ಮಹಿಳಾ ದಿನಾಚರಣೆ ಬಂದು ಹೋಗಾಯ್ತು. ಉಳ್ಳವರ ಬವಣೆ ಒಂದು ಥರ. ದುಡಿಯುವ ಮಹಿಳೆಯ ಬವಣೆ ಬೇರೆ ಥರಾ. ಪ್ರತಿನಿತ್ಯದ ಬದುಕಿನಲ್ಲಿ ಹೆಣ್ಣಿನ ನೋವು ಕಂಡು ಹೊಮ್ಮಿದ ಕವನ ಡಾII ರಜನಿಯವರ ಬತ್ತಳಿಕೆ ಯಿಂದ.
ಸ್ತ್ರೀ…..
ಸ್ತ್ರೀ ದಿನ ಬಂದು
ಹೋಗಾಯ್ತು…
ಉಟ್ಟ ನೇರಳೆ ಸೀರೆಯ
ಬಣ್ಣದ ಬಾಸುಂಡೆ
ಬಾರದಿರಲಿ…
ಮುಡಿದ ಕೆಂಪು ಗುಲಾಬಿಯ
ರಂಗಿನ ಕಣ್ಣಿನ
ಕುಡಿದ ಗಂಡ …ಕಾಡದಿರಲಿ.
ಭಾಷಣ ಮಾಡಿ ಬಂದ
ಹೆಂಡತಿಗೆ …. ವ್ಯಂಗ್ಯ
ಸುರಿಯದಿರಲಿ.
ಆರ್ಥಿಕ ಸ್ವಾವಲಂಬನೆಯ
ಆಸೆಯ ಹೆಂಗಸಿನ
ದುಡ್ಡು ಕಿತ್ತು ಗೊಂಡು
ಗಡಂಗಿನ ದಾರಿಗೆ
ಗಂಡ ನಡೆಯದಿರಲಿ..
ಜೀವ ಮಾನವೆಲ್ಲಾ ದುಡಿದ
ಹೆಣ್ಣಿಗೆ ಆರೋಗ್ಯ ತಪಾಸಣೆ
ಮೊದಲಾಗಲಿ ….
ದುಡಿದ ಸ್ತ್ರೀಗೆ …ದೇಶಗಳ
ದರ್ಶನ ಭಾಗ್ಯ ದೊರೆಯಲಿ….
ತಾನೂ ಹಾಕಿದ ಬಂಡವಾಳಕ್ಕೆ
ಜಂಟಿ ಖಾತೆಯಿರಲಿ…
ದುಡಿದ ಆಸ್ತಿ
ಇಬ್ಬರ ಹೆಸರಲ್ಲೂ ಇರಲಿ…
ನಾಮಿನಿ ಜಾಗದಲ್ಲಿ
ಪಾಲುದಾರಳಾಗಲಿ ….
ಮಗಳಿಗೆ ….. ಪಾಲಿಗೆ
ಬಂದಾಳೆಂದು….
ಗೌರಿಗೆ ಕರೆಯುವದ
ಮರೆಯದಿರಲಿ.
ಸಣ್ಣ ಅಧಿಕಾರ ನೀಡಿ.. ದೊಡ್ಡ
ಅಧಿಕಾರ ನೀಡುವಲ್ಲಿ….
ಕಣ್ಣಿಗೆ ಮಣ್ಣೆರಚದಿರಲಿ.
ಉಡುವ ಬಟ್ಟೆ ಬರೆಯ
ವ್ಯಾಖ್ಯಾನ ಬಿಟ್ಟು …
ವ್ಯಕ್ತಿತ್ವಕ್ಕೆ ಬೆಲೆ ಕೊಡಲಿ.
ಆಕೆಯನ್ನು ತುಳಿಯಲು
ನೂರು ನ್ಯೂನತೆ
ಸೃಷ್ಟಿಯಾಗದಿರಲಿ.
ಸ್ವೀಕರಿಸಿ
ಸಹಜವಾಗಿ.
ಸ್ತ್ರೀತನ ಬೆಳೆದು …
ಸಮಷ್ಠಿ ಲೋಕ
ತಂಪಾಗಿ ಪೊರೆಯುವಂತೆ.
ಡಾII ರಜನಿ