ಗುಬ್ಬಿ: ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳ ನಡುವೆ ಘರ್ಷಣೆ ಇಬ್ಬರಿಗೆ ಗಾಯ.
ಚೇಳೂರು ಹೋಬಳಿ, ಗಂಗಯ್ಯನಪಾಳ್ಯದಲ್ಲಿ ಅರಣ್ಯಪ್ರದೇಶ ಒತ್ತುವರಿ ವಿಚಾರದಲ್ಲಿ ಕಳೆದ 15 ದಿನಗಳಿಂದಲೂ ರೈತರು ಮತ್ತು ಅರಣ್ಯ ಇಲಾಖೆಯ ಮಧ್ಯೆ ಘರ್ಷಣೆ ಮುಂದುವರೆದಿದ್ದು,
ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಕಂದಕ ತೆಗೆಯುವ ಸಂದರ್ಭದಲ್ಲಿ ರೈತ ಮುಖಂಡ ದೊಡ್ಡನಂಜಯ್ಯನವರ ನೇತೃತ್ವದಲ್ಲಿ ಕೆಲಸಕ್ಕೆ ಅಡ್ಡಿಪಡಿಸಿದರು.
ಅರಣ್ಯ ಇಲಾಖೆಯವರು ಆತನನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿರುವ ವರದಿಯಾಗಿದೆ.
ಈ ಘರ್ಷಣೆಯಲ್ಲಿ ಕುಣಿಗಲ್ ವಲಯ ಅರಣ್ಯಅಧಿಕಾರಿ ಮನ್ಸೂರ್ ಹಾಗೂ ಗಸ್ತು
ವನಪಾಲಕ ವಿಜಯ ದೇವೇಂದ್ರ ಹಟ್ಟಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.ಗಾಯಾಳುಗಳಿಗೆ ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಕ್ರಮ ವಹಿಸಿದ್ದಾರೆ. ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿರುವಂತೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈತರ ಮೇಲೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಗಲಾಟೆಯಲ್ಲಿ ಹಲವು ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಕೆಲವು ರೈತರನ್ನು ಬಂಧಿಸಿದ್ದಾರೆ ಎಂದು ಪ್ರಾಂತ ರೈತ ಸಂಘದ ಮುಖಂಡ ಬಿ.ಉಮೇಶ್ ತಿಳಿಸಿದರು.