ಡಾ. ವಡ್ಡಗೆರೆ ನಾಗರಾಜಯ್ಯ
ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಉಡುಸಲಮ್ಮ ದೇವಿ ಜಾತ್ರೆಯಲ್ಲಿ ನಿನ್ನೆ ದಿನ (16-04-2022) ನಡೆದಿರುವ ಸಿಡಿ ಉತ್ಸವದ ವಿಡಿಯೋ ತುಣುಕು ಇದು. ಇಂತಹ ಸಿಡಿ ಆಚರಣೆಯನ್ನು ಕುರಿತು ಜನ್ನ ಕವಿ ‘ಯಶೋಧರ ಚರಿತೆ’ ಕಾವ್ಯದಲ್ಲಿ ಹೀಗೆ ಹೇಳಿದ್ದಾನೆ :
ಆ ದೇವಿಯ ಜಾತ್ರೆಗೆ ಮೊಳೆ|
ವೋದೆಳವೆರೆ ಸಿರದ ಗಾಳಮುರಿಯುಯ್ಯಲೆ ಕೈ||
ವೋದಸುಕೆ ಕೋಕಿಲಧ್ವನಿ|
ಮೂದಲೆಯುಲಿಯಾಗೆ ಬಂದನಂದು ವಸಂತಂ||
ತಾಳುಗೆಯ ನುರ್ಚಿ ನೆತ್ತಿಯ
ಗಾಳಂ ಗಗನದೊವಿಲ್ವ ವಾರಿಯ ಬೀರರ್|
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ||
ವಸಂತ ಮಾಸದಲ್ಲಿ ಬರುವ ಮಾರಿಜಾತ್ರೆಯ ಸಂದರ್ಭದಲ್ಲಿ ಚಂಡಮಾರಿ ದೇವತೆಗೆ ಅದೇ ದೇವಮಂದಿರದ ಆವರಣದಲ್ಲಿ ನಡೆಯುವ ಸಿಡಿ ಆಚರಣೆಯನ್ನು ಜನ್ನ ಕವಿ ವಿವರಿಸುತ್ತಾನೆ. ಬಾಲಚಂದ್ರನು ಸಿರದ ಗಾಳದಂತೆ (ಸಿಡಿ ಆಚರಣೆಯಲ್ಲಿ ಬಳಸುವ ಕಬ್ಬಿಣದ ಕೊಕ್ಕೆಯಂತೆ), ಚಿಗುರಿದ ಅಶೋಕ ವೃಕ್ಷವು ಉರಿಯ ಉಯ್ಯಾಲೆಯಂತೆ, ಕೋಕಿಲಧ್ವನಿಯು ಮೂದಲೆಯ ಉಲಿಯಂತೆ ತೋರುತ್ತಿರಲು ವಸಂತಮಾಸ ಆಗಮಿಸುತ್ತದೆ. ಇದೇ ವಸಂತ ಮಾಸದಲ್ಲಿ ನಡೆಯುವ ಮಾರಿ ಜಾತ್ರೆಯ ಆಚರಣಾ ವಿಧಿಗಳಾದ ‘ಸಿರದ ಗಾಳ’, ‘ಉರಿಯ ಉಯ್ಯಲೆ’, ‘ಮೂದಲೆಯ ಉಲಿ’, ‘ನೆತ್ತಿಯ ಗಾಳ’ ಮುಂತಾದ ಜನಪದ ಚಟುವಟಿಕೆಗಳನ್ನು ಜನ್ನ ಕವಿ ನಿರುದ್ವಿಗ್ನವಾಗಿ ದಾಖಲಿಸಿರುತ್ತಾನೆ. ಸಿರ ಎಂದರೆ ನಮ್ಮ ಕುತ್ತಿಗೆಯ ಹಿಂಬದಿಯ ಭಾಗ. ಇದನ್ನು ಸಿರಪಟ್ಟಿ, ಪಟ್ಟೆಸಿರ, ಎಕ್ಕತ್ತು, ಎಕ್ಸಿರ ಮುಂತಾದ ಪದಗಳಿಂದ ಕರೆಯುತ್ತೇವೆ. ದೇವಿ ಜಾತ್ರೆಯ ಭಾಗವಾಗಿ ನಡೆಯುವ ಸಿಡಿ ಉತ್ಸವದಲ್ಲಿ ಸಿಡಿಗಂಬವನೇರಿ ಸಿಡಿ ಆಟ ಪ್ರದರ್ಶಿಸುವ ವ್ಯಕ್ತಿಯ ಕುತ್ತಿಗೆಯ ಹಿಂಬದಿಯಲ್ಲಿರುವ ಸ್ನಾಯುಗಳ ಮೇಲೆ ಮುಷ್ಟಿಯಿಂದ ಗುದ್ದಿ ನರಗಳನ್ನು ಸಡಿಲಿಸಲಾಗುತ್ತದೆ. ಸಡಿಲಿಸಿದ ಮುಖ್ಯ ನರಗಳಿಗೆ ಕಬ್ಬಿಣದ ಗಾಳವನ್ನು (ಸಿರಗಾಳ) ಸಿಕ್ಕಿಸಿ, ಅವನನ್ನು ಸಿಡಿಗಂಬಕ್ಕೇರಿಸಿ ಆಕಾಶದಲ್ಲಿ ತೂಗಾಡಿಸಲಾಗುತ್ತದೆ. ಸಿರದ ನರಗಳ ಬದಲು ನೆತ್ತಿಯ ನರಗಳಿಗೆ ಸಿಕ್ಕಿಸುವ ಕೊಕ್ಕೆಯನ್ನು ‘ನೆತ್ತಿಯ ಗಾಳ’ ಎಂದು ಕರೆಯುತ್ತಾರೆ.
ಜನ್ನ ಕವಿ ತಾನು ಬದುಕಿದ್ದ ಕಾಲದಲ್ಲಿ ಸುದತ್ತನಪುರದ ಚಂಡಮಾರಿ ದೇವತೆಯ ಜಾತ್ರೆಯಲ್ಲಿ ನಡೆಯುವ ಸಿಡಿ ಆಚರಣೆಯ ಪ್ರತಿಯೊಂದು ವಿಧಿಗಳನ್ನು ಶ್ರದ್ಧೆಯಿಂದ ಗಮನಿಸಿ ತನ್ನ ಕಾವ್ಯದಲ್ಲಿ ದಾಖಲಿಸಿದ್ದಾನೆ. ಹಿಂಸೆಯ ಪರಿಕಲ್ಪನೆಯನ್ನು ವಿವರಿಸುವ ಮೂಲಕವೇ ಅಹಿಂಸೆ ಎಂಬ ಮೌಲ್ಯದ ಮಹತ್ವವನ್ನು ಓದುಗರಿಗೆ ಮನಗಾಣಿಸುತ್ತಾನೆ. ರಾಜಸತ್ತೆಯ ಅಂದಿನ ಕಾಲದಿಂದಲೂ ಪ್ರಜಾಸತ್ತೆಯ ಇಂದಿನ ಕಾಲದವರೆಗೂ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಇಂತಹ ರುದ್ರಭೀಷಣ ಆಚರಣೆಗಳಲ್ಲಿ ‘ಉತ್ತಮರು’ ಎನ್ನಿಸಿಕೊಂಡವರಿಗೆ ಮನರಂಜನೆ ನೀಡಲು ಪಾಲ್ಗೊಳ್ಳುತ್ತಿರುವ ‘ವಾರಿಯ ಬೀರರ್’ ಮಾತ್ರ ಕೆಳ ಜಾತಿಗಳ ಜನ. ಜನ್ನ ಕವಿ ಹೇಳುವ ‘ಉರಿಯ ಉಯ್ಯಲೆ’ ಎಂಬುದು ಕೊಂಡೋತ್ಸವ ಅಥವಾ ಅಗ್ನಿಗೊಂಡ ಆಚರಣೆಯಾಗಿರುತ್ತದೆ. ಕೊಂಡ ಹಾಯುವ ಆಚರಣದಯಲ್ಲಿ ಬೆಂಕಿಗೆ ಬಿದ್ದು ಸತ್ತ ‘ವಾರಿಯ ಬೀರರ್’ ಗಳಿಗೆ ಲೆಕ್ಕವಿಲ್ಲ. ಕೆಳಜಾತಿಗಳ ‘ವಾರಿಯ ಬೀರರ್’ ತೋರಿಸುವ ವೀರತ್ವದ ಬಾಳು ಎಂಥದ್ದೆಂದರೆ, ಜನ್ನನೇ ಹೇಳುವಂತೆ ‘ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ’. ಇಂತಹ ಆಚರಣೆಗಳನ್ನು ನಮ್ಮ ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನದ ಅಗ್ನಿಕುಂಡದಲ್ಲಿ ಸುಡುವುದೇ ಲೇಸು. ಏನಂತೀರಿ?