Publicstory.in
ತುಮಕೂರು: ಜಿಲ್ಲೆಯಲ್ಲಿ ಜೂನ್ 25 ರಿಂದ ಜುಲೈ 2ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗದಂತೆ ಎಚ್ಚರವಹಿಸಬೇಕು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲೆ ಯಶಸ್ವಿಯಾಗಿರುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಮಪರ್ಕವಾಗಿ, ವ್ಯವಸ್ಥಿತವಾಗಿ ಮಾಡಬೇಕು. ಮಕ್ಕಳು ಭಯಪಡದೇ ಪರೀಕ್ಷೆ ಬರೆಯುವಂತಾಗಬೇಕು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮನೆಯಿಂದಲೇ ಬಿಸಿ ನೀರನ್ನು/ಬಿಸಿ ಆರಿದ ನೀರು ತರುವಂತೆ ತಿಳಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರವಹಿಸಬೇಕು ಎಂದರು.
ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಒಂದು ದಿನದ ಮೊದಲೇ ಕೊಠಡಿಗಳ ವಿವರಗಳನ್ನು ಮೊಬೈಲ್‌ಗೆ ಸಂದೇಶ ಕಳುಹಿಸಲಾಗುವುದು. ಪರೀಕ್ಷಾ ಕೇಂದ್ರದಲ್ಲಿ ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮಾರ್ಗದರ್ಶನ ನೀಡಲಾಗುವುದು.
ಮಾರ್ಗದರ್ಶಕ ಫಲಕಗಳನ್ನು ಅಳವಡಿಸಲಾಗುವುದು. ಮಕ್ಕಳಿಗೆ ಭೀತಿ ಸೃಷ್ಟಿ ಮಾಡಬೇಡಿ, ಭಯದ ವಾತಾವರಣ ದೂರ ಮಾಡಿ, ಸಮಾಧಾನವಾಗಿ ಪರೀಕ್ಷೆ ಬರೆಯುವಂತಾಗಬೇಕು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಿಂದ ದೂರವಿರುವ ಮಕ್ಕಳ ಮಾಹಿತಿ ಪಡೆದು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ಮಕ್ಕಳು ಬಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪ್ರಯಾಣಕ್ಕೆ ತೊಂದರೆಯಾಗಿ ಗೈರು ಹಾಜರಾಗುವ ಮಕ್ಕಳನ್ನು ಸರ್ಕಾರಿ ಇಲಾಖೆ ವಾಹನಗಳ ಮೂಲಕ ಕರೆತರಬೇಕು.
ತಡವಾಗಿ ಬಂದರೂ ಸಹ ಮಕ್ಕಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಶಿಕ್ಷಕರನ್ನು ನೇಮಿಸಬೇಕು ಎಂದರಲ್ಲದೇ ಮೊದಲ ದಿನದಿಂದ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕೂರುವ ಜಾಗವನ್ನು ಬದಲಾಯಿಸಬಾರದೆಂದು ಅವರು ಡಿಡಿಪಿಐಗಳಿಗೆ ಸೂಚಿಸಿದರು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಗಳಿರಬೇಕು. ಪ್ರಥಮ ಚಿಕಿತ್ಸೆ ಪ್ಯಾರಾಸಿಟಮಾಲ್ ಮಾತ್ರೆ ಸೇರಿದಂತೆ ಆರೋಗ್ಯ ಪರಿಕರಗಳನ್ನು ಕೇಂದ್ರಗಳಲ್ಲಿ ಒದಗಿಸಬೇಕು.
ನೇಮಿಸಿರುವ ಆರೋಗ್ಯ ಸಿಬ್ಬಂದಿಗಳ ವಿವರಗಳನ್ನು ಆಯಾ ತಾಲೂಕು ಬಿಇಒಗಳಿಗೆ ನೀಡಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಡಿಹೆಚ್‌ಒ ಅವರಿಗೆ ಸೂಚಿಸಿದರು.