ಜಸ್ಟ್ ನ್ಯೂಸ್ರಾಜ್ಯ

ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಪ್ರಥಮ್ ಬುಕ್ಸ್ ನಿಂದ ‘ಒಂದು ದಿನ, ಒಂದು ಕತೆ’

Publicstory. in


ಬೆಂಗಳೂರು: ಮಕ್ಕಳಿಗೆ ಓದಿನ ಸಂಭ್ರಮವನ್ನು ಕೈಗೆಟಕಿಸುವ ನಿಟ್ಟಿನಲ್ಲಿ ಪ್ರಥಮ್ ಬುಕ್ಸ್ ಪ್ರತಿ ವರ್ಷದಂತೆ ಈ ಬಾರಿಯೂ ‘ಒಂದು ದಿನ ಒಂದು ಕತೆ’ ಎಂಬ ವಾರ್ಷಿಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇದು ಅದರ ಒಂಭತ್ತನೇ ಆವೃತ್ತಿ. ಕೋವಿಡ್ -19 ಕಾರಣದಿಂದಾಗಿ ಮಕ್ಕಳು ಮನೆಯಲ್ಲಿ ಉಳಿಯಬೇಕಾಗಿ ಬಂದಿರುವುದರಿಂದ ಈ ಬಾರಿ ಓದು ಮತ್ತು ಕತೆ ಹೇಳುವಿಕೆಯನ್ನು ಇನ್ನೂ ಹೆಚ್ಚು ಸಂತಸಮಯವಾಗಿ ಇರುವಂತೆ ಮಾಡುವತ್ತ ‘ಒಂದು ದಿನ ಒಂದು ಕತೆ’ ಕಾರ್ಯಕ್ರಮವನ್ನು ಪುನರ್ ವಿನ್ಯಾಸ ಮಾಡಲಾಗಿದೆ.

ಈ ಬಾರಿ ಇಡೀ ಪ್ರಚಾರ ಕಾರ್ಯಕ್ರಮ ಆನ್ ಲೈನ್ ಆಗಿರುವುದರಿಂದ ಕತೆ ಹೇಳಲು ಸೈಫ್ ಅಲಿ ಖಾನ್, ಮಾಧುರಿ ದೀಕ್ಷಿತ್, ಬಿಪಾಶಾ ಬಸು, ಸೋನಾಕ್ಷಿ ಸಿನ್ಹಾ ರಿಂದ ಹಿಡಿದು ತಿಲೋತ್ತಮಾ ಶೋಮ್, ಜಾನ್ಹವಿ ಕಪೂರ್, ಅಥಿಯಾ ಶೆಟ್ಟಿ, ಶೋಭಿತಾ ಧುಲಿಪಲ, ಮಿಥಿಲಾ ಪಾಲ್ಕರ್ ರಂತಹ ಹೆಸರಾಂತ ಗಣ್ಯರು ಈ ಕತೆ ಹೇಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗೆ ಕತೆ ಹೇಳುವುದಕ್ಕಾಗಿ ಪ್ರಖ್ಯಾತರು ತಮ್ಮ ಸಮಯ ಹಾಗು ದನಿಯನ್ನು ನೀಡಿದ್ದಾರೆ.

‘ಈ ಒಂದು ದಿನ ಒಂದು’ ಕತೆ ಕಾರ್ಯಕ್ರಮದಲ್ಲಿ ಭಾರತ ಹಾಗೂ ಜಗತ್ತಿನಾದ್ಯಂತ ಕತೆ ಹೇಳುವ ಚಾಂಪಿಯನ್ ಗಳು ಝೂಮ್ ಮೂಲಕ ಮಕ್ಕಳೊಂದಿಗೆ ಕತೆ ಹೇಳುವ ಗೋಷ್ಟಿಯನ್ನು ನಡೆಸುತ್ತಾರೆ. ವ್ಯಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕತೆಗಳನ್ನು ಹಂಚಿಕೊಳ್ಳುತ್ತಾರೆ. ಭಾರತದ ಎಲ್ಲೆಡೆ ಇರುವ ಮಕ್ಕಳಿಗೆ ‘ಗ್ರಾಮವಾಣಿ’ಯಂತಹ ಸಮುದಾಯ ರೇಡಿಯೊ ಕೇಂದ್ರಗಳ ಮೂಲಕ ಕತೆಗಳು ತಲುಪಲಿವೆ.

ಸೆಪ್ಟೆಂಬರ್ 8ರಂದು ಮತ್ತು ಆ ಸುತ್ತಮುತ್ತ 1500 ಚಾಂಪಿಯನ್ ಗಳು 28ಕ್ಕೂ ಹೆಚ್ಚು ಭಾಷೆಗಳಲ್ಲಿ, 25 ಸಾವಿರ ಮಕ್ಕಳಿಗೆ ಕಥಾ ಗೋಷ್ಟಿಗಳನ್ನು ನಡೆಸಿಕೊಡಲಿದ್ದಾರೆ.

ಕೋವಿಡ್ -19 ಕಾರಣದಿಂದಾಗಿ 2020 ಪ್ರತಿಯೊಬ್ಬರಿಗೂ ಕೂಡ ಭಿನ್ನ ಹಾಗೂ ಕಷ್ಟದಾಯಕವಾಗಿದೆ. ಅದರಲ್ಲಿಯೂ ಶಾಲೆಗಳು ಮುಚ್ಚಿರಲೇಬೇಕಾದ ಕಾರಣದಿಂದಾಗಿ ಬಹುತೇಕ ಎಲ್ಲ ಮಕ್ಕಳೂ ಶಾಲೆಗೆ ಹೋಗಲಾಗದೆ, ಗೆಳೆಯರೊಂದಿಗೆ ಆಟವಾಡದಂತಾಗಿದ್ದಾರೆ. ಈ ಕಾರಣದಿಂದಾಗಿ ಪ್ರಥಮ್ ಬುಕ್ಸ್ ಈ ಬಾರಿ ಈ ಏರು ಪೇರಿನ ಸಮಯವನ್ನು ಸಲೀಸಾಗಿ ದಾಟಲು ‘ಒಂದು ದಿನ ಒಂದು ಕತೆ’ ಕಾರ್ಯಕ್ರಮದಲ್ಲಿ ಪ್ರಥಮ್ ಬುಕ್ಸ್ ನ ಎರಡು ಕತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ವಿನಾಯಕ್ ವರ್ಮಾ ಬರೆದು ಚಿತ್ರ ಬಿಡಿಸಿರುವ ‘ಸಿಟ್ಟಿನ ಅಕ್ಕು’ ಹಾಗೂ ಮೀರಾ ಗಣಪತಿ ಬರೆದು ರೋಶ್ ಚಿತ್ರ ಬಿಡಿಸಿರುವ ‘ನಗು ತಡೆಯದ ಸುಂದರಿ’ ಇವೇ ಆ ಎರಡು ಕತೆಗಳು.

ಸಿಟ್ಟಿನ ಅಕ್ಕು ಕತೆಯಲ್ಲಿ ಅಕ್ಕು ನಿಜಕ್ಕೂ ಕೆಟ್ಟ ದಿನ ಮತ್ತು ಮೂಡ್ ನಲ್ಲಿದ್ದಾಳೆ. ತನ್ನ ತಂದೆಯ ಸಹಾಯದಿಂದ ಆಕೆ ತನ್ನ ಕೋಪದ ಜೊತೆಗೆ ಹೇಗೆ ಏಗಬೇಕು ಎನ್ನುವುದನ್ನು ಕಲಿತಿದ್ದಾಳೆ. ಸಿಟ್ಟಿನ ಅಕ್ಕು ಇಪ್ಪತ್ತು ಭಾಷೆಗಳಲ್ಲಿ ಲಭ್ಯವಿದ್ದು ಮಕ್ಕಳು ಕೋಪ ಮತ್ತು ಹತಾಶೆಯಂತಹ ನಕಾರಾತ್ಮಕ ಮನಸ್ಥಿತಿಯನ್ನು ಅರಿಯಲು ಸಹಾಯ ಮಾಡುತ್ತದೆ.

‘ನಗು ತಡೆಯದ ಸುಂದರಿ’ಯಲ್ಲಿ ಟಿ ಸುಂದರಿ ಎಂಬ ಪುಟ್ಟ ಹುಡುಗಿ ನಗುವನ್ನು ತಡೆಯಲು ಸಾಧ್ಯವಾಗದ ಒಂದೇ ಕಾರಣಕ್ಕಾಗಿ ಆಗೀಗ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾಳೆ. ನನ್ನಲ್ಲೇ ಏನೋ ಸಮಸ್ಯೆ ಇದೆಯೆ ಎಂದು ಅವಳು ಅಚ್ಚರಿಗೊಳ್ಳುತ್ತಾಳೆ. ಆದರೆ ತಕ್ಷಣದಲ್ಲಿಯೇ ನಗು ಎನ್ನುವುದು ನಿಜಕ್ಕೂ ಒಂದು ಅತ್ಯುತ್ತಮ ಔಷಧಿ ಎನ್ನುವುದನ್ನು ಕಂಡುಕೊಳ್ಳುತ್ತಾಳೆ. ನಗು ತಡೆಯದ ಸುಂದರಿ 11 ಭಾಷೆಗಳಲ್ಲಿ ಲಭ್ಯವಿದೆ.

‘ಒಂದು ದಿನ ಒಂದು ಕತೆ’ ಕಾರ್ಯಕ್ರಮ ಓದುವ ಖುಷಿಯನ್ನು ಹಂಚುವುದಕ್ಕಾಗಿ ಇರುವ ಕಾರ್ಯಕ್ರಮ. ಈ ಬಾರಿ ನಾವು ಆಯ್ಕೆ ಮಾಡಿರುವ ಎರಡೂ ಕತೆಗಳು ಎಲ್ಲೆಡೆ ಇರುವ ಮಕ್ಕಳಲ್ಲಿ ಸಂತಸ, ಹಾಗೂ ಹರ್ಷವನ್ನು ಉಂಟು ಮಾಡುತ್ತವೆ ಹಾಗೂ ನಿಜಕ್ಕೂ ಅತ್ಯಂತ ಕಷ್ಟಕರವಾಗಿರುವ ವರ್ಷವನ್ನು ದಾಟಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಆಶಾ ಭಾವನೆ ಉಂಟು ಮಾಡುತ್ತದೆ.
– ಸುಝೇನ್ ಸಿಂಘ್, ಮುಖ್ಯಸ್ಥೆ, ಪ್ರಥಮ್ ಬುಕ್ಸ್

ಪ್ರಥಮ್‌ ಬುಕ್ಸ್‌ ಬಗ್ಗೆ
ಪ್ರಥಮ್‌ ಬುಕ್ಸ್‌ ಲಾಭಾಪೇಕ್ಷೆ ಇಲ್ಲದ ಮಕ್ಕಳ ಪ್ರಕಾಶನ ಸಂಸ್ಥೆಯಾಗಿದ್ದು, ೨೦೦೪ರಲ್ಲಿ ಪ್ರತಿ ಮಗುವಿನ ಕೈಯಲ್ಲೊಂದು ಪುಸ್ತಕ ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಾಪನೆಗೊಂಡಿತು. ಪ್ರಮುಖವಾಗಿ ಗುಣಮಟ್ಟದ ಮಕ್ಕಳ ಕತೆ ಪುಸ್ತಕಗಳನ್ನು ಬಹುಭಾಷೆಗಳಲ್ಲಿ ಕಡಿಮೆ ಬೆಲೆಯಲ್ಲಿ ಕೈಗೆಟಕುವಂತೆ ಮಾಡುವುದು, ಈ ಮೂಲಕ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಉತ್ತೇಜಿಸುವುದು ಇದರ ಉದ್ದೇಶ. ಆರಂಭದಿಂಧ ಈವರೆಗ ೨೨ ಸಾವಿರ ಭಾಷೆಗಳಲ್ಲಿ ೪೦೦೦ ಕೂ ಹೆಚ್ಚು ಪುಸ್ತಕಗಳನ್ನು ಪ್ರಥಮ್‌ ಬುಕ್ಸ್‌ ಪ್ರಕಟಿಸಿದೆ.
ಪುಟಾಣಿಗಳಿಗಾಗಿ ಪುಸ್ತಕಗಳನ್ನು ಒಳಗೊಂಡಂತೆ, ಕತೆ, ಕಾಲ್ಪನಿಕ ಕತೆ, ವಿಜ್ಞಾನ, ಇತಿಹಾಸ, ಗಣಿತ ಮತ್ತು ಪರಿಸರಕ್ಕೆ ಸಂಬಂದಿಸಿದ ಕತೆಗಳನ್ನು ಈ ಪುಸ್ತಕಗಳ ಮೂಲಕ ಹೇಳಲಾಗುತ್ತಿದೆ. ಪ್ರಥಮ್‌ ಬುಕ್ಸ್‌ ಇಂತಹ ಪುಸ್ತಗಳಿಗಾಇ ಪ್ರಖ್ಯಾತ ಲೇಖಕರು ಹಾಗೂ ಚಿತ್ರಕಾರರೊಂದಿಗೆ ಕೆಲಸ ಮಾಡಿದ್ದು, ಅವರ ಹಲವು ಪುಸ್ತಕಗಳು ಪ್ರಶಸ್ತಿಗಳನ್ನು ಪಡೆದಿವೆ.
ತಂತ್ರಜ್ಞಾನದ ಶಕ್ತಿಯನ್ನು ಮನಗಂಡ ಪ್ರಥಮ್‌ ಬುಕ್ಸ್‌, ಸ್ಟೋರಿವೀವರ್‌ (www.storyweaver.org.in) ಎಂಬ ಡಿಜಿಟಲ್‌ ಜಾಲತಾಣವನ್ನು ಲೋಕಾರ್ಪಣೆ ಮಾಡಿತು. ಈ ಮೂಲಕ ಸಹಸ್ರಾರು ಬಹುಭಾಷೀಯ ಕತೆ ಪುಸ್ತಕಗಳನ್ನು ಉಚಿತವಾಗಿ ಯಾರು ಬೇಕಾದರೂ ನೋಡುವ, ಓದುವ ಸೌಲಭ್ಯ ಒದಗಿಸಿತು. ಡೊನೇಟ್‌ ಎ ಬುಕ್‌ (www.donateabook.org.in), ಎಂಬ ಕ್ರೌಡ್‌ ಫಂಡಿಂಗ್‌ ವೇದಿಕೆಯಿಂದ ದಾನಿಗಳ ನೆರವು ಪಡೆದು ಓದಿನ ಆಕರಗಳಿಲ್ಲದ ಮಕ್ಕಳಿಗಾಗಿ ಈ ಪುಸ್ತಕಗಳನ್ನು ತಲುಪಿಸುವ, ಲೈಬ್ರರಿ ವ್ಯವಸ್ಥೆಯನ್ನೂ ಕಲ್ಪಿಸುತ್ತಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸ
saba@prathambooks.org
+91-74813-24777

Comment here