Thursday, March 28, 2024
Google search engine
Homeಸಾಹಿತ್ಯ ಸಂವಾದಅಂತರಾಳಎಲ್ಲಿ ಹೋದಿರಿ ತೇಜಸ್ವಿ…?

ಎಲ್ಲಿ ಹೋದಿರಿ ತೇಜಸ್ವಿ…?

ಜಿ.ಎನ್.ಮೋಹನ್


ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ’ ಎಂದೆ.

ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು.

ನಾನು ಮಾತು ಮುಂದುವರಿಸಿದೆ.

‘ಪತ್ರಿಕೆ ಎನ್ನುವುದು ಸಮಾಜದ ಸೇತುವೆ. ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಇರುವ ಊರುಗೋಲು. ಅದು ಕೋಲಾದಂತೆ, ಚಿಪ್ಸ್ ನಂತೆ, ಟೂಥ್ ಪೇಸ್ಟ್ ನಂತೆ ಬಳಸಿ ಎಸೆಯುವ ವಸ್ತುವಲ್ಲ’.

ಅದು ಸಂದೇಶ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ. ಸಂದೇಶ ಮಾಧ್ಯಮ ಪ್ರತಿಷ್ಠಾನ ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಸಮಾರಂಭ.

ಆ ವರ್ಷ ತೇಜಸ್ವಿ, ಜಿ ಎಸ್ ಸದಾಶಿವ ಇದ್ದರು. ಪತ್ರಿಕೋದ್ಯಮದಲ್ಲಿದ್ದ ಎಳೆಯರನ್ನು ಗುರುತಿಸಿದ ಪಟ್ಟಿಯಲ್ಲಿ ನಾನಿದ್ದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ನಮ್ಮ ಮುಂದೆ ಇದ್ದದ್ದು ಎರಡು ನಿಮಿಷಗಳು ಮಾತ್ರ. ಅಷ್ಟರಲ್ಲಿ ನಾನು ಮಾತನಾಡಿದ್ದು ಇಷ್ಟು.

ಸಮಾರಂಭ ಮುಗಿದು ಗ್ರೂಪ್ ಫೋಟೋಗೆ ಪೋಸ್ ನೀಡಿ ಇನ್ನೂ ಕೆಳಗಿಳಿದಿರಲಿಲ್ಲ. ತೇಜಸ್ವಿ ನನ್ನತ್ತ ಬಂದರು ಕೈ ಹಿಡಿದು ಅದುಮಿದರು ಅವರ ಕಣ್ಣುಗಳಲ್ಲಿ ಪ್ರೀತಿಯ ಒರತೆ.

‘ಹೌದು ಮಾಧ್ಯಮ ಖಂಡಿತಾ ಬಳಸಿ ಬಿಸಾಡುವ ವಸ್ತುವಲ್ಲ’ ಎಂದರು. ಅವರ ಕೈನ ಆ ಬಿಸುಪು ಈಗಲೂ ನನ್ನೊಳಗೆ ಹಾಗೇ ಉಳಿದಿದೆ.

ನಾನು ತೇಜಸ್ವಿ ಲೋಕದಲ್ಲಿ ಸೇರಿಹೋದೆ ಎಂದರೆ ಯಾರಾದರೂ ನಕ್ಕಾರು. ಯಾಕೆಂದರೆ ತೇಜಸ್ವಿ ಎಂಬ ಜಗತ್ತಿನಲ್ಲಿ ಸೇರಿ ಹೋಗದಿದ್ದವರಾರು?

ತೇಜಸ್ವಿಯತ್ತ ಹೇಗೆ ಜನ ಮುಗಿಬಿದ್ದು ಬಂದರೋ ಅದೇ ರೀತಿ ತೇಜಸ್ವಿ ಸಹಾ ಮುಗಿಬಿದ್ದು ತಮ್ಮ ಲೋಕವನ್ನು ಜನರ ಎದೆ ಹೊಲದೊಳಗೆ ನಡೆಸಿಕೊಂಡುಬಂದುಬಿಟ್ಟರು.

ತೇಜಸ್ವಿ ಗೊತ್ತಿರುವ ಪ್ರತಿಯೊಬ್ಬರಿಗೂ ರಾಜೇಶ್ವರಿ ಗೊತ್ತು. ಸುಸ್ಮಿತಾ, ಈಶಾನ್ಯೆ ಗೊತ್ತು.

ತೇಜಸ್ವಿ ಕುಟುಂಬ ಮಾತ್ರವಲ್ಲ ಅವರ ಗೆಳೆಯರ ಗುಂಪೂ ಗೊತ್ತು. ಅವರ ಜೊತೆ ಗಾಳ ಹಿಡಿದು ನಡೆದವರು ಗೊತ್ತು, ಅವರ ಸ್ಕೂಟರ್ ರಿಪೇರಿ ಮಾಡಿದವರು ಗೊತ್ತು. ಅವರಿಗೆ ನ್ಯೂಸ್ ಪೇಪರ್ ಕೊಡುತ್ತಿದ್ದವರು ಗೊತ್ತು.

ಅವರೆಲ್ಲಾ ಗೊತ್ತಿಲ್ಲದೆಯೂ ಇರಬಹುದೇನೋ? ಆದರೆ ಆ ಕುಬಿ, ಆ ಇಯಾಲ, ಕರ್ವಾಲೋ, ಮಂದಣ್ಣ, ಎಂಗ್ಟ, ಕೃಷ್ಣೇಗೌಡ, ಆ ಗಯ್ಯಾಳಿಯರು, ಬಿರಿಯಾನಿ ಕರಿಯಪ್ಪ ಎಲ್ಲರೂ ಗೊತ್ತು.

ನನಗೆ ಈಗಲೂ ವಿಸ್ಮಯ ತೇಜಸ್ವಿ ಆ ಮ್ಯಾಜಿಕ್ ಸಾಧಿಸಿದ್ದು ಹೇಗೆ?

‘ತೇಜಸ್ವಿ ಇನ್ನಿಲ್ಲ’ ಎಂಬ ಸುದ್ದಿ ಬಂದಾಗ ಸೂರ್ಯ ಇನ್ನೂ ಬಾಡಿರಲಿಲ್ಲ. ಆದರೂ ಒಂದು ಕಾರ್ಮೋಡ ಧುತ್ತನೆ ಎಲ್ಲಿಂದಲೋ ಎದ್ದು ತೇಜಸ್ಸನ್ನು ನುಂಗಿ ಹಾಕಿದ ಅನುಭವ.

ಎದೆ ಭಾರವಾಗಿ ಹೋಗಿತ್ತು.

ನಾನು ಆಗ ‘ಈಟಿವಿ’ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದೆ. ಎದೆಯೊಳಗೆ ಅಳಲು ಇದ್ದರೂ ದಿಢೀರನೆ ರಂಗಕ್ಕೆ ಧುಮುಕಲೇಬೇಕಾದ ಅನಿವಾರ್ಯತೆ.

ತೇಜಸ್ವಿ ಇಲ್ಲ ಎನ್ನುವ ಸುದ್ದಿ ಗೊತ್ತಾಗುತ್ತಾ ಹೋದಂತೆ ಒಬ್ಬೊಬ್ಬರೇ ನಾನಿದ್ದ ಕಡೆಗೆ ನಡೆದು ಬಂದರು.

ಕೆಲ ಕ್ಷಣಗಳಲ್ಲಿ ನೋಡುತ್ತೇನೆ ಅಲ್ಲಿದ್ದವರು ಸಂಪಾದಕೀಯ ವಿಭಾಗದವರು ಮಾತ್ರವಲ್ಲ, ಐ ಟಿ ತಂಡದವರು, ಕ್ಯಾಮೆರಾಮನ್ ಗಳು, ಸಂಕಲನಕಾರರು ಕೊನೆಗೆ ನಮ್ಮ ರಿಸೆಪ್ಶನಿಸ್ಟ್.. ಎಲ್ಲರೂ ಸೇರುತ್ತಲೇ ಇದ್ದರು.

ಹೌದಲ್ಲಾ ಈ ಎಲ್ಲರೊಳಗೂ ತೇಜಸ್ವಿ ಹರಡಿ ಹೋಗಿದ್ದು ಹೇಗೆ?

ಆ ಒಂದು ಕಾಲದಲ್ಲಿ ನಮ್ಮ ಮನೆಯ ಕಪಾಟಿನ ತುಂಬಾ ಕುವೆಂಪು. ನನ್ನ ಅಣ್ಣ ಗಂಟೆಗಟ್ಟಲೆ ನಡೆದು ಬಸ್ ಚಾರ್ಜ್ ಉಳಿಸಿ ದೊಡ್ಡ ಕ್ಯೂ ನಲ್ಲಿ ನಿಂತು ಕೊಂಡು ತಂದಿದ್ದ ‘ಶ್ರೀ ರಾಮಾಯಣ ದರ್ಶನಂ’ನಿಂದ ಹಿಡಿದು ಒಂದು ಮಹಾ ಕಾವ್ಯದಂತೆಯೇ ಮತ್ತೆ ಮತ್ತೆ ನಾವು ಓದುತ್ತಿದ್ದ ‘ಮಲೆಗಳಲ್ಲಿ ಮದುಮಗಳು’ ‘ಕಾನೂರು ಹೆಗ್ಗಡತಿ’.. ಹೀಗೆ.

ಒಂದಷ್ಟು ವರ್ಷ ಸರಿದುಹೋಯ್ತು. ನೋಡಿದರೆ ನಮಗೆ ಅರಿವಿಲ್ಲದಂತೆ ತೇಜಸ್ವಿ ಅಪ್ಪನ ಪಕ್ಕ ಜಾಗ ಮಾಡಿ ಕುಳಿತುಬಿಟ್ಟಿದ್ದರು.

ತೇಜಸ್ವಿ ನನ್ನೊಳಗೆ ಪ್ರವೇಶಿಸಿದ್ದು ಹೀಗೆ..

ತೇಜಸ್ವಿಯವರನ್ನು ನಾನು ಮೊದಲು ಕಂಡಿದ್ದು ಬಿ ಎ ವಿವೇಕ ರೈ ಅವರ ಮೂಲಕ. ಮಂಗಳ ಗಂಗೋತ್ರಿಯ ಅಂಗಳದಲ್ಲಿ. ಅವರು ಹಮ್ಮಿಕೊಂಡಿದ್ದ ವಿಚಾರ ಸಂಕಿರಣಕ್ಕೆ ತೇಜಸ್ವಿ ತೆರೆ ಎಳೆಯಬೇಕಿತ್ತು.

ಆಗ ತಾನೇ ಪದವಿ ಮುಗಿಸಿದ್ದ ನಾವು ತೇಜಸ್ವಿಯವರನ್ನು ನೋಡಿಯೇಬಿಡೋಣ ಎಂದು ರಾತ್ರೋರಾತ್ರಿ ಮಂಗಳೂರಿನ ಬಸ್ ಹತ್ತಿಬಿಟ್ಟಿದ್ದೆವು.

ಸಂಕಿರಣ ಮುಗಿಯುತ್ತಾ ಬಂದರೂ ತೇಜಸ್ವಿ ಸುಳಿವಿಲ್ಲ.

ಕೈ ಕೊಟ್ಟರು ಎಂದುಕೊಂಡು ಕಟ್ಟಡದ ಹೊರಗೆ ಬಂದರೆ ಆ ಕಲ್ಲು ನೆಲದ ಮೇಲೆ ತೇಜಸ್ವಿ ಆರಾಮವಾಗಿ ಹರಟೆ ಹೊಡೆಯುತ್ತಿದ್ದಾರೆ. ಸುತ್ತ ಒಂದು ದೊಡ್ಡ ಹಿಂಡು. ಮಾತು ಮಾತಿಗೂ ಕುಲು ಕುಲು ನಗುತ್ತಾ ಪಕ್ಕದಲ್ಲಿದ್ದವರಿಗೂ ಆ ಸಾಂಕ್ರಾಮಿಕ ರೋಗವನ್ನು ಹಂಚುತ್ತಾ ತೇಜಸ್ವಿ ಕುಳಿತಿದ್ದರು.

ಒಮ್ಮೆ ಹೀಗೇ ಹುಕಿ ಬಂದು ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ‘ಧೋ’ ಎಂದು ಸುರಿಯುವ ಮಳೆಯಲ್ಲಿ ಪಶ್ಚಿಮ ಘಟ್ಟಗಳನ್ನು ಮಣಿಸಿಯೇಬಿಡಬೇಕು ಎಂದು ನಮ್ಮ ತಂಡ ಹೊರಟಿತ್ತು.

ಕಡಿದಾದ ತಿರುವುಗಳ, ಮೈ ಜುಂ ಎನಿಸುವ ಚಾರ್ಮಾಡಿ ಘಟ್ಟವನ್ನು ಹಿಂದಿಕ್ಕಿ ಅಬ್ಬ ಎಂದು ಉಸಿರೆಳೆದುಕೊಳ್ಳುತ್ತಾ ಪಕ್ಕಕ್ಕೆ ತಿರುಗಿದರೆ ಅರೆ! ತೇಜಸ್ವಿ.

ಮನೆಮಂದಿಯನ್ನೆಲ್ಲ ಒಟ್ಟು ಮಾಡಿಕೊಂಡು ನಮ್ಮಂತೆಯೇ ಅವರೂ ಅದೇ ಘಟ್ಟಕ್ಕೆ ಬಂದು ನಿಂತಿದ್ದಾರೆ. ಕಾಲ ಕೆಳಗೆ ಅಗಾಧವಾಗಿ ಮೈ ಚೆಲ್ಲಿಕೊಂಡಿದ್ದ ಕಾಡನ್ನು ನೋಡುತ್ತಾ..

ತೇಜಸ್ವಿಯವರೊಡನೆ ಮೀನು ಹಿಡಿದು, ಹಂದಿ ಶಿಕಾರಿ ಮಾಡಿ, ಅವರೊಡನೆ ಕ್ಯಾಮೆರಾ ಏರಿಸಿಕೊಂಡು ಹಕ್ಕಿಗಳ ಕ್ಲಿಕ್ಕಿಸಿ, ಬ್ರಶ್ ಹಿಡಿದು ಬಣ್ಣ ಹರಡಿ, ಒಲೆ ಮೇಲೆ ಅನ್ನ ಬೇಯಿಸಿ, ಕಂಪ್ಯೂಟರ್ ಮುಂದೆ ಕೂತು ನಾಳೆಗೆ ಒಂದು ತತ್ರಾಂಶ ರೂಪಿಸಲು ಯತ್ನಿಸಿ..

…ಹೀಗೆ ತೇಜಸ್ವಿ ಮಾಡುತ್ತಿದ್ದ ಯಾವ ಕೆಲಸದಲ್ಲೂ ತಾವು ಹೊರಗೆ ನಿಂತವರಲ್ಲ ಎಂದು ತೇಜಸ್ವಿಯ ಪ್ರತೀ ಓದುಗರಿಗೆ ಅನಿಸುತ್ತಿತ್ತು.

ತೇಜಸ್ವಿ ಇಲ್ಲವಾಗಿ ಹೋದಾಗ ಹರಿದಾಡಿದ ರಾಶಿ ರಾಶಿ ಮೆಸೇಜ್ ಗಳು, ಈ- ಮೇಲ್ ಗಳು ನನ್ನನ್ನು ಇನ್ನೂ ವಿಸ್ಮಯಕ್ಕೆ ತಳ್ಳಿದೆ.

ಹಾಗಾಗಿಯೇ ತೇಜಸ್ವಿ ಇಲ್ಲವಾದ ಆ ದಿನ ಇಡೀ ನಮ್ಮ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟುಬಿಟ್ಟೆ.

ತಕ್ಷಣ ಫೋನ್ ಬಂತು ‘ಯಾಕೆ ಇವತ್ತು ಜಗತ್ತಿನಲ್ಲಿ ಇನ್ನೇನೂ ಘಟಿಸಲೇ ಇಲ್ಲವಾ’ ಅಂತ. ನಾನು ಒಂದು ಕ್ಷಣ ಮೌನವಾಗಿದ್ದು ಹೇಳಿದೆ ‘ಇಲ್ಲ ಕನ್ನಡದ ಲೋಕದ ಮಟ್ಟಿಗಂತೂ ಇವತ್ತು ಇನ್ನೇನೂ ಕಾಣಲು ಸಾಧ್ಯವಿಲ್ಲ’.

ತೇಜಸ್ವಿ ನನ್ನೊಳಗೆ ಒಂದು ಅಗಾಧ ನಿಟ್ಟುಸಿರನ್ನು ಬಿಟ್ಟು ಹೋದರು

ಈಗಲೂ ಅಷ್ಟೇ ಈಟಿವಿಯ ಬುಲೆಟಿನ್ ಗಳನ್ನ ತಿರುವಿ ಹಾಕುತ್ತಾ ಕುಳಿತರೆ ಕಣ್ಣು ಮಂಜಾಗುತ್ತದೆ. ನಮ್ಮ ಮನೆಯ ನೆಂಟನೊಬ್ಬ ಎದ್ದು ಹೋಗಿಬಿಟ್ಟರೇನೋ ಎಂಬಂತೆ.

ಇದೇ ನನಗೆ ತೇಜಸ್ವಿಯವರ ಬೆನ್ನು ಬೀಳಲು ಒತ್ತಾಸೆಯಾಯಿತೇನೋ. ಆ ವೇಳೆಗೆ ಪಿ ಮಹಮದ್ ತೇಜಸ್ವಿಯವರ ಕ್ಯಾರಿಕೇಚರ್ ಒಂದನ್ನು ಬರೆದಿದ್ದರು ಬಹುಷಃ ತೇಜಸ್ವಿಯವರ ಎಲ್ಲಾ ‘ಹುಚ್ಚಾಟ’ವನ್ನೂ ಕಟ್ಟಿಕೊಡುವ ಚಿತ್ರ ಅದು.

ಅದನ್ನಿಟ್ಟುಕೊಂಡು ತೇಜಸ್ವಿ ಗ್ರೀಟಿಂಗ್ ಕಾರ್ಡ್, ತೇಜಸ್ವಿ ಚಹಾ ಕಪ್, ಓದುವ ಕೋಣೆಗೆಂದೇ ಟೈಲ್ ಗಳನ್ನೂ ರೂಪಿಸಿದೆವು. ಅದನ್ನು ಬಿಡುಗಡೆ ಮಾಡಲು ಬಂದಿದ್ದ ಜಯಂತ್ ಕಾಯ್ಕಿಣಿ ‘ತೇಜಸ್ವಿ ಏನಾದರೂ ಇದನ್ನು ನೋಡಿದ್ದರೆ ನನಗೆ ಎಂತಾ ಸ್ಥಿತಿ ತಂದ್ಯಲ್ಲಪ್ಪಾ ಎಂದು ಗಹಗಹಿಸಿ ನಗುತ್ತಿದ್ದರು’ ಎಂದರು.

ತೇಜಸ್ವಿ ಗುಂಗು ನನ್ನನ್ನು ಖಂಡಿತಾ ಬಿಟ್ಟಿಲ್ಲ. ಹಾಗಾಗಿಯೇ ಆ ನಂತರವೂ ‘ಸಮಯ’ ಚಾನಲ್ ಗಾಗಿ ‘ಹಾಯ್ ತೇಜಸ್ವಿ’ ರೂಪಿಸಿದ್ದಾಯ್ತು.

ತೇಜಸ್ವಿಯವರ ಜೊತೆ ಒಡನಾಡಿದವರ ಕಣ್ಣುಗಳ ಮೂಲಕ ತೇಜಸ್ವಿಯವರನ್ನು ಕಟ್ಟಿಕೊಡುವ ಪ್ರಯತ್ನ ಅದು. ತೇಜಸ್ವಿ ಇನ್ ಲವ್, ಸ್ಕೂಟರ್ ಮೆಕ್ಯಾನಿಕ್ ತೇಜಸ್ವಿ, ಹಂಟಿಂಗ್ ವಿಥ್ ತೇಜಸ್ವಿ, ಇದು ತೇಜಸ್ವಿ ಮದುವೆ, ಫಿಶಿಂಗ್ ವಿಥ್ ತೇಜಸ್ವಿ ಹೀಗೆ ತೇಜಸ್ವಿಯ ಮಾಯಾ ಲೋಕವನ್ನು ಬಿಚ್ಚಿಡುತ್ತಾ ಸಾಗಿದೆವು.

ಇಷ್ಟಾದರೂ ತೇಜಸ್ವಿ ನನ್ನೊಳಗೆ ಭೋರ್ಗರೆಯುತ್ತಲೇ ಇದ್ದಾರೆ.

ತೇಜಸ್ವಿ ಇಲ್ಲ ಎನ್ನುವ ಸುದ್ದಿಯನ್ನು ನಾವು ಬಿತ್ತರಿಸುತ್ತಿದ್ದಂತೆ ಸವಿತಾ ನಾಗಭೂಷಣ-
‘ಎಲ್ಲೋ ಅಲ್ಲೇ ಇರುವಂತಿದೆ ಕಾಡಿನೊಳಗೆ ಜೀವ
ಗಿಳಿ ಗೊರವಂಕ ಮರಕುತಿಟಿಗ ಒಯ್ದು ನೀಡಿರೇ ಕಂಬನಿ ಹೂವ’ ಎನ್ನುವ ಮೆಸೇಜ್ ಕಳಿಸಿದರು.

ಮತ್ತೆ ತೇಜಸ್ವಿ ನನ್ನೊಳಗಾಡಿದರು..


ಫೋಟೋ: fb/tejasviniruttara

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?