ತುಮಕೂರು ಲೈವ್

ಅಗ್ನಿವೀರ ಸೈನಿಕರಿಗೆ ನಾಲ್ಕು ವರ್ಷಗಳಿಗೆ ನಿವೃತ್ತಿಯಾದರೆ ರಾಜಕಾರಣಿಗಳಿಗೆ ಬೇಡವೆ? :ಜಿಲ್ಲಾ ಎಎಪಿ ಪ್ರಶ್ನೆ

Publicstory


ತುಮಕೂರು: ರಕ್ಷಣಾ ಪಡೆಗಳಲ್ಲಿ ‘ಅಗ್ನಿಪಥ’ಯೋಜನೆಯಡಿಯಲ್ಲಿ ಸೈನಿಕರನ್ನು ಕೇವಲ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವುದಾದರೆ ಪ್ರಧಾನಮಂತ್ರಿ, ಮುಖ್ಯಮಂತ್ರಿ,ಮಂತ್ರಿಗಳು ಹಾಗೂ ಸಂಸದ-ಶಾಸಕರಿಗೂ ನಾಲ್ಕೈದು ವರ್ಷಗಳ ಸೀಮಿತ ಅವಧಿ ನಿಗಧಿಪಡಿಸುವ ಕಾನೂನು ಜಾರಿಗೊಳಿಸಲಿ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಅಧ್ಯಕ್ಷ ಡಾ.ವಿಶ್ವನಾಥ್ ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಅನೇಕ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ಹಣ, ಹೆಂಡ, ಖಂಡ ಹಂಚಿ ಚುನಾವಣೆಯಲ್ಲಿ ಗೆದ್ದು ಸಾಯುವವರೆಗೂ ಅಧಿಕಾರದಲ್ಲಿ ಮೆರೆಯುತಿದ್ದಾರೆ. ಮೊದಲು ಅಂತಹ ಭ್ರಷ್ಟ ಜನಪ್ರತಿನಿಧಿಗಳು ಚುನಾವಣೆಗೇ ಸ್ಪರ್ಧಿಸದಂತಹ ಕಾನೂನು ಜಾರಿಗೊಳಿಸುವ ತುರ್ತು ಅಗತ್ಯವಿದೆ ಎಂದು ಡಾ.ವಿಶ್ವನಾಥ್ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.
ಸೇನೆಯಲ್ಲಿ ‘ಅಗ್ನಿವೀರ’ರನ್ನು ಕೇವಲ ನಾಲ್ಕು ವರ್ಷ ದುಡಿಸಿಕೊಂಡು ನಂತರ ಅವರನ್ನು ಕೈಬಿಡುವುದಾದರೆ ಅದೇ ‘ಅಗ್ನಿ ವೀರ’ರು ಮುಂದೆ ನಿರುದ್ಯೋಗಿಗಳಾಗಿ ದೇಶಕ್ಕೆ, ಸಮಾಜಕ್ಕೆ ಬೆಂಕಿ ಹಚ್ಚುವ ‘ಬೆಂಕಿ ವೀರ’ರಾಗುವ ಭವಿಷ್ಯದ ಅಪಾಯವನ್ನು ಕೇಂದ್ರ ಸರ್ಕಾರವೇ ನಿರ್ಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ನಾಲ್ಕು ವರ್ಷಗಳ ನಂತರ ನಿರುದ್ಯೋಗಿಗಳಾಗುವ ಸೈನಿಕರನ್ನು ‘ಅಗ್ನಿ ವೀರರು’ ಎಂದು ಸಂಬೋಧಿಸುತ್ತಿರುವುದೇ ರಾಷ್ಟ್ರ ರಕ್ಷಣೆಯಂತಹ ಮಹತ್ವದ ವಿಷಯದಲ್ಲಿ ಕೇಂದ್ರ ಸರ್ಕಾರದ ಸಂವೇದನೆ ಇಲ್ಲದ ಅಪಾಯಕಾರಿ ನಡೆಯಾಗಿದೆ ಎಂದಿದ್ದಾರೆ.

ದೇಶದ ಬೆನ್ನೆಲುಬಾಗಿದ್ದ ರೈತರು ಬದಲಾದ ಕಾನೂನುಗಳಿಂದ ಈಗಾಗಲೇ ತಮ್ಮ ಜಮೀನುಗಳನ್ನು ಉದ್ಯಮಿಗಳಿಗೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರಿಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇನ್ನು ಅವರ ಮಕ್ಕಳು ನಾಲ್ಕು ವರ್ಷಗಳ ನಂತರ ‘ಅಗ್ನಿ ವೀರ’ರಾಗಿ ನಿರುದ್ಯೋಗಿಗಳಾಗಲಿದ್ದಾರೆ. ಆಗ ದೇಶದ ಒಳಗಿನ ಕಿಚ್ಚೇ ದೇಶವನ್ನು ಸುಡುವ ಭವಿಷ್ಯವನ್ನು ಮನುವಾದಿ ಬಿಜೆಪಿ ಬರೆಯುತ್ತಿದೆ. ಇಂತಹ ಭವಿಷ್ಯದ ಅಪಾಯವನ್ನು ಮನಗಂಡು ರೈತರು, ಯುವಕರು ಹಾಗೂ ಎಲ್ಲಾ ರೀತಿಯ ಶ್ರೀಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ್ ಮನವಿ ಮಾಡಿದ್ದಾರೆ.

Comment here