ತುಮಕೂರ್ ಲೈವ್

ಕಿಸಾನ್ ಸನ್ಮಾನ್ ಹಣ ಬಿಡುಗಡೆ ಮಾಡಲಿರುವ ನರೇಂದ್ರ ಮೋದಿ

ತುಮಕೂರು: ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಇದುವರೆಗೆ ಮೂರು ಕಂತುಗಳಲ್ಲಿ ರೈತರಿಗೆ ಹಣವನ್ನು ಬಿಡುಗಡೆ ಮಾಡಿದೆ. ಜನವರಿ 2ರಂದು ತುಮಕೂರಿನ ಸರ್ಕಾರಿ ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ ನಾಲ್ಕನೆ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸುವರು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರೈತರ ಸಮಾವೇಶ ನಡೆಯುವ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ವಾರ್ಷಿಕ ಆರು ಸಾವಿರ ರೂಪಾಯಿ ನೀಡಿದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಿದೆ. ಇದರಿಂದ ಪ್ರತಿಯೊಬ್ಬ ರೈತರಿಗೆ ವರ್ಷಕ್ಕೆ 10 ಸಾವಿರ ರೂಪಾಯಿ ದೊರೆಯಲಿದೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಧಾನಿ ಮೋದಿ ಪ್ರಶಸ್ತಿ ವಿತರಿಸುವರು. ದೇಶದ ಆರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಿರುವ 42 ಮಂದಿ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಜನವರಿ 3ರಂದು ಜಿಕೆವಿಕೆ ಆವರಣದಲ್ಲಿ ಕೃಷಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆ ಸಮಾವೇಶದಲ್ಲೂ ಪ್ರಧಾನಿ ಭಾಗಿಯಾಗಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂಮೊದಲು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಲಿರುವ ಪ್ರಧಾನಿ ಸುಮಾರು ಒಂದೂವರೆ ಗಂಟೆ ಕಾಲ ಮಠದಲ್ಲಿ ಕಾಲ ಕಳೆಯಲಿದ್ದಾರೆ. ಇದೇ ವೇಳೆ ಧ್ಯಾನಮಂದಿರಲ್ಲಿ ಧ್ಯಾನ ಮಾಡುವರು ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಮಾತನಾಡಿ, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡುವ ಸಂಬಂಧ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಲಿದ್ದಾರೆ. ಈಗ ನಾವು ಏನನ್ನೂ ಹೇಳಲು ಬರುವುದಿಲ್ಲ. ಆದರೆ ಶಿವಕುಮಾರ ಶ್ರೀಗಳು ಭಾರತ ರತ್ನ ಪ್ರಶಸ್ತಿಗಿಂತ ದೊಡ್ಡವರು. ಅವರ ಸೇವೆ ಪ್ರಶಸ್ತಿಗೂ ಮಿಗಿಲು. ಭಾರತರತ್ನ ಪ್ರಶಸ್ತಿ ಕುರಿತು ನಾವು ಏನನ್ನೂ ಕೇಳುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

Comment here