ಕೆ.ಇ.ಸಿದ್ದಯ್ಯ
Tumukuru: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಜನವರಿ 30ರಂದು ಚುನಾವಣೆಯ ನಡೆಯಲಿರುವುದರಿಂದ ಜೆಡಿಎಸ್ ಕಾಂಗ್ರೆಸ್ ಮತ್ತು ಬಿಜೆಪಿ ಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮೇಯರ್ ಮತ್ತು ಉಪಮೇಯರ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಪಾಲಿಕೆಯ ಮೇಯರ್ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೂ ಉಪ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೂ ನಿಗದಿ ಮಾಡಿ ಅಧಿಕಾರ ಹಂಚಿಕೆಯಾಗಿತ್ತು. ಅದರಂತೆ ಮೊದಲ ಅವಧಿ ಮುಗಿದಿದೆ. ಹೀಗಾಗಿ ಚುನಾವಣೆ ನಡೆಯಲಿದೆ.
ಅಧಿಕಾರ ಹಂಚಿಕೆ ಸೂತ್ರದಂತೆ ಈಗ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಮತ್ತು ಉಪಮೇಯರ್ ಸ್ಥಾನ ಜೆಡಿಎಸ್ ಪಡೆಯಬೇಕಾಗಿದೆ. ಆದರೆ ‘ಸೂತ್ರ’ ಧಾರರು ಮೈತ್ರಿ ಮುಂದುವರಿಕೆಗೆ ಒಪ್ಪಬೇಕು. ಸೂತ್ರ ಹಿಂದೆನಂತೆಯೇ ಇರುತ್ತದೆಯೇ ಅಥವಾ ಬದಲಾಗುತ್ತದೆಯೇ ಎಂಬುದು ಇಲ್ಲಿ ಉದ್ಭವಿಸಿರುವ ಪ್ರಮುಖ ಪ್ರಶ್ನೆ.
ಈ ಪ್ರಶ್ನೆಗೆ ಉತ್ತರ ಸಿಗುವುದು ಸದ್ಯದ ಮಟ್ಟಿಗೆ ಕಷ್ಟ. ಅಧಿಕಾರಕ್ಕಾಗಿ ಯಾರೂ ಯಾವ ಕಡೆ ಬೇಕಾದರೂ ವಾಲಬಹುದು. ಇದುವರೆಗೆ ಮೇಯರ್ ಆಗಿ ಲಲಿತಾ ರವೀಶ್ ಮತ್ತು ಉಪಮೇಯರ್ ಆಗಿ ರೂಪ ಕೆಲಸ ನಿರ್ವಹಿಸಿದ್ದು ಅವರ ಅವಧಿ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದ್ದು ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮುಖಂಡರು ತೀವ್ರ ಕಸರತ್ತು ನಡೆಸಿದ್ದಾರೆ.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವುದರಿಂದ ಈ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಒಟ್ಟು ನಾಲ್ವರು ಸಾಮಾನ್ಯ ವರ್ಗದ ಮಹಿಳಾ ಸದಸ್ಯರಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ಸದಸ್ಯರೂ ಕೂಡ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿದೆ. ಇದು ಪೈಪೋಟಿ ತೀವ್ರಗೊಳ್ಳಲು ಕಾರಣವಾಗಿದೆ.
ಪಾಲಿಕೆಯ ಜೆಡಿಎಸ್ ಸದಸ್ಯರು ಒಟ್ಟಾಗಿದ್ದು ಒಮ್ಮತದ ತೀರ್ಮಾನಕ್ಕೆ ಬದ್ದರಾಗಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಕೈಗೊಳ್ಳುವ ನಿರ್ಧಾರಕ್ಕೆ ಕಟಿಬದ್ದರಾಗಿದ್ದಾರೆ. ಮೇಯರ್ ಮತ್ತು ಉಪಮೇಯರ್ ಯಾರಾಗಬೇಕೆಂಬ ಬಗ್ಗೆ ಚರ್ಚಿಸಲು ಸಭೆಯನ್ನೂ ಕರೆಯಲಾಗಿದೆ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿದುಬಂದಿದೆ.
ಈಗ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯನ್ನು ಜೆಡಿಎಸ್ ತೀವ್ರ ವಾಗಿ ವಿರೋಧಿಸುತ್ತಿದ್ದರೂ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯನ್ನು ಹಂಚಿಕೊಂಡು ಅಧಿಕಾರ ನಡೆಸುತ್ತಿವೆ. ಆದರೆ ಸದಸ್ಯರು ಗೈರಾಗಿ ಅಧ್ಯಕ್ಷರನ್ನು ಕೆಳಗಿಳಿಸುವ ಪ್ರಯತ್ನ ನಡೆದಿದೆ.
ಇದು ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹುದ್ದೆಯನ್ನು ಉಳಿಸಿಕೊಳ್ಳಲು ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನವನ್ನು ನೀಡಲು ಮುಂದಾಗಬಹುದು.
ಜೆಡಿಎಸ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆಯನ್ನು ಬಿಟ್ಟುಕೊಡುವ ಮನಸ್ಸಿಲ್ಲ. ಹೀಗಾಗಿ ಪಾಲಿಕೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿ ಉದ್ಭವಿಸಿದರೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡಿದ್ದ ಮೈತ್ರಿ ಮುರಿದು ಬೀಳಲಿದೆ.
ಸ್ಥಳೀಯ ಸಂಸ್ಥೆಯಾಗಿರುವುದರಿಂದ ಯಾವ ಸದಸ್ಯರು ಯಾರೊಂದಿಗೆ ಗುರುತಿಸಿಕೊಳ್ಳುತ್ತಾರೆ ಹೇಳಲಾಗುದು. ಇದು ಸರ್ವೇಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ ಎನ್ನುತ್ತಾರೆ ರಾಜಕೀಯ ಬಲ್ಲವರು.
ನೈತಿಕವಾಗಿ ನಡೆದುಕೊಂಡರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಬೇಕು. ಹಂಚಿಕೆ ಸೂತ್ರದಂತೆ ಜೆಡಿಎಸ್ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಬೇಕು. ಇದು ಸಾಧ್ಯವಾಗದಿದ್ದರೆ ಹಿಂದಿನ ಮೈತ್ರಿಯೇ ಮುಂದುವರೆದು ಜೆಡಿಎಸ್ ತನ್ನ ಹಿಡಿತವನ್ನು ಪುನರ್ ಸ್ಥಾಪಿಸಬಹುದು ಎನ್ನುತ್ತವೆ ಮೂಲಗಳು.
ಅಧಿಕಾರ ಹಂಚಿಕೆ ಸೂತ್ರ ಮುಂದುವರೆಯುತ್ತದೋ, ಅಧಿಕಾರ ಪಲ್ಲಟವಾಗುತ್ತೋ ಅಥವಾ ಹೊಸ ಮೈತ್ರಿ ಏರ್ಪಡುತ್ತೋ ನೋಡಬೇಕಾಗಿದೆ.