ಕೆ.ಇ.ಸಿದ್ದಯ್ಯ
ತುಮಕೂರು: ನಗರದ ಕೆಲವು ಬಡಾವಣೆಗಳಲ್ಲಿ ಸೋರಿಕೆ ಪರಿಶೀಲಿಸುವ ನೆಪದಲ್ಲಿ ದಿನಪೂರ್ತಿ ನಲ್ಲಿಗಳಲ್ಲಿ ನೀರು ಹರಿದು ವ್ಯರ್ಥವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ಸೋಮೇಶ್ವರ ಪುರಂ, ಎಸ್.ಐ.ಟಿ, ಸಾಬರಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ನಲ್ಲಿಗಳಲ್ಲಿ ನೀರು ಬಿಡುತ್ತಿದ್ದು ತೊಟ್ಟಿಗಳು ತುಂಬಿ ರಸ್ತೆಗೆ ಹರಿದು ಹೋಗುತ್ತಿದೆ.
ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದ್ದರೂ ಹೀಗೆ ನೀರು ಪೋಲಾಗುತ್ತಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿಲ್ಲದ ಕಾರಣಕ್ಕೆ ವಾರಕ್ಕೆ ಒಮ್ಮೆ ನೀರು ಬಿಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುವಂತೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೆಲವು ಕಡೆಗಳಲ್ಲಿ ನಲ್ಲಿಗಳಿಗೆ ಮೀಟರ್ ಅಳವಡಿಸಿದೆ. ಪರೀಕ್ಷಾರ್ಥವಾಗಿ ನೀರು ಹರಿಸಿದರೆ ಮೀಟರ್ ಗಳು ಚಾಲ್ತಿಯಾಗುತ್ತವೆ. ಮೀಟರ್ ಓಡಿದರೆ ಸುಖಾಸುಮ್ಮನೆ ನೀರಿನ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೆಲವು ದೂರಿದ್ದಾರೆ.
ಬಹುತೇಕ ಬಡಾವಣೆಯ ಕೆಲವು ಕಡೆ ನಲ್ಲಿಗಳಿಗೆ ಮೀಟರ್ ಆಳವಡಿಸಿಲ್ಲ. ಆದರೂ ನೀರು ಸೋರಿಕೆಯ ಕುರಿತು ಟೆಸ್ಟ್ ಮಾಡಲು ನಲ್ಲಿಗಳಲ್ಲಿ ನೀರು ಹರಿಸುತ್ತಿದ್ದಾರೆ. ಅರ್ಧ ಗಂಟೆ ನೀರು ಹರಿಸಿ ಟೆಸ್ಟ್ ಮಾಡಿದರೆ ಆಗುವುದಿಲ್ಲವೇ? ಪರೀಕ್ಷೆ ಮಾಡೋದು ಅಂದ್ರೆ ಇಡೀ ದಿನ ನೀರು ಬಿಡಬೇಕೇ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಹಾಕುತ್ತಾರೆ.
ರೈಸಿಂಗ್ ಮೇನ್ ಗೆ ಪೈಪ್ ಗಳನ್ನು ಸಂಪರ್ಕ ಕಲ್ಪಿಸಿರುವ ಜಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಅಂದರೆ ವೈಜ್ಞಾನಿಕವಾಗಿ ನಲ್ಲಿಗಳನ್ನು ಅಳವಡಿಸಿಲ್ಲ. ಅಷ್ಟೇ ಅಲ್ಲದೆ ಖಾಲಿ ಇರುವ ಮನೆಗಳಲ್ಲಿ ನಲ್ಲಿಗಳ ಸಂಪರ್ಕವನ್ನು ಸಂಪುಗಳಿಗೆ ಬಿಟ್ಟಿಲ್ಲ. ಬದಲಿಗೆ ಮನೆಯ ಆವರಣದಲ್ಲಿ ನಲ್ಲಿಯನ್ನು ಬೇಕಾಬಿಟ್ಟಿ ಹಾಕಿದ್ದು ನೀರು ವ್ಯರ್ಥವಾಗಲು ಕಾರಣವಾಗಿದೆ.
ಕೆಲವು ಕಡೆ ನಲ್ಲಿಗಳಿಗೆ ಮೀಟರ್ ಅಳವಡಿಸಿದ್ದರೂ ಮೀಟರ್ ಅಳವಡಿಕೆಗೂ ಮೊದಲು ಪೈಪ್ ಗಳನ್ನು ತೆಗೆದು ಬಿಟ್ಟಿದ್ದಾರೆ. ಇದರಿಂದಲೂ ಕೂಡ ನೀರು ಪೋಲಾಗುತ್ತಿದೆ. ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಬೇಸಿಗೆಗೆ ಆಗುವಷ್ಟು ನೀರು ಇದೆಯೇ ಎಂಬ ಬಗ್ಗೆಯೂ ಯಾರೂ ಯೋಚಿಸಿದಂತೆ ಕಾಣುತ್ತಿಲ್ಲ.