Thursday, June 20, 2024
Google search engine
HomeUncategorizedನಾವು ಹುಡುಗಿಯರು ಅಂಬೇಡ್ಕರ್ ಆಗೋಕೆ ಆಗಲ್ವಾ?

ನಾವು ಹುಡುಗಿಯರು ಅಂಬೇಡ್ಕರ್ ಆಗೋಕೆ ಆಗಲ್ವಾ?

ನಿತ್ಯಾನಂದ ಬಿ. ಶೆಟ್ಟಿ


ತುಮಕೂರು ಗ್ರಾಮಾಂತರದ ವ್ಯಾಪ್ತಿಯಲ್ಲಿರುವ ದಿಬ್ಬೂರು ಗ್ರಾಮಪಂಚಾಯತ್ ವಲಯದ ಹೊಸಳ್ಳಿ ಎಂಬ ಹಳ್ಳಿಯಲ್ಲಿ ನನ್ನ ವಾಸ್ತವ್ಯ.

ಎರಡು ದಿನದ ಹಿಂದೆ ರಾತ್ರಿ ಸುಮಾರು 9.00 ಗಂಟೆಗೆ ನನ್ನ ಮನೆಗೆ ಬಂದ ಹೊಸಳ್ಳಿಯ ದಲಿತ ಸಮುದಾಯದ ಹಿರಿಯರಾದ ಕೃಷ್ಣಮೂರ್ತಿ, ವೆಂಕಟೇಶ್, ವಿಠಲಣ್ಣ ಮತ್ತು ಕೆಲವು ತರುಣರು; “ಮೇಷ್ಟ್ರೆ, ನಮ್ಮ ಕಾಲೊನಿಯಲ್ಲಿ ಅಂಬೇಡ್ಕರ್ ಜಯಂತಿ ಮಾಡ್ತಾ ಇದೀವಿ. ನೀವು ಬಂದು ಮಾತಾಡಬಹುದೇ” ಎಂದು ಕೇಳಿಕೊಂಡಿದ್ದರು.

ಸಂತೋಷದಿಂದ ಒಪ್ಪಿಕೊಂಡು ಇವತ್ತು ಮಾತಾಡಿ ಬಂದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಅವರ ಅಮ್ಮಂದಿರೇ ಹೆಚ್ಚು ಇದ್ದ ಆ ಸಭೆಯಲ್ಲಿ ನಾನು ಒಟ್ಟಾರೆಯಾಗಿ ಹೇಳಿದ್ದು ಇಷ್ಟು-

“ವಿದೇಶೀ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಸಂಶೋಧನೆ ಮಾಡಿದ ಮೊತ್ತಮೊದಲ ಭಾರತೀಯ ಸಂಶೋಧನಾರ್ಥಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್. ಪ್ರಪಂಚದಲ್ಲೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಹೆಸರು ಪಡೆದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರು ತಮ್ಮ ಹೆಚ್ಚಿನ ಓದು ಮತ್ತು ಅಧ್ಯಯನವನ್ನು ನಡೆಸಿದರು.

ಈ ಕೊಲಂಬಿಯಾ ಯೂನಿವರ್ಸಿಟಿ ಎಷ್ಟು ದೊಡ್ಡ ಉನ್ನತ ಶಿಕ್ಷಣ ಸಂಸ್ಥೆ ಅಂದರೆ, ಇಲ್ಲಿಯ ಒಟ್ಟು 84 ಜನರು ಇದುವರೆಗೆ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಭೌತಶಾಸ್ತ್ರದಲ್ಲಿ 29, ರಸಾಯನ ಶಾಸ್ತ್ರದಲ್ಲಿ 13, ಶಾಂತಿಗಾಗಿ 4, ವೈದ್ಯಕೀಯ ಶಾಸ್ತ್ರದಲ್ಲಿ 20, ಸಾಹಿತ್ಯದಲ್ಲಿ 5, ಅರ್ಥಶಾಸ್ತ್ರದಲ್ಲಿ 15 ಮಂದಿ ಸಾಧಕರು, ಬುದ್ಧಿಜೀವಿಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ‌

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಲಾಗಾಯ್ತಿನಿಂದಲೂ ಅಗ್ರಸ್ಥಾನದಲ್ಲಿರುವ ಇಂತಹ ಯೂನಿವರ್ಸಿಟಿಯಲ್ಲಿ ತನ್ನ ಮೂರು ವರ್ಷದ ಅಧ್ಯಯನವನ್ನು ಅಂಬೇಡ್ಕರ್ ಮಾಡ್ತಾರೆ. ಅದು ಎಷ್ಟು ಚಾಲೆಂಜಿಂಗ್ ಆಗಿರಬಹುದು ಎಂಬುದನ್ನು ನನ್ನಂಥವನಿಗೆ ಊಹಿಸುವುದೂ ಕಷ್ಟ.‌

ಅಂಬೇಡ್ಕರ್ ಅವರು ಇಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅರ್ಥಶಾಸ್ತ್ರದಲ್ಲಿ 29, ಇತಿಹಾಸ ಅಧ್ಯಯನದಲ್ಲಿ 11, ಸಾಮಾಜಿಕ ಶಾಸ್ತ್ರ ದಲ್ಲಿ 6, ತತ್ವ ಶಾಸ್ತ್ರ ದಲ್ಲಿ 5, ಮಾನವಶಾಸ್ತ್ರ ಅಧ್ಯಯನದಲ್ಲಿ 4, ರಾಜಕೀಯ ಶಾಸ್ತ್ರಗಳ ಅಧ್ಯಯನದಲ್ಲಿ 3 ಕೋರ್ಸ್ ಗಳನ್ನು ಮಾಡಿ, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನೂ ಅಧ್ಯಯನ ಮಾಡಿದ್ದರು. ನೆನಪಿಡಿ ಈ ಪ್ರಮಾಣದ ಅಧ್ಯಯನ ನಡೆಸಿದ ವಿಶ್ವದ ಏಕೈಕ ವಿದ್ಯಾರ್ಥಿ ಅಂಬೇಡ್ಕರ್. ಇದು ಈಗಲೂ ವಿಶ್ವದಾಖಲೆಯೇ ಆಗಿ ಉಳಿದಿದೆ.‌

ಇಂತಹ ಅಪಾರ ಪ್ರತಿಭೆಯ ಬುದ್ಧಿಜೀವಿಯಾದ ಡಾ. ಬಿ ಆರ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಬಹಳ ದೊಡ್ಡ ಕೊಡುಗೆ ಎಂದರೆ ಅದು ಭಾರತೀಯ ಸಂವಿಧಾನ. ನಮ್ಮ ಸಂವಿಧಾನ ನಮಗೆ ಸ್ವಾತಂತ್ರ್ಯದ ಮತ್ತು ಸಮಾನತೆಯ ಅರ್ಥ ಹಾಗೂ ಮಹತ್ವವನ್ನು ಮಾಡಿಕೊಟ್ಟಿದೆ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ವಿದೇಶದ ಕೆಲವು ಶಕ್ತಿಗಳು ನಮ್ಮನ್ನು ಒತ್ತೆ ಇರಿಸಿಕೊಂಡಿದ್ದರು. ಮಹಾತ್ಮ ಗಾಂಧಿಯವರ ನಾಯಕತ್ವದಲ್ಲಿ ನಮ್ಮ ದೇಶದ ಧೀಮಂತ ನಾಯಕರು ಮತ್ತು ನಮ್ಮೆಲ್ಲರ ಹಿರೀಕರು ನಡೆಸಿದ ಸ್ವಾತಂತ್ರ್ಯ ಹೋರಾಟದಿಂದ ನಾವು ನಮ್ಮನ್ನು ಆ ಒತ್ತೆಸೆರೆಯಿಂದ ಬಿಡಿಸಿಕೊಂಡಿದ್ದೇವೆ.

ಇಷ್ಟು ಕಷ್ಟ ಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ದೇಶದ ಒಳಗಿನ ಕೆಲವು ಹಿತಾಸಕ್ತಿಗಳು ಮತ್ತು ಶಕ್ತಿಗಳು ಕಸಿಯುವ ಸಾಧ್ಯತೆ ಇದೆ ಎಂಬುದನ್ನು ಮನಗಂಡ ಬಾಬಾಸಾಹೇಬರು ಅಂತಹ ಅಪಾಯದಿಂದ ಜನರನ್ನು ರಕ್ಷಿಸುವುದಕ್ಕಾಗಿ ಇಂತಹ ಸಂವಿಧಾನವನ್ನು ಕೊಟ್ಟರು.

ಕಷ್ಟ ಪಟ್ಟು ಗಳಿಸಿದ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಮತ್ತೆ ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು ಎಂಬುದು ಬಾಬಾಸಾಹೇಬರು ಕೊಟ್ಟ ಸಂವಿಧಾನದ ಹಿಂದಿರುವ ಕಾಳಜಿ.

“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಹಳೆಯ ಕಾಲದ ಮಾತನ್ನು ಈಗಿನ ಕಾಲದಲ್ಲಿ ನಾವು “ಸಂವಿಧಾನೋ ರಕ್ಷತಿ ರಕ್ಷಿತಃ” ಎಂದು ಬದಲಾಯಿಸಬೇಕಾಗಿದೆ. ಅಂದರೆ ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ.

ಸಂವಿಧಾನ ಎಂದರೆ ಕಾಯ್ದೆ ಕಾನೂನುಗಳನ್ನು ರೂಪಿಸುವುದಕ್ಕೆ ಅವಕಾಶ ಮಾಡಿಕೊಡುವ ಪುಸ್ತಕವಲ್ಲ, ಸಾಮುದಾಯಿಕ ಒಳಿತನ್ನು ಬಯಸುವ ಮನುಷ್ಯ ವಿವೇಕದ ಗ್ರಂಥರೂಪ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಈ ಕಾಲದ ವಿವೇಕವಾಣಿ.”

ಇಷ್ಟು ಮಾತಿನ ಬಳಿಕ ಕಾರ್ಯಕ್ರಮದಿಂದ ಹೊರಡುವಾಗ ಆರನೇ ತರಗತಿಯಲ್ಲಿ ಕಲಿಯುವ ಹುಡುಗಿಯೊಬ್ಬಳು ನನ್ನ ಬಳಿ ಬಂದಳು.
“ಸರ್, ಹುಡುಗರು ಮಾತ್ರ ಅಂಬೇಡ್ಕರ್ ಆಗಬಹುದಾ? ನಾವು ಹುಡುಗಿಯರು ಅಂಬೇಡ್ಕರ್ ಆಗೋಕೆ ಆಗಲ್ವಾ?” ಎಂದಳು.

ನಾನಂದೆ, “ಮಗುವೇ, ಹುಡುಗರು ಅಂಬೇಡ್ಕರ್ ರವರನ್ನು ಓದಿದರೆ ಖಂಡಿತವಾಗಿಯೂ ಇನ್ನೊಬ್ಬ ಅಂಬೇಡ್ಕರ್ ಆಗಬಹುದು. ಆದರೆ ಹೆಣ್ಣು ಮಕ್ಕಳು ಅಂಬೇಡ್ಕರ್ ಅವರನ್ನು ಓದಿ, ಅರ್ಥ ಮಾಡಿಕೊಂಡು, ಅವರ ಚಿಂತನೆಗಳನ್ನು ಮುಂದುವರಿಸಿದರೆ ಪ್ರತಿದಿನ ಅಂಬೇಡ್ಕರ್ ಹುಟ್ಟುತ್ತಾರೆ ಕಂದ”.

ಆ ಪುಟ್ಟ ಹುಡುಗಿಯ ಕಣ್ಣುಗಳಲ್ಲಿ ಆಗಲೇ ಅವಳಿ ಸೂರ್ಯರು ಉದಯಿಸಿ ಬಂದಷ್ಟು ಬೆಳಕು.

ಎಲ್ಲ ಸಂಕಟಗಳ ನಡುವೆಯೂ ನನ್ನ ದೇಶದ ನಾಳೆಯ ದಿನಗಳ ಬಗ್ಗೆ ನನಗೆ ಹೊಸ ಭರವಸೆ ಹುಟ್ಟಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?