
ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಜಿ ಟಿ ಮಾತನಾಡಿ, ಸಾರ್ಥಕತೆ ಎಂಬುದು ಪ್ರತಿಯೊಬ್ಬರ ಜೀವನಕ್ಕೂ ಭಿನ್ನವಾಗಿರುತ್ತದೆ. ವಿದ್ಯಾರ್ಥಿಗಳು ತಂದೆ ತಾಯಿಗಳ ಗುರಿ ಉದ್ದೇಶವನ್ನು ಅರ್ಥಮಾಡಿಕೊಂಡು ಸಾರ್ಥಕತೆಕಡೆ ಸಾಗಬೇಕು, ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಭಾನುಪ್ರಕಾಶ್ ಎಸ್ ಡಿ ಹಾಗೂ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವರಾಜು ಬಿ.ವಿ ವೇದಿಕೆಯಲ್ಲಿದ್ದರು.