ತುರುವೇಕೆರೆ: 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ಶುಕ್ರವಾರ ಸುಗಮವಾಗಿ ನಡೆಯಿತು.
ಪಟ್ಟಣದಲ್ಲಿ ಜಿಜೆಸಿ, ಸರಸ್ವತಿ ಭಾಲಿಕಾ, ಜೆಪಿ ಆಂಗ್ಲಮಾಧ್ಯಮ, ಎಸ್.ಬಿ.ಜಿ ವಿದ್ಯಾಲಯ ಟಿ.ಬಿ.ಕ್ರಾಸ್, ನೆಹರೂ ಬಾಲಿಕಾ ಪ್ರೌಢ ಶಾಲೆ ಮಾಯಸಂದ್ರ, ಸರ್ಕಾರಿ ಪ್ರೌಢ ಶಾಲೆ ದಬ್ಬೇಘಟ್ಟ, ದಂಡಿನಶಿವರ ಕೆಪಿಎಸ್ ಶಾಲೆ ಮತ್ತು ಹುಲ್ಲೇಕೆರೆಯ ಬಸವೇಶ್ವರ ಪ್ರೌಢಶಾಲಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು.
ತಾಲ್ಲೂಕಿನ 17 ಸರ್ಕಾರಿ ಪ್ರೌಢಶಾಲೆ, ವಸತಿ ಶಾಲೆ 6, ಅನುದಾನಿತ 26, ಅನುದಾನರಹಿತ 9 ಒಟ್ಟು 57 ಶಾಲೆಗಳ 1907 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಮ್ಮ ಹೆಸರುಗಳನ್ನು ಪ್ರಸಕ್ತ ಸಾಲಿನಲ್ಲಿ ನೋಂದಾಯಿಸಿಕೊಂಡಿದ್ದರು. ಆ ಪೈಕಿ 25 ಮಕ್ಕಳು ಮಾತ್ರ ಗೈರಾಗಿದ್ದರು. ಒಟ್ಟು 1882 ಮಕ್ಕಳು ಮಾತ್ರ ಶುಕ್ರವಾರ ಪರೀಕ್ಷೆ ಬರೆದರು.
ಅಮ್ಮಸಂದ್ರದ ಮೈಸೆಂಕೋ ಆಂಗ್ಲ ಪ್ರೌಢ ಶಾಲೆಯ ಮಕ್ಕಳು ಪ್ರಥಮ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ಬರೆದರೆ; ಇನ್ನುಳಿದ ಎಲ್ಲಾ ಮಕ್ಕಳೂ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಬರೆದರು.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ಕೊಡುವ ಮತ್ತು ಉತ್ತರ ಪತ್ರಿಕೆಗಳನ್ನು ತರಲು 3 ಮಾರ್ಗಾಧಿಕಾರಿಗಳು ತಂಡ ರಚಿಸಲಾಗಿತ್ತು. 8 ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಮೊಬೈಲ್ ಸ್ವಾದೀನಾಧಿಕಾರಿಗಳು, ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕಾ ಪಾಲಕರು, ಹಾಗು 130 ಕೊಠಡಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದರು.
ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಡಯಟ್ನ ಮಮತಾಮಣಿ, ನಟರಾಜ್, ಬಿ.ಇ.ಒ ಎಸ್.ಕೆ.ಪದ್ಮನಾಭ ಹಾಗು ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಕೆ.ಸಿದ್ದಪ್ಪ ಭೇಟಿ ನೀಡಿದ್ದರು.
‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಸಂತೋಷದಿಂದ ಪರೀಕ್ಷೆ ಬರೆದರು. ಯಾವುದೇ ಅವ್ಯವಹಾರಗಳಿಗೆ ಆಸ್ಪದ ಕೊಡದೆ ಶಾಂತಿಯುತವಾಗಿ ನಡೆಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ತಿಳಿಸಿದರು’.