Public story
ಪಾವಗಡ: ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಜನತೆ ಮೈ ಮರೆಯಬಾರದು ಎಂದು ಶಾಸಕ ವೆಂಕಟರವಣಪ್ಪ ಎಚ್ಚರಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಗೃಹ ರಕ್ಷಕ ಧಳದ ಸಿಬ್ಬಂದಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ 19 ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿಲ್ಲ. ಸಂಪೂರ್ಣವಾಗಿ ಇಳಿಕೆಯಾಗುವವರೆಗೆ ಜನತೆ ಅನಗತ್ಯವಾಗಿ ಓಡಾಡದೆ ಎಚ್ಚರಿಕೆ ವಹಿಸಬೇಕು. ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಜಾಗ್ರತೆಯಿಂದ ಇರಬೇಕು ಎಂದರು.
ಕೋವಿಡ್ 19 ನಿಂದ ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಮುಖಾಂತರ ಸಾಕಷ್ಡು ಮಂದಿ ಮಾನವೀಯತೆ ಮೆರೆಯುತ್ತಿದ್ದಾರೆ. ದೇಶದೆಲ್ಲೆಡೆ ದಾನಿಗಳ ಸಂಖ್ಯೆ ಹೆಚ್ಚಿದೆ. ಆಹಾರ, ಪಡಿತರ, ತರಕಾರಿ, ಔಷಧಿ, ವೈದ್ಯಕೀಯ ಸಲಕರಣೆಗಳನ್ನು ಕೊಡುವ ಮೂಲಕ ನೆರೆ ಹೊರೆಯವರಿಗೆ ಸಹಾಯ ಹಸ್ತ ಚಾಚಲಾಗುತ್ತಿದೆ. ತಾಲ್ಲೂಕಿನಲ್ಲಿಯೂ ಇಂತಹ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಗೃಹರಕ್ಷಕ ದಳದ ಜಿಲ್ಲಾ ಅಧಿಕಾರಿ ಆರ್.ಪಾತಣ್ಣ, ಜಿಲ್ಲೆಯಾದ್ಯಂತ 450 ಮಂದಿ ಕೋವಿಡ್ ನಿಯಂತ್ರಿಸಲು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶೇ85 ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರೂ ಶೀಘ್ರ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೊರೊನಾ ವಾರಿಯರ್ಸ್ ಗಳಾದ ಗೃಹರಕ್ಷಕ ಧಳದ ಸಿಬ್ಬಂದಿಗೆ ಸಿದ್ದಾರ್ಥ ಕನ್ ಸ್ಟ್ರಕ್ಷನ್ಸ್ ವತಿಯಿಂದ ಪಡಿತರ ಕೊಡಿಸಿರುವ ಶಾಸಕ ವೆಂಕಟರವಣಪ್ಪ ಅವರ ಕಾರ್ಯ ಶ್ಲಾಘನೀಯ ಎಂದರು.
ವೆಂಕಟಮ್ಮನಹಳ್ಳಿ ನಾನಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ.ಎಸ್.ಸುದೇಶ್ ಬಾಬು, ತಕ್ಕಲಪಾಟಿ ಬೊಮ್ಮಯ್ಯ, ಪುರಸಭೆ ಸದಸ್ಯ ರಾಜೇಶ್, ರವಿ, ಚನ್ನಕೇಶವ, ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಎಸ್.ಐ ಗುರುನಾಥ್, ಶೇಷಗಿರಿ, ಸ್ಟುಡಿಯೊ ಅಮರ್ ಉಪಸ್ಥಿತರಿದ್ದರು.