ತುರುವೇಕೆರೆ:
ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಸಾಕಷ್ಟು ಸಚಿವರು ನನಗೆ ಸ್ನೇಹಿತರಿದ್ದು ಹಾಗಾಗಿ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುವ ಸಂಪೂರ್ಣ ಭರವಸೆಯಿದ್ದು ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುವೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಮತ್ತು ಎಂ.ಟಿ.ಕೃಷ್ಣಪ್ಪ ಅಭಿಮಾನ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂಧನೆ ಹಾಗು ಎಂ.ಟಿ.ಕೃಷ್ಣಪ್ಪ ಅವರ 73 ನೇ ಹುಟ್ಟು ಹಬ್ಬವನ್ನು ಕೇಕ್ ಕಟ್ಟು ಮಾಡುವ ಮೂಲಕ ಆಚರಿಸಿಕೊಂಡರು.
ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದರು ಕೂಡ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್ ಸೇರಿ ಹಲವು ಸಚಿವರುಗಳು ನನ್ನ ಸ್ನೇಹಿತರಾಗಿದ್ದು ನೀರಾವರಿ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ತಂದು ಅಭಿವೃದ್ದಿ ಕೆಲಸ ಮಾಡುವೆ ಎಂದರು.
ಜೆಡಿಎಸ್ ಕಾರ್ಯಕರ್ತರು ನನ್ನ ಹುಟ್ಟು ಹಬ್ಬ ಮಾಡುವುದಕ್ಕಿಂತ ನನಗೆ ರಾಜಕೀಯ ಪುನರ್ ಜನ್ಮ ನೀಡಿದ ಕ್ಷೇತ್ರದ ಕಾರ್ಯಕರ್ತರ ಹುಟ್ಟು ಹಬ್ಬವನ್ನು ನಾನು ಮಾಡಬೇಕಿದೆ. ಚುನಾವಣೆಯ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿ ಚುನಾವಣೆ ಕಣದಿಂದ ಹಿಂದೆ ಸರಿಯುವ ತೀರ್ಮಾನ ಮಾಡಿದ್ದೆ.
ಇಂತಹ ಸಂದಿಗ್ಧ ಕಾಲದಲ್ಲಿ ಕಾರ್ಯಕರ್ತರೇ ಹಣ ಹಾಕಿಕೊಂಡು ಚುನಾವಣೆ ಮಾಡಿ ನನ್ನನ್ನು ಶಾಸಕನ್ನಾಗಿ ಮಾಡಿದ್ದೀರಿ ಯಾರಾರು ಎಷ್ಟು ಹಣ ನೀಡಿದ್ದಾರೆ ಎಂಬುದು ಪಟ್ಟಿ ಇದೆ. ನನಗೆ ಸಮಯ ಕೊಡಿ ನೀವು ನೀಡಿದ ಹಣವನ್ನು ಖಂಡಿತ ವಾಪಸ್ಸ್ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಬಾರಿ ದಬ್ಬೇಘಟ್ಟ ಹೋಬಳಿಯಲ್ಲಿ 8 ಸಾವಿರ ಮತಗಳ ಲೀಡ್ ನೀಡಿದ್ದು ಹೋಬಳಿಯ ಸಮಗ್ರ ಅಭಿವೃದ್ದಿ ಮಾಡಲಾಗುವುದು. ಆದರೆ ಮಾಜಿ ಶಾಸಕ ಜಯರಾಮ್ ಎ.ಎಸ್ ವೋಟಿಗಾಗಿ ದಬ್ಬೇಘಟ್ಟ ಏತ ನೀರಾವರಿ ಯೋಜನೆಗೆ ನಾಮಕಾವಸ್ಥೆ ಭೂಮಿ ಪೂಜೆ ಮಾಡಿ ಒಂದು ಬಿಡಿಗಾಸೂ ಅನುದಾನ ಬಿಡುಗಡೆಯಾಗಲಿಲ್ಲ ಕೇವಲ ಸುಳ್ಳು ಭರವಸೆ ನೀಡಿದ್ದರು ಎಂದು ಆರೋಪಿಸಿದರು.
ಅದಕ್ಕೆ ನಾವೇ ಈಗಾಗಲೇ ಸರ್ವೇ ಮಾಡಿಸಿದ್ದು ಇದಕ್ಕೆ 80 ಕೋಟಿ ಹಣ ಬೇಕು. ನಾನು ಸರ್ಕಾರದಿಂದ ತರುತ್ತೇನೆ. ಈ ಏತ ನೀರಾವರಿ ಕಾಮಗಾರಿಯಿಂದ ಈ ಹೋಬಳಿಯ 30ಕ್ಕೂ ಹೆಚ್ಚು ಕೆರೆ, ಕಟ್ಟೆಗಳಿಗೆ ಅನುಕೂಲವಾಗಲಿದೆ.
ಎಲ್ಲ ಗ್ರಾಮಗಳಿಗೂ ರಸ್ತೆ, ಕುಡಿಯುವ ನೀರಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ತಾಲ್ಲೂಕಿನ ಕಸಬಾ ಹೋಬಳಿಗೆ ಇಂದಿರಾ ಗಾಂದಿ ವಸತಿ ಶಾಲೆ, ದಂಡಿನಶಿವರ ಹೋಬಳಿಗೆ ಡಾ.ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಸಿ.ಎಸ್.ಪುರ ಹೋಬಳಿಗೆ ಮೊರಾರ್ಜಿ ವಸತಿ ಶಾಲೆ ಮುಂಜೂರು ಮಾಡಿಸಲಾಗುವುದು. ಹಲವು ಗ್ರಾಮಗಳಲ್ಲಿ ಮಾಡಿರುವ ಕಾಂಕ್ರೇಟ್ ರಸ್ತೆಗಳು ಕಳಪೆಯಾಗಿದ್ದು ಅವುಗಳ ತನಿಖೆ ಮಾಡಿಸಲಾಗುವುದು ಎಂದರು.
ಇದೇ ವೇಳೆ ತಾಲ್ಲೂಕು ಗುತ್ತಿಗೆದಾರರ ಸಂಘದ ವತಿಯಿಂದ ಚಿನ್ನದ ಉಂಗುರ ತೊಡಿಸಿ ಬೃಹತ್ ಹಾರ, ಮೈಸೂರು ಪೇಟ ಹಾಕಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ದೊಡ್ಡೇಗೌಡ ಮುಖಂಡರಾದ ಶಂಕರೇಗೌಡ, ಕಲ್ಲಬೋರನಹಳ್ಳಿ ಜಯರಾಮ್, ಭೂವನಹಳ್ಳಿ ಬಿ.ಎಸ್.ದೇವರಾಜು, ದೊಡ್ಡಾಘಟ್ಟಚಂದ್ರೇಶ್, ವೆಂಕಟಾಪುರ ಯೋಗೀಶ್, ಎ.ಬಿ.ಜಗದೀಶ್, ಬಡಗರಹಳ್ಳಿ ತ್ಯಾಗರಾಜು, ಶರತ್ ಕುಮಾರ್, ನಂಜೇಗೌಡ, ತಿಮ್ಮೇಗೌಡ, ರೇಣಕಪ್ಪ, ವೆಂಕಟೇಶ್, ಜಯಗಿರಿಸುಂದರ್, ಬಾಬು, ಸೋಮಣ್ಣ, ರಾಮಕೃಷ್ಣ, ದಂಡಿನಶಿವರ ರಾಜಕುಮಾರ್, ಎನ್.ಆರ್.ಸುರೇಶ್, ಆರ್.ಮಲ್ಲಿಕಾರ್ಜುನ್, ಪ್ರಕಾಶ್, ಶಿವಾನಂದ, ಬಸವರಾಜು, ರಾಘು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.