ತುಮಕೂರು: ಸರ್ಕಾರಿ ಅಧಿಕಾರಿಗಳು ಕಚೇರಿ ಬಿಟ್ಟು ಜನರ ಮನೆಗೆ ಬಳಿಗೆ ತೆರಳಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಶ್ರೇಣಿ ನ್ಯಾಯಾಧೀಶೆ ನೂರುನ್ನೀಸಾ ಹೇಳಿದರು.
ನಗರದ ಸುಫಿಯಾ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.
ಪಿಡಿಒ, ಪಂಚಾಯತ್ ಅಧಿಕಾರಿಗಳು ಜನರ ಬಳಿಗೆ ಭೇಟಿ ನೀಡದಿರುವುದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಳ್ಳಿ ಭೇಟೆ ವೇಳೆ ಗಮನಕ್ಕೆ ಬಂದಿದೆ. ಹೀಗಾಗಬಾರದು, ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದೇ ಕೆಲಸ ಅಲ್ಲ. ಜನರ ಬಳಿಗೆ ಹೋಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೆಲವು ಹಳ್ಳಿಗಳ ಪ್ರತಿ ಮನೆ ಮನೆಗೆ, ಕೇರಿಕೇರಿಗೆ ಭೇಟಿ ನೀಡಿದ್ದೇವೆ. ಸುಫಿಯಾ ಕಾನೂನು ಕಾಲೇಜಿನ ಮಕ್ಕಳು ಸಹ ಕಾನೂನು ಸೇವಾ ಪ್ರಾಧಿಕಾರದ ಜತೆ ಕೆಲಸ ಮಾಡುತ್ತಿದ್ದಾರೆ ಎಂದರು.
ನೆರೆ ಹೊರೆಯವರ ಹಕ್ಕುಗಳ ರಕ್ಷಣೆ ಸಹ ಮುಖ್ಯ. ಇನ್ನೊಬ್ಬರ ಹಕ್ಕುಗಳನ್ನು ದಮನ ಮಾಡಬಾರದು. ಎಲ್ಲರೂ ಸ್ವಾತಂತ್ರ್ಯ ಅನುಭವಿಸಬೇಕು. ಆದರೆ ಅದು ಸ್ವೇಚ್ಛಾಚಾರ ಆಗಬಾರದು ಎಂದರು.
ಮಾನವ ಹಕ್ಕುಗಳ ಆಯೋಗ ಅತ್ಯಂತ ದಕ್ಷವಾಗಿದೆ. ನಿರ್ಭೀತವಾಗಿ ಕೆಲಸ ಮಾಡುತ್ತಿದೆ ಎಂದರು.
ಬೇರೊಬ್ಬರ ಹಕ್ಕುಗಳನ್ನು ಮೊಟುಕುಗೊಳಿಸಲು ಯಾರಿಗೂ ಹಕ್ಕು ಇಲ್ಲ. ಆಯೋಗವು ಪ್ರತಿ ಜಿಲ್ಲೆಗೆ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ಜನರಿಗೆ ನ್ಯಾಯಾಂಗ ಇಲಾಖೆ ಮೇಲೆ ಇನ್ನೂ ಗೌರವ ಉಳಿದಿದೆ. ಆ ಘನತೆಯನ್ನು ಕಾಪಾಡುವ ಕೆಲಸವನ್ನು ವಕೀಲರು, ನ್ಯಾಯಾಂಗ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ನಾವು ಬಡವರು, ನಮಗೆ ಇಂಗ್ಲಿಷ್ ಬರೋಲ್ಲ, ನಮ್ಮ ಕುಟುಂಬ ಬಡತನದ್ದು ಎಂಬ ದೌರ್ಬಲ್ಯ ದಿಂದ ಹೊರಬನ್ನಿ. ಪಾಸಿಟಿವ್ ಬೆಳೆಸಿಕೊಳ್ಳಿ ಎಂದು ಹೇಳಿದರು.
ನ್ಯಾಯಾಧೀಶರ ಪರೀಕ್ಷೆಯನ್ನು ಬರೆಯಿರಿ. ನೀವು ಪ್ರಯತ್ನಪಟ್ಟರೆ ಎಲ್ಲರೂ ಯಶಸ್ವಿಯಾಗುತ್ತೀರಿ ಎಂದರು.
ಹಿರಿಯ ಪತ್ರಕರ್ತ ಸಾ.ಚಿ.ರಾಜ್ ಕುಮಾರ್ ಮಾತನಾಡಿ, ವರದಕ್ಷಿಣೆ ವಿರೋಧಿ ವೇದಿಕೆ ಆರಂಭವಾಗಿದ್ದೆ ಕಾನೂನು ಕಾಲೇಜಿನಲ್ಲಿ. ಒಂದು ಮಹಿಳೆಯ ಸಾವು ಖಂಡಿಸಿ ವೇದಿಕೆ ಆರಂಭವಾಯಿತು. ತುಮಕೂರು ಹಳ್ಳಿ ಹಳ್ಳಿಗಳಿಗೂ ವೇದಿಕೆ ಹೋಗಿದೆ ಎಂದರು.
ಸಮಾನತೆ, ಸ್ವಾತಂತ್ರ್ಯ, ಘನತೆಯಿಂದ ಜೀವಿಸುವ ಹಕ್ಕು ಇದೆ. ಸುಪ್ರೀಂಕೋರ್ಟ್, ಮಾನವ ಹಕ್ಕು ಆಯೋಗ ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಈ ದಿನ ಎಲ್ಲ ಕಾನೂನುಗಳು ಬಂದಿರುವುದು ಸಂಘಟನೆಗಳಿಂದ ಎಂದರು.
ಇಂದು ನಾವು ತುಂಬಾ ಕಷ್ಟದ ದಿನಗಳಲ್ಲಿ ಇದ್ದೇವೆ. ವೀರಪ್ಪನ ಕಾಲಘಟ್ಟದಲ್ಲಿ ಎಸ್ ಟಿಎಫ್ ಮಾಡಿದ ದೌರ್ಜನ್ಯ ಗಳನ್ನು ಸಂಘಟನೆಗಳು ಬಯಲು ಮಾಡಿದವು. ಆಗ ಜನರ ನೆರವಿಗೆ ಬಂದಿದ್ದು ಮಾನವ ಹಕ್ಕುಗಳ ಆಯೋಗ. 83 ಮಹಿಳೆಯರಿಗೆ ನ್ಯಾಯ ಸಿಕ್ಕಿತು ಎಂದರು.
ಮಾನವ ಹಕ್ಕುಗಳ ಪರಿಕಲ್ಪನೆಯಿಂದಲೇ ಇಂದು ಬಡವರ ಬಾಯಿಗೆ ಅನ್ನ ಸಿಗುತ್ತಿದೆ. ಅವಳ ಹಕ್ಕುಗಳು ಈ ದೇಶದಲ್ಲಿ ಹೆಚ್ಚು ಉಲ್ಲಂಘನೆಯಾಗುತ್ತಿವೆ. ಹೀಗಾಗಿಯೇ ಅವರ ಬಗ್ಗೆ ಹೆಚ್ಚು ಮಾತನಾಡಬೇಕಾಗಿದೆ ಎಂದು ತಿಳಿಸಿದರು.
ಕಾನೂನು ಕಾಲೇಜಿನ ಸಿ ಇ ಒ ಸುಫಿಯಾ, ಪ್ರಾಂಶುಪಾಲರಾದ ಡಾ.ಎಸ್.ರಮೇಶ್, ಸಿದ್ಧಾರ್ಥ ಮಾಧ್ಯಮ ಕೇಂದ್ರದ ನಿರ್ದೇಶಕ ಡಾ. ಮುದ್ದೇಶ್, ಉಪ ಪ್ರಾಂಶುಪಾಲ ಟಿ.ಓಬಯ್ಯ, ಕಾಲೇಜಿನ ಅಧೀಕ್ಷರಾದ ಜಗದೀಶ್, ಸಹ ಪ್ರಾಧ್ಯಾಪಕರಾದ ಮಮತಾ, ಸಿ.ಕೆ.ಮಹೇಂದ್ರ ಇತರರು ಇದ್ದರು.
ಇತರರು ಇದ್ದರು.